ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಸೋಲು: ಪ್ರಯಾಗ್‌ರಾಜ್‌ನಲ್ಲಿ ಪರಾಮರ್ಶೆ ನಡೆಸಲಿರುವ ಪ್ರಿಯಾಂಕಾ

ಪಕ್ಷದ ಮುಖಂಡರ ಜತೆ ಶುಕ್ರವಾರ ಸಭೆ ನಡೆಸಲಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
Last Updated 6 ಜೂನ್ 2019, 10:22 IST
ಅಕ್ಷರ ಗಾತ್ರ

ಲಖನೌ:ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷಕ್ಕಾಗಿರುವ ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪರಾಮರ್ಶೆ ನಡೆಸಲಿದ್ದಾರೆ.

ನಾಳೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿರುವ ಅವರು ಪಕ್ಷದ ಮುಖಂಡರು ಮತ್ತು ಲೋಕಸಭೆ ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶದಕ್ಷೇತ್ರಗಳಿಂದ ಸ್ಪರ್ಧಿಸಿದ್ದ 40 ಅಭ್ಯರ್ಥಿಗಳ ಜತೆ ಸಭೆ ನಡೆಸಲಿದ್ದಾರೆ. ಯಾವ್ಯಾವ ಅಂಶಗಳು ಸೋಲಿಗೆ ಕಾರಣವಾದವು ಎಂಬುದನ್ನು ಅವಲೋಕಿಸಲಿದ್ದಾರೆ. ಅಭ್ಯರ್ಥಿಗಳು ಮಾತ್ರವಲ್ಲದೆ, 40 ಜಿಲ್ಲೆಗಳ ಕಾಂಗ್ರೆಸ್ ಘಟಕದ ಮುಖ್ಯಸ್ಥರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಕೆಲವು ನಾಯಕರು ಪ‍ಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿರುವುದೂ ಸೋಲಿಗೆ ಕಾರಣ ಎನ್ನಲಾಗಿದೆ. ಕೆಲವೆಡೆ ಅಭ್ಯರ್ಥಿಗಳ ವಿರುದ್ಧಪಕ್ಷದೊಳಗೆಯೇ ವಿರೋಧ ವ್ಯಕ್ತವಾಗಿತ್ತು.ಪ‍ಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದವರ ಮತ್ತು ಬಂಡಾಯ ನಾಯಕರ ಪಟ್ಟಿಯನ್ನು ಒದಗಿಸುವಂತೆಯೂ ಹೈಕಮಾಂಡ್‌ ಈಗಾಗಲೇ ಸೂಚಿಸಿದೆ.

2019ರ ಜನವರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕಾ ಅವರು ನಂತರ ಹಲವು ಬಾರಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಲೋಕಸಭೆ ಚುನಾವಣೆ ಪ್ರಚಾರಾರ್ಥ ರಾಜ್ಯದ ಹಲವೆಡೆ ರೋಡ್‌ ಶೋ, ರ್‍ಯಾಲಿಗಳನ್ನು ನಡೆಸಿದ್ದರು. ಆದರೂ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಜಯಗಳಿಸಿದ್ದು ಬಿಟ್ಟರೆ ಉಳಿದ ಎಲ್ಲಕಡೆಗಳಲ್ಲಿ ಪಕ್ಷ ಸೋಲನುಭವಿಸಿತ್ತು. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪರ್ಧಿಸಿದ್ದ ಅಮೇಠಿಯಲ್ಲೂ ಕಾಂಗ್ರೆಸ್‌ಗೆ ಸೋಲಾಗಿತ್ತು.

ರಾಹುಲ್ ಗಾಂಧಿ ಕೇರಳಕ್ಕೆ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರದಿಂದ ಎರಡು ದಿನ ಕೇರಳದ ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದ ಸ್ಪರ್ಧಿಸಿ ಜಯಗಳಿಸಿರುವ ಅವರು ಕ್ಷೇತ್ರದ ಜನರ ಜತೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT