ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ಹಂತದ ಮತದಾನ ಆರಂಭ; ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

ಹಲವು ರಾಜ್ಯಗಳಲ್ಲಿ ತ್ರಿಕೋನ ಸ್ಪರ್ಧೆ; ಘಟಾನುಘಟಿಗಳ ಭವಿಷ್ಯ ನಿರ್ಧಾರ
Last Updated 12 ಮೇ 2019, 2:18 IST
ಅಕ್ಷರ ಗಾತ್ರ

ದೆಹಲಿ ಮತ್ತು ಉತ್ತರ ಭಾರತದ ಆರು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ 6ನೇ ಹಂತದ ಮತದಾನ ಭಾನುವಾರ ಬೆಳಿಗ್ಗೆ ಆರಂಭವಾಗಿದೆ. ಇಷ್ಟೂ ಕ್ಷೇತ್ರಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ಇವೆ. 2014ರ ಚುನಾವಣೆಯಲ್ಲಿ 59 ಕ್ಷೇತ್ರಗಳ ಪೈಕಿ 45ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಹಂತದ ಮತದಾನವು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ

ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ
ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಏಳೂ ಕ್ಷೇತ್ರಗಳಲ್ಲಿ ಬಿಜೆಪಿ–ಕಾಂಗ್ರೆಸ್–ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2014ರ ಚುನಾವಣೆಯಲ್ಲಿ ಏಳೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆನಂತರ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಜಯಭೇರಿ ಬಾರಿಸಿತ್ತು.

ಆದರೆ ಅದೇ ಕಸುವು ಈಗ ಎಎಪಿಯಲ್ಲಿ ಉಳಿದಿಲ್ಲ. ಹೀಗಾಗಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಎಎಪಿ ಮುಂದಾಗಿತ್ತು. ಆದರೆ ಬೇರೆಬೇರೆ ಕಾರಣಗಳಿಂದಾಗಿ ಮೈತ್ರಿ ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿ–ಕಾಂಗ್ರೆಸ್‌–ಎಎಪಿ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದಿವೆ. ಎಎಪಿಯ ಆತಿಶಿ, ಬಿಜೆಪಿಯ ಗೌತಮ್ ಗಂಭೀರ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಕಣದಲ್ಲಿರುವ ಪ್ರಮುಖರು.

ಜಾರ್ಖಂಡ್‌ನಲ್ಲಿ ಮೈತ್ರಿ ಲೆಕ್ಕಾಚಾರ
ಜಾರ್ಖಂಡ್‌ನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಭಾನುವಾರ ಮತದಾನ ನಡೆಯಲಿದೆ. ಬಿಜೆಪಿ ಇಲ್ಲಿ ಪ್ರಾದೇಶಿಕ ಪಕ್ಷವೊಂದರ ಜತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್‌ ಸಹ ಜಾರ್ಖಂಡ್ ಮುಕ್ತಿ ಮೋರ್ಚಾ, ಜಾರ್ಖಂಡ್ ವಿಕಾಸ್ ಮೋರ್ಚಾ ಮತ್ತು ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡಿದೆ. 2014ರಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಪಡೆದಿದ್ದಕ್ಕಿಂತ ಹೆಚ್ಚು ಮತಗಳು ಕಾಂಗ್ರೆಸ್‌ ನೇತೃತ್ವದಲ್ಲಿ ಈಗ ಒಂದಾಗಿರುವ ಪಕ್ಷಗಳಿಗೆ ಬಂದಿದ್ದವು. ಹೀಗಾಗಿ ಕಾಂಗ್ರೆಸ್‌ ಮೈತ್ರಿಕೂಟವು ಈ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

ಇನ್ನೊಂದೆಡೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 26ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇ 12ರಷ್ಟು ಪರಿಶಿಷ್ಟ ಜಾತಿಯ ಜನರಿದ್ದಾರೆ. ಈ ಸಮುದಾಯದ ಜನರು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಬಿಜೆಪಿಯ ಗೆಲುವು ಕಠಿಣವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಹರಿಯಾಣದಲ್ಲಿ ಭಾರಿ ಪೈಪೋಟಿ
ಹರಿಯಾಣದ 10 ಲೋಕಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಿ ಏಕಾಂಗಿಯಾಗಿ ಕಣಕ್ಕೆ ಇಳಿದಿವೆ. ಎಎಪಿಯು ಜೆಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಇಲ್ಲಿಯೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಾಲಿ ಶಾಸಕ ಭೂಪೇಂದರ್ ಸಿಂಗ್ ಹೂಡಾ ಕಣದಲ್ಲಿರುವ ಪ್ರಮುಖರು. ಸಿಖ್ ನರಮೇಧ, ಕಾಂಗ್ರೆಸ್‌ ಆಡಳಿತದಲ್ಲಿನ ಭೂ ಹಗರಣ ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಕಾಂಗ್ರೆಸ್‌ ಇಲ್ಲಿ ಭಾರಿ ಪ್ರಚಾರ ನಡೆಸಿದೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ರ‍್ಯಾಲಿ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎಎಪಿ ಅಭ್ಯರ್ಥಿಗಳ ಪರವಾಗಿ ರ‍್ಯಾಲಿ ನಡೆಸಿದ್ದಾರೆ.

ಮಧ್ಯಪ್ರದೇಶದಲ್ಲಿ ಘಟಾನುಘಟಿಗಳು
ಮಧ್ಯಪ್ರದೇಶದ ಎಂಟು ಕ್ಷೇತ್ರಗಳು ಈ ಹಂತದಲ್ಲಿ ಮತದಾನ ಎದುರಿಸುತ್ತಿವೆ. ಆದರೆ ಇವುಗಳಲ್ಲಿ ರಾಜಗಡ ಮತ್ತು ಭೋಪಾಲ್‌ ಕ್ಷೇತ್ರಗಳು ಕುತೂಹಲ ಕೆರಳಿಸಿವೆ.

ರಾಜಗಡ ಕ್ಷೇತ್ರವು ದಿಗ್ವಿಜಯ ಸಿಂಗ್ ಅವರ ರಾಜಮನೆತನದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಇದೇ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಪ್ತ ಹಾಗೂ ಹಾಲಿ ಸಂಸದ ರೋದಮಾಲ್ ನಗರ್ ಕಣಕ್ಕೆ ಇಳಿದಿದ್ದಾರೆ. ಚೌಹಾಣ್ ಅವರು ತಮ್ಮ ಆಡಳಿತದ ಸಾಧನೆಗಳನ್ನು ಮುಂದಿಟ್ಟುಕೊಂಡು ತಮ್ಮ ಅಭ್ಯರ್ಥಿಗೆ ಮತ ಕೇಳುತ್ತಿದ್ದಾರೆ. ದಿಗ್ವಿಜಯ ಸಿಂಗ್ ಅವರು ತಮ್ಮ ಅನುಯಾಯಿ ಮೋನಾ ಸುಸ್ತಾನಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಶಿವರಾಜ್ ಮತ್ತು ದಿಗ್ವಿಜಯ ಸಿಂಗ್ ಅವರು ಕಣದಲ್ಲಿ ಇಲ್ಲದಿದ್ದರೂ, ಇಬ್ಬರೂ ತಮ್ಮ ಪ್ರತಿಷ್ಠೆಯನ್ನು ಕಣಕ್ಕೆ ಇಳಿಸಿದ್ದಾರೆ.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ದಿಗ್ವಿಜಯ ಸಿಂಗ್ ಅವರು ಕಣದಲ್ಲಿದ್ದಾರೆ. ಅವರ ವಿರುದ್ಧ ಹಿಂದೂ ರಾಷ್ಟ್ರೀಯವಾದಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಬಿಜೆಪಿ ಸ್ಪರ್ಧೆಗೆ ಇಳಿಸಿದೆ. ಚುನಾವಣಾ ಪ್ರಚಾರದ ವೇಳೆ ಪ್ರಜ್ಞಾ ಅವರು ನೀಡಿದ್ದ ಕೆಲವು ಹೇಳಿಕೆಗಳು ಅವರಿಗೇ ಮುಳುವಾಗಲಿವೆ ಎಂದು ಸ್ವತಃ ಬಿಜೆಪಿ ನಾಯಕರೇ ಶಂಕಿಸಿದ್ದಾರೆ. ಆದರೂ ಇಬ್ಬರ ನಡುವೆ ಭಾರಿ ಪೈಪೋಟಿ ಇದೆ.

ಬಿಹಾರದಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ
ಬಿಹಾರದ ಎಂಟು ಕ್ಷೇತ್ರಗಳು ಮತದಾನ ಎದುರಿಸಲಿವೆ. 2014ರ ಚುನಾವಣೆಯಲ್ಲಿ ಈ ಎಂಟೂ ಕ್ಷೇತ್ರಗಳು ಎನ್‌ಡಿಎ ಪಾಲಾಗಿದ್ದವು. ಎಂಟರಲ್ಲಿ ಏಳು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಒಂದು ಕ್ಷೇತ್ರವನ್ನು ರಾಮ್‌ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಗೆದ್ದುಕೊಂಡಿತ್ತು. ಈ ಕ್ಷೇತ್ರಗಳಲ್ಲಿ ಎನ್‌ಡಿಎ ಪಡೆದಿದ್ದ ಮತಕ್ಕಿಂತ ಎಲ್ಲಾ ವಿರೋಧ ಪಕ್ಷಗಳ ಒಟ್ಟು ಮೊತ್ತ ಹೆಚ್ಚು. ಹೀಗಾಗಿ ಮಹಾಮೈತ್ರಿಕೂಟ ರಚಿಸಿಕೊಳ್ಳುವ ಪ್ರಸ್ತಾಪವಿತ್ತು. ಆದರೆ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಂದಾಗಿವೆ. ಬಿಎಸ್‌ಪಿ ಸ್ವತಂತ್ರವಾಗಿ ಕಣಕ್ಕೆ ಇಳಿದಿದೆ.

ಎನ್‌ಡಿಎ ಅಭ್ಯರ್ಥಿಗಳು ಈ ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ. ಇವರ ವಿರುದ್ಧ ಮಹಾಮೈತ್ರಿಕೂಟದ ಅಭ್ಯರ್ಥಿಗಳು ಮತ್ತು ಬಿಎಸ್‌ಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಎನ್‌ಡಿಎ ಅಭ್ಯರ್ಥಿಗಳೇ ಇಲ್ಲಿ ಗೆಲ್ಲುವ ನೆಚ್ಚಿನ ಅಭ್ಯರ್ಥಿಗಳಾಗಿದ್ದಾರೆ. ಆದರೂ ಎನ್‌ಡಿಎ ಪ್ರಬಲ ಪೈಪೋಟಿ ಎದುರಿಸುವ ನಿರೀಕ್ಷೆಯಿದೆ.

ಉತ್ತರಪ್ರದೇಶದಲ್ಲಿ ರಣತಂತ್ರ
6ನೇ ಹಂತದಲ್ಲಿಉತ್ತರಪ್ರದೇಶದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2014ರ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ 13 ಬಿಜೆಪಿಯ ಪಾಲಾಗಿದ್ದವು. ಅಜಂಗಡದಲ್ಲಿ ಮಾತ್ರ ಎಸ್‌ಪಿಯ ಅಂದಿನ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಜಯಗಳಿಸಿದ್ದರು. ಆದರೆ ಈಚಿನ ಉಪಚುನಾವಣೆಯಲ್ಲಿ ಬಿಜೆಪಿಯು ಗೋರಖಪುರ ಮತ್ತು ಫೂಲ್‌ಪುರ ಕ್ಷೇತ್ರಗಳನ್ನು ಎಸ್‌ಪಿ–ಬಿಎಸ್‌ಪಿ ಮೈತ್ರಿ ಅಭ್ಯರ್ಥಿಗಳ ಎದುರು ಕಳೆದುಕೊಂಡಿತ್ತು.

ಈ ಬಾರಿ ಇಷ್ಟೂ ಕ್ಷೇತ್ರಗಳಲ್ಲಿ ಎಸ್‌ಪಿ–ಬಿಎಸ್‌ಪಿಗಳು ತಮ್ಮ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. 2014ರಲ್ಲಿ ಈ ಎರಡೂ ಪಕ್ಷಗಳ ಮತಪ್ರಮಾಣ ಬಿಜೆಪಿಗಿಂತ ಅಧಿಕವಾಗಿತ್ತು. ಹೀಗಾಗಿ ಮೈತ್ರಿ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಅಜಂಗಡದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಸಹ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಚತುಷ್ಕೋನ ಸ್ಪರ್ಧೆ
ಪಶ್ಚಿಮ ಬಂಗಾಳದಲ್ಲೂ ಎಂಟು ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಲಿದೆ. ಎಂಟರಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಟಿಎಂಸಿ ಮತ್ತು ಎಡಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಒಂದರಲ್ಲಿ ಮಾತ್ರ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿಲ್ಲ.

ಈ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಪ್ರಾಬಲ್ಯ ಹೊಂದಿವೆ. ಆದರೆ ಬಿಜೆಪಿ ಇಲ್ಲಿ ನೆಲೆ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ಅಭ್ಯರ್ಥಿಗಳ ಪರ ಭಾರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಹಲವು ರ‍್ಯಾಲಿಗಳನ್ನು ನಡೆಸಿದ್ದಾರೆ. ಇಲ್ಲಿನ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT