ಗುರುವಾರ , ಏಪ್ರಿಲ್ 2, 2020
19 °C
ಸಿಎಎ ಪರ–ವಿರುದ್ಧದ ಸಂಘರ್ಷ: 180ಕ್ಕೂ ಹೆಚ್ಚು ಮಂದಿಗೆ ಗಾಯ: ಕಂಡಲ್ಲಿ ಗುಂಡು ಆದೇಶ

ದೆಹಲಿ ದಳ್ಳುರಿ: 13 ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದ ಕೆಲವು ಭಾಗಗಳಲ್ಲಿ ಮಂಗಳವಾರ ಮತ್ತಷ್ಟು ಹಿಂಸಾಚಾರ ನಡೆದಿದೆ. ಗಲಭೆಕೋರ ಗುಂಪುಗಳು ಮನಸೋ ಇಚ್ಛೆ ಗುಂಡು ಹಾರಿಸಿವೆ, ಕಲ್ಲು ತೂರಾಟ ನಡೆಸಿವೆ ಮತ್ತು ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿವೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ–ವಿರುದ್ಧದ ಪ್ರತಿಭಟನೆಯು ಸೋಮವಾರವೇ ಕೋಮು ಸಂಘರ್ಷಕ್ಕೆ ತಿರುಗಿತ್ತು. ಅದು ಮಂಗಳವಾರವೂ ಮುಂದುವರಿದು ಮತ್ತೆ ಆರು ಮಂದಿಯ ಹತ್ಯೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 13ಕ್ಕೆ ಏರಿದೆ. 

ಚಾಂದ್‌ಬಾಗ್‌ ಮತ್ತು ಭಜನ್‌ಪುರದಂತಹ ಕೆಲವು ಪ್ರದೇಶಗಳು ದೆಹಲಿಯ ಇತರ ಭಾಗಗಳ ಜತೆಗಿನ ಸಂಪರ್ಕವನ್ನು ಕಡಿದುಕೊಂಡಿವೆ. ಉನ್ಮತ್ತ ಗುಂಪುಗಳು ಗೋಕಲ್‌ಪುರಿಯಲ್ಲಿ ಎರಡು ಅಗ್ನಿಶಾಮಕ ಯಂತ್ರಗಳಿಗೆ ಬೆಂಕಿ ಹಚ್ಚಿವೆ. ಸಂಘರ್ಷದ ಕೇಂದ್ರವಾಗಿದ್ದ ಮೌಜ್‌ಪುರ ಮತ್ತು ಇತರ ಪ್ರದೇಶಗಳಲ್ಲಿ ಹಣ್ಣಿನ ಗಾಡಿಗಳು, ರಿಕ್ಷಾಗಳು ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಗರದಲ್ಲಿ ಇದ್ದ ಕಾರಣ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಕಲ್ಲು, ಕಬ್ಬಿಣದ ರಾಡ್‌ಗಳು, ಖಡ್ಗಗಳನ್ನು ಹಿಡಿದಿದ್ದ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಷೆಲ್‌ಗಳನ್ನು ಸಿಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಅರೆಸೇನಾ ಪಡೆಯ ಸಿಬ್ಬಂದಿ ನೆರವಾದರು. ‘ಕಂಡಲ್ಲಿ ಗುಂಡು’ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರೆಸುಟ್ಟ ವಾಹನಗಳು, ಟೈರ್‌ಗಳು, ಚೆಲ್ಲಾಡಿದ್ದ ಕಲ್ಲುಗಳು ಸೋಮವಾರ ನಡೆದ ಹಿಂಸಾಚಾರ ಮತ್ತು ರಕ್ತಪಾತಕ್ಕೆ ಮೂಕಸಾಕ್ಷಿಗಳಾಗಿ ಹಲವು ಬೀದಿಗಳಲ್ಲಿ ಬಿದ್ದಿದ್ದವು. 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 48 ಪೊಲೀಸ್‌ ಸಿಬ್ಬಂದಿಯೂ ಸೇರಿದ್ದಾರೆ. 

ಕನಿಷ್ಠ 35 ಮಂದಿಯನ್ನು ಮಂಗಳ ವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಗುಂಡೇಟಿನ ಗಾಯಗಳಾಗಿದ್ದವು ಎಂದು ಜಿ.ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. 

ಶಾಲೆಗಳು ಮುಚ್ಚಿವೆ. ಭೀತಿಗೊಂಡಿರುವ ನಿವಾಸಿಗಳು ಮನೆಯೊಳಗೇ ಉಳಿದಿದ್ದಾರೆ. ಆದರೆ, ದುಷ್ಕರ್ಮಿಗಳ ಗುಂಪುಗಳು ಮಾತ್ರ ಬೀದಿಗಳಲ್ಲಿ ಅಲೆದಾಡಿವೆ. ‘ಈ ಪ್ರದೇಶದಲ್ಲಿ ಪೊಲೀಸರ ಸುಳಿವೇ ಇರಲಿಲ್ಲ. ದಂಗೆ ಕೋರರು ಮಾತ್ರ ಜನರನ್ನು ಬೆದರಿಸುತ್ತಾ ಓಡಾಡುತ್ತಿದ್ದರು. ನಮ್ಮದೇ ಮನೆಯಲ್ಲಿ ನಾವು ಅಸುರಕ್ಷಿತರಾಗಿದ್ದೇವೆ. ಜನರನ್ನು ಇಲ್ಲಿಂದ ತೆರವು ಮಾಡಬೇಕಿದೆ’ ಎಂದು ಮೌಜ್‌ಪುರದ ನಿವಾಸಿಯೊಬ್ಬರು ಹೇಳಿದ್ದಾರೆ. 

35 ವರ್ಷಗಳಲ್ಲಿ ಇಂತಹ ಸ್ಥಿತಿ ಇದೇ ಮೊದಲು. 1984ರ ಸಿಖ್‌ ವಿರೋಧಿ ಗಲಭೆಯ ಬಳಿಕ ಇಂತಹ ಪರಿಸ್ಥಿತಿ ನೋಡಿಲ್ಲ. ಈ ಪ್ರದೇಶವು ಸದಾ ಶಾಂತವಾಗಿಯೇ ಇತ್ತು ಎಂದೂ ಅವರು ಹೇಳಿದ್ದಾರೆ. 

ಸಿಎಎ ವಿರುದ್ಧ ಜಾಫರಾಬಾದ್‌ ಮೆಟ್ರೊ ನಿಲ್ದಾಣದ ಹೊರಗೆ ಶನಿವಾರ ಸಂಜೆಯಿಂದ ಪ್ರತಿಭಟನೆ ನಡೆಸುತ್ತಿದ್ದವರು ಈ ಸ್ಥಳವನ್ನು ತೆರವು ಮಾಡಿದ್ದಾರೆ. ಹಾಗಾಗಿ, ಸಂಘರ್ಷ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವನೆ ಉಂಟಾಗಿದೆ. ಕೇಂದ್ರ ಮೀಸಲು ಪೊಲೀಸ್‌ ‍ಪಡೆಗೆ ನಿಯೋಜನೆಗೊಂಡಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಎಸ್‌.ಎನ್‌. ಶ್ರೀವಾತ್ಸವ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ. 

ಗಾಯಗೊಂಡವರನ್ನು ಭೇಟಿಯಾಗಿದ್ದೇನೆ. ಗುಂಡೇಟು ತಿಂದವರನ್ನೂ ನೋಡಿದ್ದೇನೆ. ಹಿಂಸಾಚಾರ ನಿಲ್ಲಿಸುವಂತೆ ಎಲ್ಲರಿಗೂ ಮನವಿ. ಈ ಹುಚ್ಚುತನ ನಿಲ್ಲಲೇಬೇಕು
-ಅರವಿಂದ ಕೇಜ್ರಿವಾಲ್‌,ದೆಹಲಿ ಮುಖ್ಯಮಂತ್ರಿ

****

ಬಂದೂಕುಧಾರಿ ಬಂಧನ

ಪೊಲೀಸರ ಮುಂದೆಯೇ ಸೋಮವಾರ ರಿವಾಲ್ವಾರ್‌ ತೋರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನನ್ನು ಶಾರುಖ್‌ ಎಂದು ಗುರುತಿಸ ಲಾಗಿದೆ. ಈತ ಸೋಮವಾರ ಹಲವು ಸುತ್ತು ಗುಂಡು ಹಾರಿಸಿ, ಭೀತಿ ಮೂಡಿಸಿದ್ದ. ಗಲಭೆಗೆ ಸಂಬಂಧಿಸಿ 11 ಪ್ರಕರಣಗಳನ್ನು ದಾಖಲಿಸಲಾಗಿದೆ. 

ಇಂದು ‘ಸುಪ್ರೀಂ’ ವಿಚಾರಣೆ

ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಲ್ಲಿಕೆಯಾದ ದೂರುಗಳ ಆಧಾರ ದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಕೋರಿ ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್‌ ಹಬೀಬುಲ್ಲಾ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿದೆ.

ಮಾಧ್ಯಮ ಪ್ರತಿನಿಧಿಗಳಿಗೂ ಏಟು

ಜೆಕೆ 24/7 ಸುದ್ದಿ ವಾಹಿನಿಯ ಪತ್ರಕರ್ತ ಅಕ್ಷಯ್‌ ಎಂಬವರು ಗುಂಡೇಟಿ ನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಎನ್‌ಡಿ ಟಿ.ವಿಯ ಅರವಿಂದ್‌ ಗುಣಶೇಖರನ್‌, ಸೌರಭ್‌ ಶುಕ್ಲಾ, ಮರಿಯಂ ಅಲ್ವಿ ಮತ್ತು ಬೇರೊಂದು ವಾಹಿನಿಯ ಪತ್ರಕರ್ತ ಸುಶಿಲ್‌ ರಾಠಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲವು ಪತ್ರಕರ್ತರನ್ನು ದುಷ್ಕರ್ಮಿಗಳು ಬೆದರಿಸಿ ಓಡಿಸಿದ್ದಾರೆ.

ಅಮಿತ್ ಶಾ ಸಭೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪೊಲೀಸ್‌ ಮುಖ್ಯಸ್ಥ ಅಮೂಲ್ಯ ಪಟ್ನಾಯಕ್‌ ಜತೆ ಸಭೆ ನಡೆಸಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯ ಕರ್ತರು ಶಾಂತಿ ಸ್ಥಾಪನೆಗೆ ಕೈಜೋಡಿಸಬೇಕು, ಸ್ಥಳೀಯ ಶಾಂತಿ ಸಮಿತಿಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಸಭೆಯಲ್ಲಿ  ನಿರ್ಧರಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು