ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ತೀರ್ಪಿನ ನಂತರ ಕಾವೇರಿದ ರಫೇಲ್‌ ಕದನ

ಕಾಂಗ್ರೆಸ್‌–ಬಿಜೆಪಿ ನಡುವೆ ತೀವ್ರಗೊಂಡ ವಾಕ್ಸಮರ
Last Updated 15 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಒಪ್ಪಂದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರವೂ ವಿವಾದ ತಣ್ಣಗಾಗಿಲ್ಲ.ಈ ಸಂಬಂಧ ಶನಿವಾರ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಭಾರಿ ವಾಕ್ಸಮರ ನಡೆಸಿವೆ.

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಫೇಲ್‌ ಒಪ್ಪಂದ ಕುರಿತ ತೀರ್ಪಿನಲ್ಲಿ ಸಿಎಜಿ ವರದಿಗೆ ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ತಿದ್ದುಪಡಿ ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ರಫೇಲ್‌ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸುವಂತೆ ಸದನದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ನಾಯಕರು ವಿರೋಧ ಪಕ್ಷಗಳ ಸಹಕಾರ ಕೋರಿದ್ದಾರೆ.

‘ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲು ಕೇಂದ್ರ ಸರ್ಕಾರಕ್ಕೆ ಎಷ್ಟು ಧೈರ್ಯ’ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕಪಿಲ್‌ ಸಿಬಲ್‌ ಮತ್ತು ಅಭಿಷೇಕ್‌ ಮನು ಸಿಂಘ್ವಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಉಭಯ ಸದನಗಳಲ್ಲಿ ರಫೆಲ್‌ ಒಪ್ಪಂದ ಕುರಿತು ಹೋರಾಟವನ್ನು ತೀವ್ರಗೊಳಿಸುವ ಸುಳಿವನ್ನು ಕಾಂಗ್ರೆಸ್‌ ನಾಯಕರು ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ: ಖರ್ಗೆ

ನವದೆಹಲಿ (ಪಿಟಿಐ): ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಸಾರ್ವಜನಿಕ ಲೆಕ್ಕಪರಿಶೋಧನಾ ವರದಿಯವನ್ನು ಯಾವಾಗ ಸಂಸತ್‌ನಲ್ಲಿ ಮಂಡಿಸಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವರದಿಯನ್ನು ಸಂಸತ್‌ನಲ್ಲಿ ಯಾವಾಗ ಮಂಡಿಸಲಾಗಿದೆ ಎಂದು ಅಟಾರ್ನಿ ಜನರಲ್‌ ಹಾಗೂ ಮಹಾಲೇಖಪಾಲರು (ಸಿಎಜಿ) ಅವರನ್ನು ಕೇಳಬೇಕು ಎಂದು ಸಮಿತಿಯ ಸದಸ್ಯರನ್ನು ಕೋರಿದ್ದಾರೆ.

‘ಸಂಸತ್‌ನಲ್ಲಿ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿ ಮಂಡಿಸಲಾಗಿದೆ ಹಾಗೂ ಪಿಎಸಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿದೆ. ಆದರೆ, ಯಾವಾಗ ಈ ಕುರಿತು ಚರ್ಚಿಸಲಾಗಿದೆ. ಈವರೆಗೂ ವರದಿಯನ್ನು ಸಂಸತ್‌ನಲ್ಲಿ ಮಂಡಿಸಿಲ್ಲ’ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಕೋರ್ಟ್‌ಗೆ ಸಿಎಜಿ ವರದಿ ಕುರಿತು ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರವು ಸುಪ್ರೀಂ ಕೋರ್ಟ್‌ ಕ್ಷಮೆ ಯಾಚಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ಬಗ್ಗೆ ಗೌರವವಿದೆ. ಆದರೆ, ಅದು ತನಿಖಾ ಸಂಸ್ಥೆ ಅಲ್ಲ. ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಜೆಪಿಸಿ ತನಿಖೆ ಮಾತ್ರ ಪರಿಹಾರ: ಸಿಬಲ್‌

ರಫೇಲ್‌ ಒಪ್ಪಂದದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಹಿಸಬೇಕು ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಒತ್ತಾಯಿಸಿದ್ದಾರೆ.

‘ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಿಎಜಿ ವರದಿ ಪರಿಶೀಲಿಸಿದೆ ಎಂದು ಕೋರ್ಟ್‌ ಹೇಳಿದೆ. ಆದರೆ, ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪಿಎಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಇಂಥ ಸುಳ್ಳು ಹೇಳಿಕೆಗೆ ಯಾರು ಜವಾಬ್ದಾರರು. ಅಟಾರ್ನಿ ಜನರಲ್‌ ಹೇಗೆ ಪ್ರಮಾಣಪತ್ರ ನೀಡಿದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಇದು ಗಂಭೀರ ವಿಷಯವಾಗಿದ್ದು, ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಆದ್ದರಿಂದ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರವು ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಪಾಟೀ ಸವಾಲು ಸಹ ನಡೆದಿಲ್ಲ. ಹಾಗಾದರೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ ಎಂದು ಹೇಳುವುದಾದರೂ ಹೇಗೆ? ಜೆಪಿಸಿ ತನಿಖೆಯಿಂದ ಮಾತ್ರ ಇದಕ್ಕೆ ಪರಿಹಾರ ಸಿಗಲಿದೆ’ ಎಂದರು.

ರಫೇಲ್‌ ಯುದ್ಧ ವಿಮಾನಗಳ ಖರೀದಿ ವಿರೋಧಿಸುವ ಮೂಲಕ ಕಾಂಗ್ರೆಸ್‌ ದೇಶದ ಭದ್ರತೆ ಮತ್ತು ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡಲು ಯತ್ನಿಸುತ್ತಿದೆ

ಸುಪ್ರೀಂ ತೀರ್ಪು ಸ್ವಾಗತಿಸಿದ ಡಾಸೊ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಾನ್ಸ್‌ನ ಯುದ್ಧ ವಿಮಾನ ತಯಾರಿಕಾ ಕಂಪನಿ ಡಾಸೊ ಸ್ವಾಗತಿಸಿದೆ.

ಒಪ್ಪಂದದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಕಂಪನಿ ಹರ್ಷ ವ್ಯಕ್ತಪಡಿಸಿದೆ.

***

ರಫೇಲ್‌ ಒಪ್ಪಂದ ಕುರಿತು ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ ನಂತರವೂ ಕಾಂಗ್ರೆಸ್‌ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪಟ್ಟು ಹಿಡಿದಿರುವುದು ವಿಪರ್ಯಾಸ.

– ಪ್ರಕಾಶ್‌ ಜಾವಡೇಕರ್‌,ಕೇಂದ್ರ ಸಚಿವ

ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ರಫೇಲ್‌ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ನಂಬಿಕೆ ಮತ್ತು ಗೌರವವಿದೆ. ತೀರ್ಪು ನೀಡುವ ಮೊದಲು ನ್ಯಾಯಾಲಯ ಎಲ್ಲ ಸಂಗತಿಗಳನ್ನು ಪರಿಗಣಿಸಿರುತ್ತದೆ.

–ಅಖಿಲೇಶ್‌ ಯಾದವ್‌,ಸಮಾಜವಾದಿ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT