ಗುರುವಾರ , ಜುಲೈ 29, 2021
21 °C

ಗುಜರಾತ್‌ನ ಮತ್ತೊಬ್ಬ ಕಾಂಗ್ರೆಸ್‌ ಶಾಸಕ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಗುಜರಾತ್‌ನಲ್ಲಿ ಮತ್ತೊಬ್ಬ ಕಾಂಗ್ರೆಸ್‌ ಶಾಸಕ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಸಭಾ ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ತೀವ್ರ ಹೊಡೆತ ಬಿದ್ದಿದೆ.

ಮೊರ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಬ್ರಿಜೇಶ್‌ ಮೆರ್ಜಾ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್‌ ರಾಜೇಂದ್ರ ತ್ರಿವೇದಿ ಮೆರ್ಜಾ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆಯಿಂದ ಇದೇ 19ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್‌ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದರು. ಇದರ ಬೆನ್ನಿಗೇ ಮೆರ್ಜಾ ಅವರು ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್‌ಗೆ ತೀವ್ರ ಮುಜುಗರ ಮತ್ತು ಹಿನ್ನಡೆ ಉಂಟಾಗಿದೆ.

ಜೂನ್‌ 3ರಂದು ಅಕ್ಷಯ್‌ ಪಟೇಲ್‌ ಮತ್ತು ಜಿತು ಚೌದರಿ ಎಂಬ ಇಬ್ಬರು ಕಾಂಗ್ರೆಸ್‌ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸೋನಿಯಾ ಗಾಂಧಿಗೆ ಪತ್ರ

ಜನರ ಸೇವೆ ಮಾಡಲು ನಾನು ಕಾಂಗ್ರೆಸ್‌ಗೆ ಸೇರಿದ್ದೆ. ಆದರೆ, ಕಾಂಗ್ರೆಸ್‌ನಲ್ಲಿದ್ದುಕೊಂಡು ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಮೆರ್ಜಾ ಉಲ್ಲೇಖಿಸಿದ್ದಾರೆ.

ಲೆಕ್ಕಾಚಾರ

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ 103 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ 66 ಶಾಸಕರನ್ನು ಹೊಂದಿದೆ. ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿ ಮೂರು, ಕಾಂಗ್ರೆಸ್‌ ಒಂದು ಸ್ಥಾನವನ್ನು ಹೊಂದಿತ್ತು. ಈ ಬಾರಿ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಕಣ್ಣಿಟ್ಟಿರುವ ಎರಡನೇ ಸ್ಥಾನವನ್ನೂ ಗೆದ್ದುಕೊಳ್ಳಲು ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಹಾಕಿದೆ.

ಡಿಕೆಶಿ ಆತಿಥ್ಯದ ನೆನಪು

2017ರ ಆಗಸ್ಟ್‌ನಲ್ಲಿ ಬಿಜೆಪಿಯ ಸಂಭಾವ್ಯ ಆಪರೇಷನ್‌ನಿಂದ ಪಾರಾಗಲು ಗುಜರಾತ್‌ ಕಾಂಗ್ರೆಸ್‌ ತನ್ನ ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿತ್ತು. ಶಾಸಕರಿಗೆ ಆತಿಥ್ಯ ನೀಡುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ಸೂಚನೆ ನೀಡಿತ್ತು. ಅದರಂತೆ ಡಿಕೆಶಿ ಅವರೂ ಗುಜರಾತ್‌ನ ಶಾಸಕರಿಗೆ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಆತಿಥ್ಯ ನೀಡಿದ್ದರು.  ಅದೇ ಬೆನ್ನಲ್ಲೇ ಡಿಕೆಶಿ ವಿರುದ್ಧ ಐಟಿ ದಾಳಿಯೂ ನಡೆದಿತ್ತು. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು