ಶುಕ್ರವಾರ, ಜೂನ್ 18, 2021
27 °C

ಆಂಧ್ರ ಪ್ರದೇಶ | ‘ಪ್ರಜಾ ವೇದಿಕೆ’ ವಶಕ್ಕೆ ಕ್ರಮ, ನಾಯ್ಡುಗೆ ಇನ್ನಷ್ಟು ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ: ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್‌ಡಿಎ) ಆರಂಭಿಸಿದೆ.

ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಹಣದಿಂದಲೇ ಈ ಕಟ್ಟಡವನ್ನು ನಿರ್ಮಿಸಿದ್ದರು. ಈ ಕಟ್ಟಡವನ್ನು ಖಾಲಿ ಮಾಡುವಂತೆ ಸಿಆರ್‌ಡಿಎ ಈಚೆಗೆ ಟಿಡಿಪಿಗೆ ನೋಟಿಸ್‌ ನೀಡಿತ್ತು. ಇದಾದ ಬಳಿಕ, ‘ಕಟ್ಟಡವನ್ನು ಪಕ್ಷದ ಚಟುವಟಿಕೆಗಳಿಗಾಗಿ
ನಿರ್ಮಿಸಲಾಗಿತ್ತು, ಆ ಉದ್ದೇಶಕ್ಕೆ ಬಳಸಲು ಅನುಮತಿ ಕೊಡಬೇಕು’ ಎಂದು ನಾಯ್ಡು ಅವರು ಸಿಆರ್‌ಡಿಎಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು. ಆದರೆ ಜಗನ್‌ಮೋಹನ್‌ ನೇತೃತ್ವದ ಸರ್ಕಾರವು ಅದನ್ನು ಒಪ್ಪದೆ, ಟಿಡಿಪಿಗೆ ಸೇರಿದ್ದ ಎಲ್ಲಾ ವಸ್ತುಗಳನ್ನು ಕಟ್ಟಡದೊಳಗಿಂದ ತೆರವು ಮಾಡುವ ಕೆಲಸ ಆರಂಭಿಸಿದೆ.

ಜಗನ್‌ಮೋಹನ್‌ ಅವರು ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನವು ಸೋಮವಾರ (ಜೂನ್‌ 24) ನಡೆಯಲಿದೆ. ಅದನ್ನು ಸರ್ಕಾರಿ ಕಟ್ಟಡದಲ್ಲಿರುವ ಸಭಾಂಗಣದ ಬದಲು ಉಂದವಳ್ಳಿಯ ‘ಪ್ರಜಾ ವೇದಿಕೆ’ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಿರ್ಧಾರ ಕೈಗೊಂಡ ಕೂಡಲೇ ಸಿಆರ್‌ಡಿಎಯವರು ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದರು.

‘ನಾಯ್ಡು ನೆಲೆಸಿರುವ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು ಅದನ್ನು ಶೀಘ್ರದಲ್ಲೇ ಕೆಡವಲಾಗುವುದು’ ಎಂದು ಮಂಗಳಗಿರಿ ಕ್ಷೇತ್ರದ ವೈಎಸ್‌ಆರ್‌ಸಿ ಶಾಸಕ ಈಚೆಗೆ ಎಚ್ಚರಿಕೆ ನೀಡಿದ್ದರು.

* ನಮ್ಮ ಅರ್ಜಿ ಇತ್ಯರ್ಥವಾಗುವ ಮೊದಲೇ ಕಟ್ಟಡವನ್ನು ಖಾಲಿಮಾಡಲು ಸರ್ಕಾರ ಮುಂದಾಗಿರುವುದು ಅನೈತಿಕ ನಡೆ

ಪ್ರತಿಪತಿ ಪುಲ್ಲ ರಾವ್‌, ಟಿಡಿಪಿ ನಾಯಕ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು