ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಮುಂದುವರಿಕೆ ಇಲ್ಲ: ಬಿಎಸ್‌ವೈ

ಕಠಿಣ ಕ್ರಮಗಳ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸೂಚನೆ
Last Updated 17 ಜುಲೈ 2020, 8:42 IST
ಅಕ್ಷರ ಗಾತ್ರ

ಬೆಂಗಳೂರು:ಲಾಕ್‌ಡೌನ್‌ ಮುಂದುವರೆಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿ ವಹಿಸಿರುವ ಸಚಿವರ ಸಭೆ ನಡೆಸಿದ ಅವರು,ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಂದಿಗೆ ಸಭೆ ನಡೆಸಿ, ಕೋವಿಡ್‌ ಹಾಗೂ ಕೋವಿಡೇತರ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ದೊರಕುವುದನ್ನು ಖಾತರಿ ಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ರೋಗಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದೇ, ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಅಥವಾ ಹೋಂ ಕ್ವಾರಂಟೈನ್‌ಗೆ ಒಳಪಡಿಸಬೇಕು. ಈ ಮೂಲಕ ತೀವ್ರ ರೋಗಲಕ್ಷಣದಿಂದ ಬಳಲುತ್ತಿರುವ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಂತೆಯೂ ಅವರು ಸೂಚಿಸಿದರು.

ಆಸ್ಪತ್ರೆಗಳಲ್ಲಿ ಮೃತರಾದವರಿಗೆ ರ್‍ಯಾಪಿಡ್‌ ಆಂಟಿನ್‌ ಪರೀಕ್ಷೆ ನಡೆಸಿ ಶವವನ್ನು ಕೂಡಲೇ ಹಸ್ತಾಂತರಿಸಬೇಕು. ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಕ್ರಮವಹಿಸಬೇಕು. ಮನೆಗಳಲ್ಲಿ ಮೃತರಾದವರಿಗೂ ರ್‍ಯಾಪಿಡ್‌ ಆಂಟಿಜನ್ ಟೆಸ್ಟ್‌ ನಡೆಸಿ ಮೃತ ದೇಹವನ್ನು ತುರ್ತಾಗಿ ಅಂತ್ಯಕ್ರಿಯೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ವೈದ್ಯರ ಕೊರತೆ ನಿವಾರಿಸಲು ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಾರ್ಡಿನಲ್ಲೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ ಮತ್ತು ಆಂಬುಲೆನ್ಸ್‌ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಬೆಡ್‌ ನೀಡದೇ ಇದ್ದರೆ ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗು ನೋಡಲ್ ಅಧಿಕಾರಗಳ ನೇಮಕ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಪ್ರತಿ ವಾರ್ಡುಗಳಲ್ಲಿ ಕಲ್ಯಾಣ ಮಂಟಪಗಳು ಹಾಗು ವಸತಿ ಗೃಹಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕವಾಗಿ ವಾಸಿಸಲು ಕೊಠಡಿಗಳು ಇಲ್ಲದವರಿಗೆ ಕ್ವಾರಂಟೈನ್ ಮಾಡಲು ಈ ಕಲ್ಯಾಣ ಮಂಟಪಗಳನ್ನು ಬಳಸುವಂತೆಯೂ ಸೂಚಿಸಿದರು.

ಪ್ರಮುಖ ಅಂಶಗಳು

–ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ನಿರ್ದೇಶನ

–ಜನ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವ ಸಾಧ್ಯತೆಗಳಿರುವ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು.

–ಪರೀಕ್ಷೆಯ ಫಲಿತಾಂಶ ದೊರೆತ ಎರಡು ಗಂಟೆಗಳೊಳಗೆ ಹಾಸಿಗೆ ಹಂಚಿಕೆ ಮಾಡಿ, ಅಂಬ್ಯುಲೆನ್ಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ರಮ ವಹಿಸಬೇಕು. ಈ ವ್ಯವಸ್ಥೆಯನ್ನು ವೀಕೇಂದ್ರೀಕರಿಸಿ, ವಲಯವಾರು, ಮೇಲ್ವಿಚಾರಣೆ ನಡೆಸಬೇಕು.

–ರೋಗ ಲಕ್ಷಣ ಇರುವ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು. ರೋಗಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT