ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಲಕ್ಷ ಕೋಟಿ ಪ್ಯಾಕೇಜ್‌| ಸಣ್ಣ ಉದ್ಯಮಕ್ಕೆ ಕೇಂದ್ರ ಸರ್ಕಾರದ ದೊಡ್ಡ ಪರಿಹಾರ

ಕೊರೊನಾ ಬಾಧಿತ ಆರ್ಥಿಕತೆಗೆ ಚೇತರಿಕೆ l ₹6 ಲಕ್ಷ ಕೋಟಿ ಪ್ಯಾಕೇಜ್‌ ಪ್ರಕಟಿಸಿದ ನಿರ್ಮಲಾ l ಎಂಎಸ್‌ಎಂಇಗಳಿಗೆ ಸಿಂಹಪಾಲು
Last Updated 13 ಮೇ 2020, 19:41 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಾಣು ಪಿಡುಗಿನಿಂದಾಗಿ ತತ್ತರಿಸಿರುವ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವುದಕ್ಕಾಗಿ ₹ 6 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ ಅನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಇದರ ಪೈಕಿ ₹ 3 ಲಕ್ಷವನ್ನು ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡಲು ಬಳಸಿಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದರು. ₹20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಅನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದರು. ಅದರ ಮೊದಲ ಕಂತಾಗಿ ₹6 ಲಕ್ಷ ಕೋಟಿಯ ಪರಿಹಾರದ ವಿವರಗಳನ್ನು ನಿರ್ಮಲಾ ಅವರು ನೀಡಿದ್ದಾರೆ.

ಬ್ಯಾಂಕುಗಳಲ್ಲಿ ನಗದು ಹೆಚ್ಚಳಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಕಟಿಸಿದ ಉಪಕ್ರಮಗಳು, ಆಹಾರ ಭದ್ರತೆ ಮತ್ತು ಇತರ ಪರಿಹಾರವಾಗಿ ನೀಡಲಾದ ಮೊತ್ತವೂ ಸೇರಿ ₹20 ಲಕ್ಷ ಕೋಟಿಯ ಪ್ಯಾಕೇಜ್‌ ಪ್ರಕಟವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು. ಜಗತ್ತಿನ ಐದನೇ ದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಭಾರತದ ಆರ್ಥಿಕ ಪ್ರಗತಿಯು ನಾಲ್ಕು ದಶಕಗಳಲ್ಲಿ ಅತ್ಯಂತ ತಳಮಟ್ಟಕ್ಕೆ ಕುಸಿದಿದೆ. ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವುದು ಈಗಿನ ಪರಿಹಾರ‍ಪ್ಯಾಕೇಜ್‌ನ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

ಮಾರ್ಚ್‌ 25ರಿಂದ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗ
ಳೆಲ್ಲ ಸ್ಥಗಿತಗೊಂಡಿದ್ದವು. ಲಾಕ್‌ಡೌನ್‌ನ ಹಲವು ನಿರ್ಬಂಧಗಳನ್ನು ಈಗ ಸಡಿಲಿಸಿ, ಆರ್ಥಿಕ ಚಟುವಟಿಕೆಗಳು ಆರಂಭವಾಗಲು ಅನುವು ಮಾಡಿಕೊಡಲಾಗಿದೆ.

ಆದರೆ, ಲಾಕ್‌ಡೌನ್‌ನಿಂದಾಗಿ 12.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ, ಗ್ರಾಹಕ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.

ಸಣ್ಣ ಉದ್ಯಮ

ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡುವುದಕ್ಕಾಗಿ ₹ 3 ಲಕ್ಷ ಕೋಟಿ ಬಳಕೆಯಾಗಲಿದೆ. ಇದು ನಾಲ್ಕು ವರ್ಷ ಅವಧಿಯ ಸಾಲ. ಮೊದಲ 12 ತಿಂಗಳು ಸಾಲದ ಮೇಲಿನ ಬಡ್ಡಿ ಪಾವತಿಸಬೇಕಿಲ್ಲ. ಈ ಪ್ಯಾಕೇಜ್‌ನಿಂದಾಗಿ 45 ಲಕ್ಷ ಸಣ್ಣ ಉದ್ಯಮಗಳಿಗೆ ಅನುಕೂಲ ಆಗಲಿದೆ

ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಗೃಹ ಹಣಕಾಸು ಕಂಪನಿಗಳಿಗೆ (ಎಚ್‌ಎಫ್‌ಸಿ) ₹30 ಸಾವಿರ ಕೋಟಿ ಮೊತ್ತದ ನೆರವು ದೊರೆಯಲಿದೆ. ಸಾಲ ಮಾರುಕಟ್ಟೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗದ ಬ್ಯಾಂಕೇತರ ಹಣಕಾಸು ಕಂಪನಿಗಳು, ಗೃಹ ಹಣಕಾಸು ಕಂಪನಿಗಳು, ಸಣ್ಣ ಹಣಕಾಸು ಕಂಪನಿಗಳಿಗೆ (ಎಂಎಫ್‌ಐ) ಈ ಮೂಲಕ ನಗದು ಪೂರೈಕೆ ಆಗಲಿದೆ

ಸಾಲ ಶ್ರೇಯಾಂಕ ಕಡಿಮೆ ಇರುವ ಈ ಕಂಪನಿಗಳು ಜನರಿಗೆ ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲ ನೀಡಲು ಸಾಧ್ಯವಾಗುವಂತೆ ₹45 ಸಾವಿರ ಕೋಟಿ ನಗದು ಹರಿವಿಗೆ ವ್ಯವಸ್ಥೆ ಮಾಡಲಾಗುವುದು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಥವಾ ಸುಸ್ತಿದಾರ ‘ಎಂಎಸ್‌ಎಂಇ’ಗಳಿಗೆ ನೆರವಾಗಲು ₹20 ಸಾವಿರ ಕೋಟಿ ಒದಗಿಸಲಾಗುವುದು. ಇದರಿಂದ ಎರಡು ಲಕ್ಷ ಉದ್ಯಮಗಳು ಪ್ರಯೋಜನ ಪಡೆದುಕೊಳ್ಳಬಹುದು ಎಂಎಸ್‌ಎಂಇ ನಿಧಿ: ಈ ನಿಧಿಯ ಮೂಲಕ ‘ಎಂಎಸ್‌ಎಂಇ’ ವಲಯಕ್ಕೆ ₹50 ಸಾವಿರ ಕೋಟಿ ಹೂಡಿಕೆ ಆಗಲಿದೆ. ಬೆಳವಣಿಗೆಯ ಸಾಮರ್ಥ್ಯ ಇರುವ ‘ಎಂಎಸ್‌ಎಂ’ಗಳಿಗೆ ಇದರ ಪ್ರಯೋಜನ ದಕ್ಕಲಿದೆ

‘ಡಿಸ್ಕಾಂ’ಗಳಿಗೆ ನೆರವು

ವಿದ್ಯುತ್‌ ವಿತರಣಾ ಕಂಪನಿಗಳಿಗೆ (ಡಿಸ್ಕಾಂ) ₹90 ಸಾವಿರ ಕೋಟಿ ನಗದು ಪೂರೈಕೆ ಆಗಲಿದೆ. ರಾಜ್ಯ ಸರ್ಕಾರಗಳ ಸ್ವಾಮ್ಯದ ವಿದ್ಯುತ್‌ ಹಣಕಾಸು ನಿಗಮ (ಪಿಎಫ್‌ಸಿ) ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್‌ಇಸಿ) ಮೂಲಕ ಈ ನಗದು ಪೂರೈಕೆ ಮಾಡಲಾಗುವುದು. ‘ಡಿಸ್ಕಾಂ’ಗಳು ಡಿಜಿಟಲ್‌ ಪಾವತಿಯಂತಹ ಸುಧಾರಣಾ ಕ್ರಮಗಳಿಗೆ ಮುಂದಾದರೆ ಮಾತ್ರ ಈ ನೆರವು ದೊರೆಯಲಿದೆ ಎಂಬ ಷರತ್ತನ್ನೂ ಹಾಕಲಾಗಿದೆ

ಐಟಿ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ

2019–20ನೇ ಸಾಲಿನ ಆದಾಯ ತೆರಿಗೆ ಲೆಕ್ಕ ಸಲ್ಲಿಕೆಯ (ಐ.ಟಿ ರಿಟರ್ನ್‌) ಗಡುವು 2020ರ ಜುಲೈ 31 ಮತ್ತು ಅಕ್ಟೋಬರ್‌ 31 ಆಗಿತ್ತು. ಅದನ್ನು 2020ರ ನವೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ. ತೆರಿಗೆ ಲೆಕ್ಕಪರಿಶೋಧನೆಯನ್ನು 2020ರ ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 31ಕ್ಕೆ ಮುಂದೂಡಲಾಗಿದೆ

ತೆರಿಗೆ ಪಾವತಿದಾರರಿಗೆ ವಿನಾಯಿತಿ

ತೆರಿಗೆದಾರರ ಕೈಯಲ್ಲಿ ಹೆಚ್ಚು ಹಣ ಉಳಿಯಲಿ ಎಂಬ ಲೆಕ್ಕಾಚಾರವನ್ನು ನಿರ್ಮಲಾ ಮಾಡಿದ್ದಾರೆ. ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್‌) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹದ (ಟಿಸಿಎಸ್‌) ಪ್ರಮಾಣವು ಈಗಿನ ದರದ ಶೇ 25ರಷ್ಟು ಕಡಿತವಾಗಲಿದೆ. ಇದು 2020–21ನೇ ಆರ್ಥಿಕ ವರ್ಷಕ್ಕೆ ಅನ್ವಯ. ಸಂಬಳಯೇತರ ಆದಾಯ ಪಡೆಯುವ ವರ್ಗಕ್ಕೆ ಇದರಿಂದ ಅನುಕೂಲ ಆಗಲಿದೆ

ಗುತ್ತಿಗೆ, ವೃತ್ತಿಪರ ಶುಲ್ಕ, ಬಡ್ಡಿ, ಬಾಡಿಗೆ, ಡಿವಿಡೆಂಡ್‌, ಕಮಿಷನ್‌, ಬ್ರೋಕರ್‌ ಶುಲ್ಕ ಪಡೆಯುವವರಿಗೆ ಇದರಿಂದ ಪ್ರಯೋಜನ. ಈ ಕ್ರಮದಿಂದ ಅರ್ಥ ವ್ಯವಸ್ಥೆಗೆ ₹50 ಸಾವಿರ ಕೋಟಿ ನಗದು ಹರಿಯಲಿದೆ ಎಂಬುದು ಹಣಕಾಸು ಸಚಿವರ ಅಂದಾಜು

ಪಿಎಫ್‌ ಕಡಿತ

ಭವಿಷ್ಯ ನಿಧಿಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ಪಾಲನ್ನು ಈಗಿನ ಶೇ 12ರಿಂದ ಶೇ 10ಕ್ಕೆ ಇಳಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳಿಗೆ ಇದು ಅನ್ವಯ. ಮುಂದಿನ ಮೂರು ತಿಂಗಳು ಇದು ಜಾರಿಯಲ್ಲಿರುತ್ತದೆ

6.5 ಲಕ್ಷ ಕಂಪನಿಗಳಿಗೆ ಇದರಿಂದ ₹6,750 ಕೋಟಿ ನಗದು ದೊರೆಯಲಿದೆ

ಗುತ್ತಿಗೆದಾರರಿಗೆ

ಕೇಂದ್ರ ಸರ್ಕಾರಿ ಸಂಸ್ಥೆಗಳ ಗುತ್ತಿಗೆದಾರರ ಗುತ್ತಿಗೆ ಪೂರ್ಣಗೊಳಿಸುವ ಅವಧಿ ಆರು ತಿಂಗಳು ವಿಸ್ತರಣೆ. ಗುತ್ತಿಗೆದಾರರ ಮೇಲೆ ಹೆಚ್ಚುವರಿ ವೆಚ್ಚದ ಹೇರಿಕೆ ಇಲ್ಲ. ರೈಲ್ವೆ, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ, ಕೇಂದ್ರ ಲೋಕೋಪಯೋಗಿ ಮುಂತಾದ ಇಲಾಖೆಗಳ ಗುತ್ತಿಗೆದಾರರಿಗೆ ಅನುಕೂಲ. ನಿರ್ಮಾಣ ಕಾಮಗಾರಿ, ಸರಕು ಮತ್ತು ಸೇವೆ ಪೂರೈಕೆ ಗುತ್ತಿಗೆಗೂ ಅನ್ವಯ

ನಿವೃತ್ತಿ ಪ್ರಯೋಜನ

ನಿರ್ದಿಷ್ಟ ಸಂಸ್ಥೆಗಳಲ್ಲಿನ ಪಿಎಫ್‌ ವಂತಿಗೆಯನ್ನು ಸರ್ಕಾರವೇ ಪಾವತಿಸುವ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ಇದು ಆಗಸ್ಟ್‌ವರೆಗೆ ಜಾರಿಯಲ್ಲಿರಲಿದೆ. ಇದರಿಂದಾಗಿ 3.67 ಲಕ್ಷ ಕಂಪನಿಗಳಲ್ಲಿ ₹2,500 ಕೋಟಿ ಮೊತ್ತ ಹಣ ಉಳಿಯಲಿದೆ

***

ಎಂಎಸ್‌ಎಂಇಗಳನ್ನು ಬಿಟ್ಟರೆ, ಬಡ ಕಾರ್ಮಿಕರಿಗೆ ಏನನ್ನೂ ಕೊಟ್ಟಿಲ್ಲ. ಉಳಿದ ₹ 16.4 ಲಕ್ಷ ಕೋಟಿ ಎಲ್ಲಿದೆ? ತಾನೇ ಸೃಷ್ಟಿಸಿದ ಅಜ್ಞಾನ, ಭಯದಲ್ಲಿ ಸರ್ಕಾರ ಬಂದಿಯಾಗಿದೆ
–ಪಿ. ಚಿದಂಬರಂ,ಕಾಂಗ್ರೆಸ್‌ ಮುಖಂಡ

***

ಕೇಂದ್ರದ ಆರ್ಥಿಕ ಪ್ಯಾಕೇಜ್‌ ಒಂದು ದೊಡ್ಡ ಸೊನ್ನೆ. ಜನರ ಕಣ್ಣೊರಸಿ, ಮೂರ್ಖರನ್ನಾಗಿಸುವ ತಂತ್ರ. ರಾಜ್ಯಗಳಿಗೆ ಈ ಪ್ಯಾಕೇಜ್‌ನಿಂದ ಏನೇನೂ ಉಪಯೋಗವಾಗುವುದಿಲ್ಲ.

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT