ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಶಾಲಾ–ಕಾಲೇಜುಗಳಿಗೆ ರಜೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 59ಕ್ಕೆ ಏರಿಕೆ

ಕೋವಿಡ್‌–19 ಸೋಂಕು
Last Updated 10 ಮಾರ್ಚ್ 2020, 19:32 IST
ಅಕ್ಷರ ಗಾತ್ರ

ತಿರುವನಂತಪುರ: ಕೊರೊನಾ–2 ವೈರಸ್‌ ಸೋಂಕಿಗೆ ಮತ್ತೆ ಆರು ಮಂದಿ ಒಳಗಾಗಿದ್ದು, ಕೇರಳದಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ 12ಕ್ಕೆ ಏರಿದೆ. ಸೋಂಕು ಪ್ರಕರಣ ಹೆಚ್ಚುತ್ತಿರುವ ಕಾರಣ, ಎಲ್ಲ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ದೇಶದಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ 59ಕ್ಕೆ ಏರಿದೆ.

‘ಮಾರ್ಚ್‌ 31ವರೆಗೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

‘ಶಬರಿಮಲೆ ಅಯ್ಯಪ್ಪ ದೇವಸ್ಥಾನ ಸೇರಿದಂತೆ ರಾಜ್ಯದ ಎಲ್ಲ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಭಕ್ತರು ಸದ್ಯದ ಮಟ್ಟಿಗೆ ನಿಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ 12 ಪ್ರಕರಣ: ಕೋವಿಡ್‌ ಪೀಡಿತರ ಸಂಖ್ಯೆ 12ಕ್ಕೆ ಏರಿದ್ದು, 149 ಮಂದಿಯನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಲಾಗಿದೆ. ಪತ್ತಿನಂ ತಿಟ್ಟ ಜಿಲ್ಲೆಗೆ ಇಟಲಿಯಿಂದ ಬಂದಿಳಿದ ಕುಟುಂಬದವರಿಂದ ಹೊಸದಾಗಿ ಆರು ಮಂದಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದಂಪತಿಯೊಬ್ಬರ ತಂದೆ-ತಾಯಿಗೆ ಸೋಂಕು ಅಂಟಿದೆ. ಕುಟುಂಬದ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಸಂಬಂಧಿಕರು ಮತ್ತು ನೆರೆಯ ಇಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಪುಣೆಯಲ್ಲಿ 4 ಪ್ರಕರಣ ಪತ್ತೆ: ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

ಗಡಿ ಬಂದ್‌ (ಗುವಾಹಟಿ ವರದಿ): ಭಾರತ–ಮ್ಯಾನ್ಮಾರ್‌ ಗಡಿ ಪ್ರವೇಶ ದ್ವಾರವನ್ನು ಮಣಿಪುರ ಸರ್ಕಾರ ಮುಚ್ಚಿದೆ ಮತ್ತು ಈ ಪ್ರದೇಶದಲ್ಲಿ ಜನರ ಓಡಾಟವನ್ನೂ ನಿಷೇಧಿಸಿದೆ.

ಎಚ್‌ಐವಿ ಸೋಂಕಿಗೆ ನೀಡುವ ಔಷಧಿ ಬಳಕೆ
ನವದೆಹಲಿ (ಪಿಟಿಐ):ಜೈಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಟಲಿಯ ದಂಪತಿಗೆ ಇದೇ ಮೊದಲ ಬಾರಿಗೆಕೊರೊನಾ ಸೋಂಕು ತಡೆಗೆ ಎಚ್‌ಐವಿ ಸೋಂಕಿಗೆ ನೀಡುವ ಔಷಧವನ್ನು ನೀಡಲಾಗುತ್ತದೆ.

ಚೀನಾ ಹಾಗೂ ಥಾಯ್ಲೆಂಡ್‌ನಲ್ಲಿ ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಲೊಪಿನಾವೀರ್‌ ಮತ್ತು ರಿಟೊನಾವೀರ್‌ ಔಷಧವನ್ನೇ ನೀಡಲಾಗುತ್ತಿದೆ.

ಈ ಔಷಧದ ‘ನಿರ್ಬಂಧಿತ ಬಳಕೆ’ಗೆ ಭಾರತೀಯ ಔಷಧ ನಿಯಂತ್ರಣ ಜನರಲ್‌ ಒಪ್ಪಿಗೆ ನೀಡಿತ್ತು. ಆದರೆ, ರೋಗಿಗಳ ಚಿಕಿತ್ಸೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಔಷಧ ನಿಯಂತ್ರಣ ಜನರಲ್‌ ಅವರಿಂದ ತುರ್ತು ಒಪ್ಪಿಗೆ ಪಡೆದುಕೊಂಡಿದೆ.

ಭಾರತ–ಮ್ಯಾನ್ಮಾರ್‌ ಗಡಿ ಬಂದ್‌
ಗುವಾಹಟಿ: ಭಾರತ–ಮ್ಯಾನ್ಮಾರ್‌ ಗಡಿ ಪ್ರವೇಶ ದ್ವಾರವನ್ನು ಮಣಿಪುರ ಸರ್ಕಾರ ಮುಚ್ಚಿದೆ ಮತ್ತು ಈ ಪ್ರದೇಶದಲ್ಲಿ ಜನರ ಓಡಾಟವನ್ನೂ ನಿಷೇಧಿಸಿದೆ.

ಮ್ಯಾನ್ಮಾರ್‌ನಲ್ಲಿ ಒಂದೂ ಸೋಂಕಿನ ಪ್ರಕರಣ ದಾಖಲಾಗದಿದ್ದರೂ, ಚೀನಾ ಗಡಿಗೆ ಹತ್ತಿರವಾಗಿರುವುದರಿಂದ ಈಶಾನ್ಯ ಭಾರತದ ಜನರು ಭಯಭೀತರಾಗಿದ್ದಾರೆ. ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ಮತ್ತು ಮಿಜೋರಾಂ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿವೆ. ಆದ್ದರಿಂದ ಮಣಿಪುರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಭಾರತ ಮ್ಯಾನ್ಮಾರ್‌ ಗಡಿ ಪ್ರದೇಶ ಜನರಿಗೆ 20 ಕಿ.ಮೀ ಸುತ್ತಮುತ್ತಲಿನವರೆಗೆ ಮಾತ್ರ ಓಡಾಡಲು ಅನುಮತಿ ನೀಡಲಾಗಿದೆ.

‘ಕೋವಿಡ್‌ 19‘ ಶಂಕಿತ ವ್ಯಕ್ತಿ ಹೈದರಾಬಾದ್‌ಗೆ ಸ್ಥಳಾಂತರ
ಕಲಬುರ್ಗಿ:
ಸೌದಿ ಅರೇಬಿಯಾದಿಂದ ಬಂದಿದ್ದ ಇಲ್ಲಿನ ಎಂ.ಎಸ್‌.ಕೆ. ಮಿಲ್‌ ಬಡಾವಣೆಯ ನಿವಾಸಿ ‘ಕೋವಿಡ್‌ 19’ ವೈರಸ್‌ಶಂಕಿತ ವ್ಯಕ್ತಿಯನ್ನು ಇಲ್ಲಿನ ಜಿಮ್ಸ್‌ ಆಸ್ಪತ್ರೆಯಿಂದ ಅವರ ಕುಟುಂಬ ಸದಸ್ಯರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಆ ವ್ಯಕ್ತಿಯನ್ನು ಸೋಮವಾರ ಜಿಮ್ಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಟಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅದರ ವರದಿ ಬರುವ ಮುನ್ನವೇ ಕುಟುಂಬ ಸದಸ್ಯರು ಹೈದರಾಬಾದ್‌ಗೆ ರೋಗಿಯನ್ನು ಸ್ಥಳಾಂತರಿಸಿದ್ದಾರೆ. ವರದಿ ಬಂದ ನಂತರ ಅದನ್ನು ಹೈದರಾಬಾದ್‌ನ ಆಸ್ಪತ್ರೆಯೊಂದಿಗೆ ಹಂಚಿಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

ಮತ್ತೊಬ್ಬ ಶಂಕಿತನ ಗಂಟಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅದರಲ್ಲಿ ಕೋವಿಡ್ 19 ಸೋಂಕು ಇಲ್ಲ ಎಂಬ ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎ.ಜಬ್ಬಾರ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT