ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ| ಭಕ್ತರು ದಾನವಾಗಿ ನೀಡಿದ್ದ ಆಸ್ತಿ ಹರಾಜಿಗೆ ಆಂಧ್ರಪ್ರದೇಶ ಸರ್ಕಾರದ ತಡೆ

Last Updated 26 ಮೇ 2020, 6:26 IST
ಅಕ್ಷರ ಗಾತ್ರ

ತಿರುಪತಿ: ಭಕ್ತರು ದಾನವಾಗಿ ನೀಡಿದ 50 ಸ್ಥಿರಾಸ್ತಿಗಳನ್ನು ಹರಾಜು ಹಾಕುವ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ (ಟಿಟಿಡಿ) ನಿರ್ಧಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಸೋಮವಾರ ತಡೆ ನೀಡಿದೆ.

ಆಸ್ತಿ ಹರಾಜಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಆಸ್ತಿ ಹರಾಜಿನನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆಯೂ ಆದೇಶದಲ್ಲಿಟಿಟಿಡಿಗೆ ಸೂಚನೆ ನೀಡಿದೆ.

‘ಭಕ್ತರು ಮತ್ತು ಧಾರ್ಮಿಕ ಕ್ಷೇತ್ರದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಆಸ್ತಿ ಹರಾಜಿನ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ,’ ಎಂದು ಆಡಳಿತ ಮಂಡಳಿಯ ಪ್ರಮುಖರು ತಿಳಿಸಿದ್ದಾರೆ.

ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಾಖಂಡ, ಋಷಿಕೇಷದಲ್ಲಿ ದೇಗುಲಕ್ಕೆ ಭಕ್ತರು ದಾನವಾಗಿ ನೀಡಿದ ಆಸ್ತಿಗಳಿದ್ದು, ಆರ್ಥಿಕ ಮುಗ್ಗಟ್ಟು ಮತ್ತು ನಿರ್ವಹಣೆಯ ನೆಪವೊಡ್ಡಿ ಅದನ್ನು ಹರಾಜು ಹಾಕಲು ಟಿಟಿಡಿ ನಿರ್ಧಾರ ಕೈಗೊಂಡಿತ್ತು.

ಭಕ್ತರ ಹೊರತಾಗಿ ಬಿಜೆಪಿ, ಜನಸೇನಾ ಪಕ್ಷ, ಸಿಪಿಐ-ಎಂ, ಟಿಡಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಟಿಟಿಡಿಯ ನಿರ್ಧಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು. ಆಸ್ತಿ ಹರಾಜು ನಿರ್ಧಾರವು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂಥವು ಎಂಬ ವಾದಗಳು ಕೇಳಿ ಬಂದಿದ್ದವು. ಇದೇ ಹಿನ್ನೆಲೆಯಲ್ಲಿ ಸರ್ಕಾರ ಆಸ್ತಿ ಹರಾಜು ನಿರ್ಧಾರಕ್ಕೆ ತಡೆ ನೀಡಿದೆ.

‘ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಧಾರ್ಮಿಕ ಮುಖಂಡರು, ಭಕ್ತರು ಮುಂತಾದವರೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಮರುಪರಿಶೀಲಿಸುವಂತೆ ಸರ್ಕಾರ ಟಿಟಿಡಿಗೆ ನಿರ್ದೇಶನ ನೀಡಿದೆ" ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಮಾತನಾಡಿದ್ದ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ, ಆಸ್ತಿ ಹರಾಜು ಹಾಕು ದೇಗುಲ ಮಂಡಳಿಯ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT