ಗುರುವಾರ , ಜನವರಿ 23, 2020
28 °C
ಇಂಡಿಯಾ ಗೇಟ್‌ನಲ್ಲಿ ಧರಣಿ ನಡೆಸಿದ ಪ್ರಿಯಾಂಕಾ ಗಾಂಧಿ

ಬೀದಿಗೆ ಬಂದ ‘ಪೌರತ್ವ’ ಜಟಾಪಟಿ: ದೇಶದ ವಿವಿಧೆಡೆ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ : ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ನನ್ನ ಜೀವ ಇರುವವರೆಗೂ ಪಶ್ಚಿಮ ಬಂಗಾಳದಲ್ಲಿ ಜಾರಿ ಮಾಡಲು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ. 

‘ಸಾಧ್ಯವಿದ್ದರೆ ನನ್ನ ಸರ್ಕಾರವನ್ನು ಕಿತ್ತೊಗೆಯಿರಿ. ಒಂದು ವೇಳೆ ನೀವು ರಾಜ್ಯದಲ್ಲಿ ಈ ಕಾಯ್ದೆಗಳನ್ನು ಜಾರಿ ಮಾಡಲು ಪಟ್ಟು ಹಿಡಿದಲ್ಲಿ, ಅದು ನನ್ನ ಸಾವಿನ ಬಳಿಕ ಮಾತ್ರ’ ಎಂದು ಮಮತಾ ಹೇಳಿದ್ದಾರೆ. 

ಸೋಮವಾರ ನಗರದ ಹೃದಯ ಭಾಗದಲ್ಲಿ ಮಮತಾ ನೇತೃತ್ವದಲ್ಲಿ ಬೃಹತ್ ರ‍‍್ಯಾಲಿ ನಡೆಯಿತು. ‘ಸಿಎಎ ಬೇಡ, ಎನ್‌ಆರ್‌ಸಿ ಬೇಡ’ ಎಂಬ ಫಲಕಗಳನ್ನು ಹಿಡಿದ ಸಾವಿರಾರು ಜನರು ಮಮತಾ ಜತೆ ಹೆಜ್ಜೆ ಹಾಕಿದರು.

‘ಬಿಜೆಪಿಯಿಂದ ಹಣ ಪಡೆದಿರುವ ಕೆಲವರು ರಾಜ್ಯದಲ್ಲಿ ಹಿಂಸಾಚಾರ ಎಸಗುತ್ತಿದ್ದಾರೆ. ಮುಸ್ಲಿಂ ಸಮುದಾಯದ ಸ್ನೇಹಿತರು ಎಂಬ ಸೋಗಿನಲ್ಲಿ ಹೊರಗಿನಿಂದ ಬಂದಿರುವ ಶಕ್ತಿಗಳು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿವೆ’ ಎಂದು ಆರೋಪಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಜತೆಗೆ ಇತ್ತೀಚೆಗೆ ಮಾತಿನ ಸಂರ್ಘರ್ಷ ನಡೆಸಿದ್ದ ಮಮತಾ, ಈ ಮೂಲಕ ಅವರಿಗೆ ತಿರುಗೇಟು ನೀಡಿದರು.

‘ನನ್ನನ್ನು ಜೈಲಿಗೆ ಕಳುಹಿಸಿದರೂ ಚಿಂತೆಯಿಲ್ಲ, ಕಾಯ್ದೆ ಜಾರಿಗೆ ಬಿಡುವುದಿಲ್ಲ. ಈ ಕಾಯ್ದೆ ವಾಪಸ್ ಪಡೆಯುವವರೆಗೂ ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಎಲ್ಲರನ್ನೂ ಹೆದರಿಸಿ, ಕಾಯ್ದೆ ಜಾರಿಗೆ ಬಿಜೆಪಿ ನಿರ್ಧರಿಸಿದ್ದರೆ ಅದು ತಪ್ಪು’ ಎಂದು ಮಮತಾ ಗುಡುಗಿದರು.  

ಮಮತಾ ವಾಗ್ಬಾಣ

*ಕಾನೂನು ಸುವ್ಯವಸ್ಥೆ ಬಗ್ಗೆ ಅನ್ಯ ರಾಜ್ಯಗಳಿಗೆ ಪಾಠ ಮಾಡುವ ಮೊದಲು ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಿಸಿ

*ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮ ಖಂಡನೀಯ

*ಪರಿಸ್ಥಿತಿ ನಿಯಂತ್ರಿಸಲು ಸೇನೆಯ ನೆರವು ಬೇಕೇ ಎಂದು ಕೇಂದ್ರ ಸರ್ಕಾರ ಕೇಳಿತ್ತು. ಆದರೆ ನನ್ನ ರಾಜ್ಯದ ಪೊಲೀಸರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ

*ಕಾಯ್ದೆ ಜಾರಿ ವಿರೋಧಿಸಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಿರಿ. ಅಗತ್ಯ ಬಿದ್ದರೆ ರಕ್ತದಲ್ಲಿ ಬರೆಯಿರಿ

ವಿದ್ಯಾರ್ಥಿಗಳಿಗೆ ಬೆಂಬಲ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚಾರಿತ್ರಿಕ ಇಂಡಿಯಾ ಗೇಟ್‌ನಲ್ಲಿ ಸೋಮವಾರ ಧರಣಿ ನಡೆಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡರು ಜತೆಗಿದ್ದರು.

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಶ್ಮಿತಾದೇವ್‌ ಮತ್ತು ಇತರ ಕೆಲವು ಬೆಂಬಲಿಗರೊಂದಿಗೆ ಪ್ರಿಯಾಂಕಾ ಅವರು ಇಂಡಿಯಾ ಗೇಟ್‌ಗೆ ಬಂದರು. ಕಾಂಗ್ರೆಸ್‌ ಮುಖಂಡರಾದ ಎ.ಕೆ. ಆ್ಯಂಟನಿ, ಗುಲಾಂನಬಿ ಆಜಾದ್‌, ಅಹ್ಮದ್‌ ಪಟೇಲ್‌, ಮುಂತಾದವರು ಸ್ವಲ್ಪವೇ ಹೊತ್ತಿನಲ್ಲಿ ಪ್ರಿಯಾಂಕಾ ಅವರನ್ನು ಸೇರಿಕೊಂಡರು. 

ಫಲಕಗಳನ್ನು ಹಿಡಿದು ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಪ್ರಿಯಾಂಕಾ ಅವರು ಪ್ರತಿಭಟನೆ ನಡೆಸಲಿದ್ದಾರೆ ಎಂಬುದನ್ನು ಕೊನೆಯ ಕ್ಷಣದಲ್ಲಿ ಪ್ರಕಟಿಸಲಾಗಿತ್ತು. ಹಾಗಾಗಿ, ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದರು. ಹಲವು ಮಂದಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು. 

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ.ಯಲ್ಲಿ ಏಟು ತಿಂದ ಮಕ್ಕಳು ತಮ್ಮ ಮಕ್ಕಳ ವಯಸ್ಸಿನವರು ಎಂದು ಪ್ರಿಯಾಂಕಾ ಹೇಳಿದರು. ‘ನಾನೂ ಒಬ್ಬತಾಯಿ. ಇಲ್ಲಿರುವ ಮಕ್ಕಳು ನನ್ನ ಮಕ್ಕಳವಯಸ್ಸಿನವರೇ. ನೀವು (ಪೊಲೀಸರು) ಗ್ರಂಥಾಲಯಕ್ಕೆ ನುಗ್ಗಿ ಅವರನ್ನು ಹೊರಗೆಳೆದು ಥಳಿಸಿದ್ದೀರಿ. ಇದು ಭಾರತದ ಆತ್ಮದ ಮೇಲೆ ನಡೆದ ದಾಳಿ. ಯುವಜನರು ಭಾರತದ ಆತ್ಮ. ಪ್ರತಿಭಟನೆ ಅವರ ಹಕ್ಕು’ ಎಂದು ಎರಡು ತಾಸು ಮೌನ ಪ್ರತಿಭಟನೆಯ ಬಳಿಕ ಅವರು ಹೇಳಿದರು. 

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಸಂವಿಧಾನವನ್ನು ದಮನ ಮಾಡುವುದಕ್ಕಾಗಿ ದೇಶದ ವಿರುದ್ಧವೇ ಕೇಂದ್ರ ಸರ್ಕಾರವು ದಾಳಿ ಆರಂಭಿಸಿದೆ ಎಂದು ಅವರು ಆರೋಪಿಸಿದ್ದಾರೆ. 

ನಕ್ಸಲರು, ದೇಶದ್ರೋಹಿಗಳು ಎಂಬ ಹಣೆಪಟ್ಟಿಯನ್ನು ಪ್ರತಿಭಟನಕಾರರಿಗೆ ಬಿಜೆಪಿ ಕಟ್ಟುತ್ತಿದೆ. ಆದರೆ, ಸಂವಿಧಾನ ವನ್ನು ನಾಶ ಮಾಡುವ ಬಿಜೆಪಿಯ ಪಿತೂರಿವಿರುದ್ಧ ಅವರು ಹೋರಾಡುತ್ತಿದ್ದಾರೆ
ಎಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಅದನ್ನು ಮರೆ ಮಾಚುವುದಕ್ಕಾಗಿ ಕೋಮು ಉನ್ಮಾದವನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ಮಮತಾ ವಿರುದ್ಧ ರಾಜ್ಯಪಾಲ ಕೆಂಡಾಮಂಡಲ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ನಡೆಸಿದ ರ‍್ಯಾಲಿ ಅಸಾಂವಿಧಾನಿಕ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಶ್ ಧನಕರ್ ಹೇಳಿದ್ದಾರೆ. ಹಿಂಸಾಚಾರಕ್ಕೆ ತುತ್ತಾಗಿರುವ ರಾಜ್ಯದ ವಸ್ತುಸ್ಥಿತಿಯ ಬಗ್ಗೆ ಖುದ್ದಾಗಿ ಬಂದು ವಿವರಣೆ ನೀಡುವಂತೆ ಮಮತಾ ಅವರಿಗೆ ರಾಜ್ಯಪಾಲರು ಮಂಗಳವಾರ ಸೂಚಿಸಿದ್ದಾರೆ. 

ಮಮತಾ ನಡೆ ಖಂಡಿಸಿ ಅವರು ಟ್ವೀಟ್ ಮಾಡಿದ್ದಾರೆ. ‘ಕಳೆದ ಮೂರು ದಿನಗಳಿಂದ ನಡೆದ ಹಿಂಸೆಯ ಪ್ರತಿಭಟನೆಯನ್ನು ಸಹಜ ಸ್ಥಿತಿಗೆ ತರುವ ಬದಲು ಮುಖ್ಯಮಂತ್ರಿಯೇ ಪ್ರತಿಭಟನೆಗೆ ಇಳಿಯುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ತಲೆದೋರಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದರು. ಆದರೆ ಯಾವ ಅಧಿಕಾರಿಯೂ ರಾಜಭವನದತ್ತ ಸುಳಿಯದಿರುವುದು ಅವರ ಆಕ್ರೋಶ ಹೆಚ್ಚಿಸಿತು. 

ಎರಡೂ ಕಾಯ್ದೆಗಳನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುವ ಜಾಹೀರಾತು ಫಲಕಗಳನ್ನು ತೆಗೆಸುವಂತೆ ಅವರು ಸರ್ಕಾರಕ್ಕೆ ಸೂಚಿಸಿದ್ದರು. ಆದರೆ ಸರ್ಕಾರದಿಂದ ಅವರಿಗೆ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಅವರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ನೆಲದ ಕಾನೂನುಗಳನ್ನು ವಿರೋಧಿಸಲು ತೆರಿಗೆ ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ ಎಂದು ರಾಜ್ಯಪಾಲರು ಕಿಡಿಕಾರಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು