ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಹೂಡಿಕೆ ಉತ್ತೇಜನ

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: 2008ರ ಆರ್ಥಿಕ ಬಿಕ್ಕಟ್ಟಿಗೆ ಮುಂಚೆ ಇದ್ದ ಆರ್ಥಿಕ ವೃದ್ಧಿ ದರ ಸಾಧಿಸಲು ರಸ್ತೆ, ಬಂದರು, ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮೂಲಸೌಕರ್ಯ ಕ್ಷೇತ್ರದ ಸ್ಥಿತಿಗತಿ ಅವಲೋಕಿಸಲು ಬುಧವಾರ ನಡೆದ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ನಿರ್ಧಾರಗಳನ್ನು ಪ್ರಕಟಿಸಿದರು.

ಪ್ರಸಕ್ತ ವರ್ಷಕ್ಕೆ ಹಾಕಿಕೊಳ್ಳಲಾಗಿದ್ದ 7000 ಕಿ.ಮೀ. ರಸ್ತೆ ನಿರ್ಮಾಣದ ಗುರಿಯನ್ನು ಸಭೆ 9000 ಕಿ.ಮೀ.ಗಳಿಗೆ ಹೆಚ್ಚಿಸಿದೆ. ಇದೇ ರೀತಿ ರೈಲ್ವೆ, ಹಡಗು ಮತ್ತು ವಿಮಾನಯಾನ ಕ್ಷೇತ್ರಗಳಿಗೆ ನಿಗದಿಯಾಗಿದ್ದ ಗುರಿಯನ್ನು ಕೂಡ ಹೆಚ್ಚಿಸಲಾಗಿದೆ.

2011-12ನೇ ಸಾಲಿನಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಒಂಬತ್ತು ವರ್ಷಗಳಲ್ಲಿಯೇ ಅತಿ ಕಡಿಮೆಯಾದ ಶೇ 6.5ರಷ್ಟಕ್ಕೆ ಕುಸಿದಿದ್ದರೆ, ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೈಗಾರಿಕಾ ಉತ್ಪಾದನೆ ಕೂಡ ಇಳಿಮುಖವಾಗಿತ್ತು.
 
ಈ ಹಿನ್ನೆಲೆಯಲ್ಲಿ ಬುಧವಾರದ ಸಭೆಗೆ ಮಹತ್ವ ಬಂದಿತ್ತು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ        (2012-17) ರಾಷ್ಟ್ರದ ಮೂಲಸೌಕರ್ಯ ರಂಗ ಅಭಿವೃದ್ಧಿಗೆ 1000 ಶತಕೋಟಿ ಡಾಲರ್ (ರೂ 55 ಲಕ್ಷ ಕೋಟಿ) ಹೂಡಿಕೆ ಅಗತ್ಯವಿದ್ದು, ಇದರಲ್ಲಿ ಶೇ 50ರಷ್ಟು ಹೂಡಿಕೆಯನ್ನು ಸರ್ಕಾರವು ಖಾಸಗಿ ವಲಯದಿಂದ ನಿರೀಕ್ಷಿಸುತ್ತಿದೆ.

ಮುಂಬೈನಲ್ಲಿ ಎತ್ತರಿಸಿದ ರೈಲ್ವೆ ಮಾರ್ಗ ಯೋಜನೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲು, ಖಾಸಗಿ ಸಹಭಾಗಿತ್ವದಲ್ಲಿ ಎರಡು ಹೊಸ ಬಂದರುಗಳ ನಿರ್ಮಾಣಕ್ಕೆ ಒತ್ತು ನೀಡಲು ಹಾಗೂ ಹಾಲಿ ಇರುವ  ಕೆಲವು ಬಂದರುಗಳ ವಹಿವಾಟು ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಸಭೆ ತೀರ್ಮಾನಿಸಿತು.

ನವಿ ಮುಂಬೈ, ಗೋವಾ,  ಕಣ್ಣೂರುಗಳಲ್ಲಿ ಹೊಸದಾಗಿ ಮೂರು ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ಲಖನೌ, ವಾರಾಣಸಿ, ಕೊಯಮತ್ತೂರು, ತಿರುಚಿ,  ಗಯಾಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ನಿರ್ಧಾರವೂ ಸಭೆಯಲ್ಲಿ ಹೊರಹೊಮ್ಮಿತು.

ಎಲ್ಲ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ  ಉತ್ತೇಜಿಸುವ ಜತೆಗೆ ಪೂರೈಕೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.

`ಇಂದು ನಾವು ನಿಗದಿ ಮಾಡಿರುವ ಪರಿಷ್ಕೃತ ಗುರಿಗಳು ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು ಆಕರ್ಷಕವಾಗಿವೆ. ಇದೀಗ ಸಂಘಟಿತವಾಗಿ ಕಾರ್ಯೋನ್ಮುಖವಾಗಿ ಈ ಗುರಿಗಳನ್ನು ಮುಟ್ಟಬೇಕಾಗಿದೆ~ ಎಂದು ಹೇಳಿದರು.

 ಏನು ಯೋಜನೆಗಳನ್ನು ಹಾಕಿಕೊಂಡಿದ್ದೇವೋ ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಚಿವರು ಹೆಚ್ಚು ಪರಿಶ್ರಮಪಡಬೇಕು. ಯೋಜನೆ ಅನುಷ್ಠಾನದ ವೇಳೆ ವಿವಿಧ ಸಚಿವಾಲಯಗಳ ಮಧ್ಯೆ ಉದ್ಭವವಾಗುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಚಿವರು ಕ್ರಮ ಕೈಗೊಳ್ಳಬೇಕು~ ಎಂದೂ ಪ್ರಧಾನಿ ಸಲಹೆ ನೀಡಿದರು.

`ಸದ್ಯಕ್ಕೆ ನಾವು ಆರ್ಥಿಕ ತಳಮಳದ ಸ್ಥಿತಿ ಅನುಭವಿಸುತ್ತಿದ್ದೇವೆ. ಯೂರೊ ವಲಯದ ಬಿಕ್ಕಟ್ಟು ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ದೇಶದಲ್ಲಿ ಒಂದೆಡೆ ಬೇಡಿಕೆ ಹೆಚ್ಚಿ, ಮತ್ತೊಂದೆಡೆ ಪೂರೈಕೆ ಕೊರತೆ ಇರುವುದರಿಂದ ಹಣದುಬ್ಬರ ಹೆಚ್ಚಾಗುತ್ತಿದೆ. ಒಟ್ಟಾರೆ ಇವೆಲ್ಲವೂ ಕಠಿಣ ಆರ್ಥಿಕ ಸವಾಲನ್ನು ತಂದೊಡ್ಡಿವೆ. ಇವೆಲ್ಲವನ್ನೂ ಹಿಮ್ಮೆಟ್ಟಿ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಪೋಷಿಸುವ ವಾತಾವರಣ ನಿರ್ಮಿಸಬೇಕಿದೆ~ ಎಂದು ಮನಮೋಹನ್ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT