ಗುರುವಾರ , ಜುಲೈ 29, 2021
21 °C
ಕಲಬುರ್ಗಿ ಜಿಲ್ಲೆಯಲ್ಲಿ ಮೈದುಂಬಿಕೊಂಡ ನದಿಗಳು, ದಕ್ಷಿಣ ಕನ್ನಡದಲ್ಲಿ ವ್ಯಕ್ತಿ ಸಾವು

ರಾಜ್ಯದ ಹಲವೆಡೆ ವರುಣನ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಧಾರಾಕಾರ ಮಳೆ ಆಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ನದಿಗಳು ಮೈದುಂಬಿಕೊಂಡಿವೆ. ಕೆಲವು ಕಡೆ ಸೇತುವೆಗಳು ಜಲಾವೃತಗೊಂಡಿವೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಕೆಲಂದೂರಿನಲ್ಲಿ ಕೆರೆಯ ಪಕ್ಕದಲ್ಲಿ ಹುಲ್ಲು ಕೊಯ್ಯುತ್ತಿದ್ದ ಗಣಪತಿ ಭಟ್‌ (56) ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ಭೀಮಾ, ಕಾಗಿಣಾ, ಕಮಲಾವತಿ ನದಿಗಳು ಮೈದುಂಬಿಕೊಂಡಿದ್ದು, ಹಳ್ಳ–ನಾಲಾಗಳು ತುಂಬಿ ಹರಿಯುತ್ತಿವೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಮಳೆ 24 ಗಂಟೆಗಳ ಅವಧಿಯಲ್ಲಿ ಕಲಬುರ್ಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ 13.2 ಸೆಂಟಿ ಮೀಟರ್‌, ಕಲಬುರ್ಗಿ ನಗರದಲ್ಲಿ 11 ಸೆಂ.ಮೀ., ಯಾದಗಿರಿಯಲ್ಲಿ 12.9 ಸೆಂ.ಮೀ. ದಾಖಲಾಗಿದೆ.

ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ ಭರ್ತಿಯಾಗುವ ಹಂತ ತಲುಪಿದೆ. ನಾಗರಾಳ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಟ್ಟಿದ್ದರಿಂದ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯ ಜಲಾವೃತವಾಗಿದೆ. ಈ ದೇವಾಲಯದಲ್ಲಿ ಸಿಲುಕಿದ್ದ ಇಬ್ಬರು ಹಾಗೂ ಚಂದಾಪುರದ ಹನುಮಾನ ಮಂದಿರದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ. ಚಿತ್ತಾಪುರ ತಾಲ್ಲೂಕು ದಂಡೋತಿ ಹತ್ತಿರ ಕಾಗಿಣಾ ನದಿಗೆ ನಿರ್ಮಿಸಿರುವ ಸೇತುವೆ ಮುಳುಗಡೆ ಹಂತ ತಲುಪಿದ್ದು, ಚಿತ್ತಾಪುರ–ಕಲಬುರ್ಗಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಕಮಲಾಪುರ ತಾಲ್ಲೂಕಿನ ಕುದಮೂಡ ಗ್ರಾಮದ ಪಕ್ಕದ ಎರಡೂ ಹಳ್ಳಗಳಲ್ಲಿ ಪ್ರವಾಹ ಉಂಟಾಗಿ ಸಂಪರ್ಕ ಕಡಿತಗೊಂಡಿತ್ತು. ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಒಂದು ಕುರಿ ಸತ್ತಿದೆ. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. 500ಕ್ಕೂ ಹೆಚ್ಚು ಎಕರೆ ಬೆಳೆ ಹಾನಿಯಾಗಿದೆ.

ಬೀದರ್‌ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಪಲ್ಲಿ ಗ್ರಾಮಕ್ಕೆ ಹೋಗುವ ಸೇತುವೆ ಮೇಲೆ ನೀರು ಹರಿದಿದ್ದರಿಂದ ಕೆಲಹೊತ್ತು ಸಂಚಾರ ಸ್ಥಗಿತವಾಗಿತ್ತು. ಈ ವೇಳೆ ಬೈಕ್‌ನಲ್ಲಿ ಹೊರಟಿದ್ದ ಮೂವರು ನೀರಿನ ರಭಸಕ್ಕೆ ಕೆಳಗೆ ಬಿದ್ದರು. ಅವರಲ್ಲಿ ಕೊಚ್ಚಿಹೋಗುತ್ತಿದ್ದ ಗಂಗಾಧರ ಎಂಬುವವರನ್ನು ಸ್ಥಳದಲ್ಲಿದ್ದ ರೈತರು ರಕ್ಷಿಸಿದ್ದಾರೆ.

ಎರಡು ಮನೆಗಳು ನೆಲಸಮ: ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೊಟಬಾಗಿ ಗ್ರಾಮದಲ್ಲಿ ಕೂಲಿಕಾರ್ಮಿಕರ ಎರಡು ಮನೆಗಳು ನೆಲಸಮವಾಗಿವೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದ ಮುಳುಗು ಸೇತುವೆ ಜಲಾವೃತಗೊಂಡಿದೆ. ಉಳ್ಳಾಲ ಹಳೇಕೋಟೆ ಬಳಿ ಗುಡ್ಡ ಕುಸಿದಿದ್ದು, ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದ ಮೂರು ಕುಟುಂಬಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ– ಕುದುರೆಮುಖ ಮಾರ್ಗದ ಬೇಡಕ್ಕಿ ಬಳಿ ಮಣ್ಣು ರಸ್ತೆಗೆ ಕುಸಿದಿದೆ.

ಕೊಡಗಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕಾವೇರಿ ನದಿಯಲ್ಲೂ ನೀರಿನಮಟ್ಟ ಏರಿಕೆಯಾಗಿದೆ. ಮೈಸೂರಿನಲ್ಲಿ ಬಿರುಸಿನ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೋರು, ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಕರಾವಳಿ ಜಿಲ್ಲೆಗಳಲ್ಲಿ ಜುಲೈ 19 ಮತ್ತು 20ರಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗಗಳಲ್ಲಿ ಐದು ದಿನಗಳವರೆಗೆ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆ ಇರುವುದರಿಂದ ಮೂರೂ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಎಚ್ಚರಿಕೆ: ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 3.2 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ವಿಜಯಪುರ, ಕಲಬುರ್ಗಿ, ಹಾವೇರಿ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಮಳೆ-ಎಲ್ಲಿ, ಎಷ್ಟು?: ಆಗುಂಬೆಯಲ್ಲಿ ಗರಿಷ್ಠ 14 ಸೆಂ.ಮೀ ಮಳೆಯಾಗಿದೆ. ಕಲಬುರ್ಗಿ 11, ಕಾರ್ಕಳ 10, ಉಡುಪಿ 9, ಕುಂದಾಪುರ, ಭಾಗಮಂಡಲ 8, ಮಂಗಳೂರು, ಮಡಿಕೇರಿ 7, ಬೆಳ್ತಂಗಡಿ, ಮೂಡುಬಿದಿರೆ, ಭಟ್ಕಳ, ರಾಯಚೂರು, ಆಳಂದ, ಹೊಸನಗರ 6, ಮುದ್ದೇಬಿಹಾಳ, ತೀರ್ಥಹಳ್ಳಿ 5, ವಿಜಯಪುರ, ಚಿಂಚೋಳಿ 4, ಸೊರಬ, ವಿರಾಜಪೇಟೆ 3, ನಿಪ್ಪಾಣಿ, ಚಿಕ್ಕೋಡಿ, ಚಿಂತಾಮಣಿ, ಸಿಂಧನೂರು 2, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಾಲೂರು, ಪಾಂಡವಪುರ, ಅಥಣಿ, ಬೈಲಹೊಂಗಲ, ಹಾಸನ, ಕನಕಪುರ ಹಾಗೂ ಹುಣಸೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು