ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಸಂಪುಟ ಸಭೆಗೆ ಆಯೋಗ ಒಪ್ಪಿಗೆ

Last Updated 13 ಮೇ 2019, 19:35 IST
ಅಕ್ಷರ ಗಾತ್ರ

ಅಮರಾವತಿ: ಇದೇ ಮಂಗಳವಾರಕ್ಕೆ ನಿಗದಿಯಾಗಿದ್ದ ಆಂಧ್ರ ಪ್ರದೇಶ ಸಚಿವ ಸಂಪುಟ ಸಭೆಗೆ ಚುನಾವಣಾ ಆಯೋಗ ಒಪ್ಪಿಗೆ ಕೊಟ್ಟಿದೆ. ಹಾಗಾಗಿ, ಸರ್ಕಾರ ಮತ್ತು ಅಧಿಕಾರಶಾಹಿಯ ನಡುವೆ ತಲೆದೋರಬಹುದಾಗಿದ್ದ ಸಂಘರ್ಷ ತಪ್ಪಿದಂತಾಗಿದೆ.

ಮುಖ್ಯ ಕಾರ್ಯದರ್ಶಿ ಎಲ್‌.ವಿ. ಸುಬ್ರಮಣ್ಯಂ ಹಾಗೂ ಮುಖ್ಯ ಚುನಾವಣಾಧಿಕಾರಿ ಅವರಿದ್ದ ಸಮಿತಿಯು ಸಂಪುಟ ಸಭೆಯ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಆಯೋಗಕ್ಕೆ ಕಳುಹಿಸಿದೆ. ಆಯೋಗ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಫೋನಿ ಚಂಡಮಾರುತ ಪರಿಹಾರ, ಕುಡಿಯುವ ನೀರಿನ ಪರಿಸ್ಥಿತಿ, ಉದ್ಯೋಗ ಖಾತರಿ ಮೊದಲಾದ ವಿಚಾರಗಳು ಕಾರ್ಯಸೂಚಿಯಲ್ಲಿ ಸೇರಿವೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಚುನಾವಣಾ ಆಯೋಗದ ಅನುಮತಿ ಅಗತ್ಯ ಎಂದು ಸುಬ್ರಮಣ್ಯಂ ಅವರು ಹೇಳಿದ್ದರು. ಆಯೋಗದ ಅನುಮತಿ ವಿಳಂಬವಾದ ಕಾರಣದಿಂದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ರೋಶಗೊಂಡಿದ್ದರು. ಆಯೋಗದ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಕುಮ್ಮಕ್ಕಿನಂತೆ ಆಯೋಗವು ಕಿರುಕುಳ ನೀಡುತ್ತಿದೆ ಎಂದೂ ಚಂದ್ರಬಾಬು ಆರೋಪಿಸಿದ್ದರು.

ಮೇ 10ಕ್ಕೆ ನಿಗದಿಯಾಗಿದ್ದ ಸಂಪುಟ ಸಭೆಯನ್ನು ಇದೇ 14ಕ್ಕೆ ಮುಂದೂಡಲಾಗಿತ್ತು. ಆಯೋಗದ ಅನುಮತಿ ದೊರೆಯದಿದ್ದರೆ ಸಂಪುಟ ಸಭೆಯ ಬದಲಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸರ್ಕಾರ ಚಿಂತನೆ ನಡೆಸಿತ್ತು.

ಮತದಾನ ಮತ್ತು ಫಲಿತಾಂಶ ಪ್ರಕಟಣೆಯ ನಡುವೆ 40 ದಿನಗಳ ಅಂತರ ಇರುವ ಕಾರಣಕ್ಕೆ ರಾಜ್ಯದಲ್ಲಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.

ಮುಖ್ಯಮಂತ್ರಿ ಅಥವಾ ಸಚಿವರು ಕರೆಯುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳು ಭಾಗವಹಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರು. ಈಗ ಆಯೋಗವು ಸಂಪುಟ ಸಭೆಗೆ ಅನುಮತಿ ನೀಡಿದ್ದರಿಂದ ಅಧಿಕಾರಿಗಳು ನಿರಾಳರಾಗಿದ್ದಾರೆ.

ರಾಜ್ಯದಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಇದೆ. ಫೋನಿ ಚಂಡಮಾರುತದಿಂದ ಆಗಿರುವ ಹಾನಿಗೆ ಪರಿಹಾರ ಕಲ್ಪಿಸಬೇಕಿದೆ. ಜತೆಗೆ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ವೇತನ ಪಾವತಿಯೂ ಆಗಿಲ್ಲ. ಈ ಎಲ್ಲ ಕಾರಣಗಳಿಂದ ಸಂಪುಟ ಸಭೆ ನಡೆಸುವುದು ಅನಿವಾರ್ಯ ಎಂದು ಚಂದ್ರಬಾಬು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT