ಬುಧವಾರ, ಆಗಸ್ಟ್ 4, 2021
23 °C

ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರ ಆರೋಪ: ವಿಚಾರಣೆಗೆ ಒಪ್ಪಿಗೆ ಕೇಳಿದ ಎಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಡ್ರಗ್ಸ್‌ ಮತ್ತು ಲಾಜಿಸ್ಟಿಕ್‌ ಸಂಸ್ಥೆ ಮೂಲಕ ಖರೀದಿಸಲಾಗಿರುವ ಪಿಪಿಇ ಕಿಟ್‌, ವೆಂಟಿಲೇಟರ್, ಸ್ಯಾನಿಟೈಸರ್‌ ಮತ್ತಿತರ ವೈದ್ಯಕೀಯ ಉಪಕರಣಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರ ವಿಚಾರಣೆಗೆ ಅನುಮತಿ ನೀಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸರ್ಕಾರಕ್ಕೆ ಪತ್ರ ಬರೆದಿದೆ.

ವೈದ್ಯಕೀಯ ಉಪಕರಣಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಆಯುಕ್ತಾಲಯದ ಉಪ ಆಯುಕ್ತರಾಗಿರುವ ಡಾ. ಪ್ರಿಯಲತಾ ಹಾಗೂ ಡಾ. ಲತಾ ಪ್ರಮೀಳಾ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಎಸಿಬಿ ಸರ್ಕಾರಕ್ಕೆ ಪತ್ರ ಬರೆದು ತಿಂಗಳೇ ಕಳೆದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಎಸಿಬಿ ಅಧಿಕಾರಿಗಳು ಜೂನ್‌ 2ರಂದು ಪತ್ರ ಬರೆದಿದ್ದಾರೆ. ಅವ್ಯವಹಾರದ ಬಗ್ಗೆ  ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಎಸಿಬಿ ಪತ್ರವನ್ನು ಸರ್ಕಾರ ಕಡೆಗಣಿಸಿರುವುದು ಅನುಮಾನಗಳಿಗೆ ಎಡೆಮಾಡಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಿಯಲತಾ, ಲತಾ ಪ್ರಮೀಳಾ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ‘ಕರ್ನಾಟಕ ರಾಷ್ಟ್ರ ಸಮಿತಿ’ ಪ್ರಧಾನ ಕಾರ್ಯದರ್ಶಿ ಸಿ.ಎನ್‌. ದೀಪಕ್‌ ಎಸಿಬಿಗೆ ಮೇ 12ರಂದು ದೂರು ನೀಡಿದ್ದರು.

ಮಹಾರಾಷ್ಟ್ರದ ‘ಪ್ಲ್ಯಾಸ್ಟಿ ಸರ್ಜಿ ಇಂಡಸ್ಟ್ರೀಸ್‌’ ಮೂಲಕ ಖರೀದಿಸಲಾಗಿದೆ ಎನ್ನಲಾದ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ದೂರಿನ ನಂತರ ಅವುಗಳ ಬಳಕೆಯನ್ನು ತಡೆ ಹಿಡಿಯಲಾಯಿತು. ಈ ಸಂಸ್ಥೆ ಮೂಲಕ ಎರಡು ಸಲ ಕಿಟ್‌ ಖರೀದಿಸಲಾಗಿದ್ದು, ಎರಡು ಖರೀದಿಗಳ ನಡುವಿನ ಬೆಲೆಯಲ್ಲಿ ಭಾರಿ ಅಂತರವಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು