ಬುಧವಾರ, ಜುಲೈ 28, 2021
29 °C

ಸ್ಮಶಾನದಿಂದ ಹೊಸ ಕಾರಿಗೆ ಚಾಲನೆ ನೀಡಿದ ಶಾಸಕ ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹೊಸ ವಾಹನ ಖರೀದಿಸಿದಾಗ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿ, ಚಾಲನೆ ನೀಡುವುದು ಸಾಮಾನ್ಯ. ಇದಕ್ಕೆ ವಿರುದ್ಧವಾಗಿ ಶಾಸಕ ಸತೀಶ ಜಾರಕಿಹೊಳಿ ಅವರು ತಾವು ಖರೀದಿಸಿದ ಹೊಸ ಫಾರ್ಚೂನ್‌ ಕಾರನ್ನು ಇಲ್ಲಿನ ಸದಾಶಿವನಗರದ ಸ್ಮಶಾನದಿಂದ ಚಾಲನೆ ನೀಡಿದ್ದಾರೆ. 

ಮಾನವ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಕೂಡ ಸಾಕ್ಷಿಯಾಗಿದ್ದರು. ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ದೇವರು, ಧರ್ಮ, ವಾರ, ತಿಥಿ ಹೆಸರಿನಲ್ಲಿ ಜನರು ಕತ್ತಲಿನ ಕಡೆ ಹೋಗಬಾರದು. ಆತ್ಮಸ್ಥೈರ್ಯದಿಂದ ಬದುಕುವುದನ್ನು ಕಲಿಯಬೇಕು ಎನ್ನುವ ಸಂದೇಶವನ್ನು ಸತೀಶ ಜಾರಕಿಹೊಳಿ ಈ ಮೂಲಕ ನೀಡಿದ್ದಾರೆ’ ಎಂದರು. 

‘ಹಾಗಂತ, ಇನ್ಯಾವುದರ ವಿರುದ್ಧ ಏನೇನೋ ಮಾಡುತ್ತಿದ್ದಾರೆ ಎಂದು ಅನ್ಯಥಾ ಭಾವಿಸದೇ ಸಕಾರಾತ್ಮಕವಾಗಿ ವಿಚಾರ ಮಾಡಿ. ನಮ್ಮ ಕಳಕಳಿ ಬಗ್ಗೆ ಆಲೋಚನೆ ಮಾಡಿ. ವಿಚಾರ ಕ್ರಾಂತಿಯ ಹಣತೆಯನ್ನು ಹಚ್ಚಿದ್ದೇವೆ. ಇದು ಇನ್ನಷ್ಟು ಬೆಳೆದು, ಇದರ ಬೆಳಕು ಎಲ್ಲೆಡೆ ಪಸರಿಸಲಿ’ ಎಂದು ಆಶಿಸಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಮಹಾರಾಜ, ಚಿಕ್ಕಲದಿನ್ನಿಯ ಅದೃಶ್ಯ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ಶಿವಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ,  ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು