ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರು ಕಾಪಾಡಬೇಕು’ ಎಂಬ ಶ್ರೀರಾಮುಲು ಹೇಳಿಕೆಗೆ ಕಾಂಗ್ರೆಸ್‌ ಗರಂ

ಸರ್ಕಾರವನ್ನು ಪೇಚಿಗೆ ಸಿಲುಕಿಸಿದ ಹೇಳಿಕೆ - ರಾಜೀನಾಮೆಗೆ ಒತ್ತಾಯಿಸಿದ ಡಿ.ಕೆ.ಶಿವಕುಮಾರ್‌
Last Updated 16 ಜುಲೈ 2020, 17:33 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡುವ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಜನರ ಸಹಕಾರ ಬೇಕು ಮತ್ತು ದೇವರು ಕಾಪಾಡಬೇಕು ಎಂದು ನೀಡಿರುವ ಹೇಳಿಕೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಬಿಜೆಪಿ ಸರ್ಕಾರಕ್ಕೆ ಕೋವಿಡ್‌ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ಕೊಟ್ಟು ಹೋಗಲಿ. ರಾಜ್ಯಪಾಲರ ಆಡಳಿತ ಹೇರಲಿ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಒತ್ತಾಯಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣಬೈರೇಗೌಡ ಅವರೂ ಧ್ವನಿಗೂಡಿಸಿದ್ದಾರೆ.

ಶ್ರೀರಾಮುಲು ಹೇಳಿದ್ದು: ‘ಕೋವಿಡ್‌ ನಿಯಂತ್ರಿಸಲು ನಮ್ಮ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ನಗರ ಸೇರಿ 4–5 ಜಿಲ್ಲೆಗಳಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಮಾಡಿದ್ದೇವೆ. ಜನ ಸಹಕಾರ ನೀಡಬೇಕು ಮತ್ತು ದೇವರು ಕಾಪಾಡಬೇಕು ಎಂದು ಹೇಳಿದ್ದೆ. ಅದನ್ನು ಕೆಲವು ಮಾಧ್ಯಮಗಳು ದೇವರೇ ಬಂದು ಕಾಪಾಡಬೇಕು ಎಂಬ ಅರ್ಥದಲ್ಲಿ ಹೇಳಿದ್ದಾಗಿ ವ್ಯಾಖ್ಯಾನಿಸಿವೆ. ಇದು ಸತ್ಯಕ್ಕೆ ದೂರ’ ಎಂದು ಶ್ರೀರಾಮು ತಿಳಿಸಿದ್ದಾರೆ.

ದೇವರು ಕಾಪಾಡಲಿ ಎಂದು ಹೇಳುವುದರಲ್ಲಿ ತಪ್ಪೇನಿದೆ? ಒಂದು ವೇಳೆ ವ್ಯಾಕ್ಸಿನ್‌ ಕಂಡುಹಿಡಿದರೂ ದೇವರ ಕೃಪೆಯೂ ಬೇಕು. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ ಎಂದು ರಾಮುಲು ಟ್ವೀಟ್‌ ಮಾಡಿದ್ದಾರೆ.

ತಲ್ಲಣಗೊಳಿಸಿದ ಹೇಳಿಕೆ
ಸಚಿವರ ಹೇಳಿಕೆಯಿಂದ ರಾಜ್ಯ ತಲ್ಲಣಗೊಂಡಿದೆ. ಇವರಿಗೆ ಅಧಿಕಾರ ಬೇಕು ಎಂದು ವಾಮಮಾರ್ಗ ಹಿಡಿದರು. ನಿಮ್ಮಿಂದ ಕೋವಿಡ್‌ ನಿರ್ವಹಣೆ ಮಾಡಲು ಸಾಧ್ಯವಾಗದೇ ಇದ್ದರೆ, ಸರ್ಕಾರ ರಾಜೀನಾಮೆ ಕೊಡಬೇಕು. ಒಂದು ಕ್ಷಣದಲ್ಲೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸರ್ಕಾರ ನಡೆಸುವವರು ದೇವರ ಕಥೆಯನ್ನು ಹೇಳುವುದು ಬಿಡಬೇಕು. ನಿಮಗೆ ಜನರ ಜೀವ ರಕ್ಷಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಅದು ಸಾಧ್ಯವಾಗದೇ ಇದ್ದರೆ, ಅಧಿಕಾರದಲ್ಲಿ ಏಕೆ ಇರಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ‘ಅಧಿಕಾರ ನಡೆಸುವುದೆಂದರೆ ವಕ್ರ ಮಾರ್ಗದಲ್ಲಿ ಆಡಳಿತ ಕಸಿದುಕೊಂಡಷ್ಟು ಸುಲಭವಲ್ಲ. ಕೋವಿಡ್‌ ದುರಂತದ ಸಂದರ್ಭದಲ್ಲಿ ಹಣ ಸಂಪಾದಿಸಲು ಅಧಿಕಾರದಲ್ಲಿದ್ದೀರಾ? ನೀವು ಅಸಮರ್ಥರು ಎಂಬುದು ಈಗ ಮನವರಿಕೆ ಆಯಿತೇ’ ಎಂದು ಹೇಳಿದ್ದಾರೆ.

ಅಧಿಕಾರದಲ್ಲಿ ಏಕಿದ್ದೀರಿ?
ಕೊರೊನಾ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕಿದ್ದೀರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT