ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಹಾನಿಯನ್ನು ಬಿಜೆಪಿ ಸಂಭ್ರಮಿಸುತ್ತಿದೆ: ತೇಜಸ್ವಿ ಯಾದವ್ ಆರೋಪ

ಬಿಹಾರದಲ್ಲಿ ಅಮಿತ್ ಶಾ ಡಿಜಿಟಲ್ ರ‍್ಯಾಲಿ ವಿರುದ್ಧ ಆರ್‌ಜೆಡಿ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ
Last Updated 7 ಜೂನ್ 2020, 13:08 IST
ಅಕ್ಷರ ಗಾತ್ರ

ಪಟ್ನಾ: ‘ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದ ದೇಶಕ್ಕೆ ಆಗಿರುವ ಹಾನಿಯನ್ನು ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಹೀಗಾಗಿಯೇ ಶಾ ಡಿಜಿಟಲ್ ರ‍್ಯಾಲಿ ನಡೆಸುತ್ತಿದ್ದಾರೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರುಬಿಹಾರದಲ್ಲಿ ಭಾನುವಾರ ನಡೆಸಲಿರುವ ಡಿಜಿಟಲ್ ರ‍್ಯಾಲಿಯನ್ನು ವಿರೋಧಿಸಿ, ಆರ್‌ಜೆಡಿ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಪಟ್ನಾದಲ್ಲಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ನಿವಾಸದ ಎದುರು ಸೇರಿದ್ದ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಲಾಲು ಪ್ರಸಾದ್ ಮತ್ತು ರಾಬ್ಡಿ ದೇವಿ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಬಡವರನ್ನು ಈ ಸರ್ಕಾರವು, ಗೂಂಡಾ ಮತ್ತು ದರೋಡೆಕೋರರ ರೀತಿ ನಡೆಸಿಕೊಳ್ಳುತ್ತಿದೆ. ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ವಾಪಸ್ ಆಗುತ್ತಿರುವ ವಲಸೆ ಕಾರ್ಮಿಕರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗಬಹುದು ಎಂದು ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರವು ವಲಸೆ ಕಾರ್ಮಿಕರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿರುವುದಕ್ಕೆ ಇದು ಸ್ಪಷ್ಟ ನಿದರ್ಶನ‌’ ಎಂದು ತೇಜಸ್ವಿ ಆರೋಪಿಸಿದ್ದಾರೆ.

‘ಕೋವಿಡ್ ಪಿಡುಗಿನಿಂದ ತತ್ತರಿಸಿರುವ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಡಿಜಿಟಲ್ ವ್ಯವಸ್ಥೆಯನ್ನು ಸರ್ಕಾರ ಬಳಸಿಕೊಳ್ಳಬಹುದಿತ್ತು. ಆದರೆ, ಈ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಡೆಸುತ್ತಿರುವ ಈ ಡಿಜಿಟಲ್ ರ‍್ಯಾಲಿಯು, ಬಿಜೆಪಿಯ ಅಧಿಕಾರದ ದಾಹವನ್ನು ತೋರಿಸುತ್ತದೆ’ ಎಂದು ಅವರು ಟೀಕಿಸಿದ್ದಾರೆ.

‘ಕೋವಿಡ್ ಪಿಡುಗಿನಿಂದ ತತ್ತರಿಸಿಯೂ ಯಾವುದೇ ಪರಿಹಾರ ಸಿಗದೆ, ಅನ್ಯಾಯಕ್ಕೆ ಒಳಗಾಗಿರುವವರ ಪರವಾಗಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ತಟ್ಟೆ ಲೋಟಬಡಿದ ಆಕ್ರೋಶ

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೇರಿದ್ದ ಆರ್‌ಜೆಡಿ ಕಾರ್ಯಕರ್ತರು, ತಟ್ಟೆ ಲೋಟ ಬಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಜನರಿಗೆ ಜೀವನೋಪಾಯ ಸಾಮಗ್ರಿಗಳನ್ನು ಒದಗಿಸುವುದನ್ನು ಕಡೆಗಣಿಸಿದೆ. ಇದರ ಬಗ್ಗೆ ಎಚ್ಚರಿಸುವ ಉದ್ದೇಶದಿಂದ ತಟ್ಟೆ ಲೋಟ ಬಡಿಯುತ್ತಿದ್ದೇವೆ’ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಪಟ್ನಾದಲ್ಲಿ ರಾಬ್ಡಿ ದೇವಿ ನಿವಾಸದ ಎದುರು ಒಂದೂವರೆ ಮೀಟರ್‌ ಅಂತರದಲ್ಲಿ ವೃತ್ತಗಳನ್ನು ರಚಿಸಲಾಗಿತ್ತು. ಕಾರ್ಯಕರ್ತರು ಆ ವೃತ್ತಗಳಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು. ರಾಜ್ಯದ ಬೇರೆಡೆ ನಡೆಸಿದ ಪ್ರತಿಭಟನೆಗಳಲ್ಲೂ ಇದೇ ವಿಧಾನ ಅನುಸರಿಸಲಾಗಿತ್ತು.

ನಿತೀಶ್ ನಿವಾಸದಿಂದ ಕಲ್ಲುತೂರಾಟ

ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧಿಕೃತ ಮನೆಯ ಎದುರೂ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕೃತ ನಿವಾಸದ ಆವರಣದಿಂದ ಪ್ರತಿಭಟನಕಾರರತ್ತ ಕಲ್ಲು ತೂರಲಾಯಿತು. ಕಲ್ಲು ಯಾರಿಗೂ ತಾಗಲಿಲ್ಲ. ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರ ಮನೆ ಎದುರು ಪ್ರತಿಭಟನೆ ನಡೆಸುವಾಗಲೂ ಇದೇ ರೀತಿ ಕಲ್ಲು ತೂರಲಾಗಿತ್ತು. ಆದರೆ ಎರಡೂ ಕಡೆ ಗದ್ದಲ, ಘರ್ಷಣೆ ನಡೆದಿಲ್ಲ.

ಕಲ್ಲು ತೂರಾಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

‘ವಿರೋಧ ಪಕ್ಷವಾದ ಆರ್‌ಜೆಡಿಯಿಂದರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆದಿದೆ. ಆದರೆ, ಎಲ್ಲಿಯೂ ಅವರು ಪೊಲೀಸರೊಂದಿಗೆ ಘರ್ಷಣೆ ನಡೆಸಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT