ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ತಂತ್ರಜ್ಞಾನದಿಂದ ಹೆಚ್ಚು ಉದ್ಯೋಗ‘

ಕೇಂದ್ರ ಐ.ಟಿ ಸಚಿವ ರವಿಶಂಕರ ಪ್ರಸಾದ್ ಅಭಿಪ್ರಾಯ
Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕೃತಕ ಬುದ್ಧಿಮತ್ತೆಯಂತಹ ಸುಧಾರಿತ ತಂತ್ರಜ್ಞಾನಗಳಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಉದ್ಯೋಗ ನಷ್ಟವಾಗಲಿದೆ ಎನ್ನುವ ಭಯ ತಪ್ಪು’ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.

‘ಡಿಜಿಟಲ್‌ ಕೌಶಲದಿಂದ ಅಗಾಧ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿ ಸಾಧ್ಯವಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕೂ ಮೊದಲು ದೇಶಿ ಕಂಪನಿಗಳು ಉದ್ಯೋಗಿಗಳಿಗೆ ಕೌಶಲ ನವೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕಿದೆ.

ಹೊಸ ತಂತ್ರಜ್ಞಾನದ ಬಳಕೆ ಗೊತ್ತಿಲ್ಲದೇ ಇದ್ದಲ್ಲಿ ಮಾತ್ರವೇ ಉದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಸುಧಾರಿತ ತಂತ್ರಜ್ಞಾನಗಳ ಬೆಳವಣಿಗೆ ಮತ್ತು ಅಳವಡಿಕೆಯ ಕುರಿತು ಸಚಿವಾಲಯವು ನೀತಿ ಆಯೋಗ ಹಾಗೂ ಇತರೆ ಇಲಾಖೆಗಳೊಂದಿಗೆ ಕೆಲಸ ಮಾಡುತ್ತಿದೆ. ಕೌಶಲ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರೀಯ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ಒಕ್ಕೂಟಗಳ (ನಾಸ್ಕಾಂ) ಜತೆ ನಿರಂತರವಾಗಿ ಸಂಪರ್ಕದಲ್ಲಿದೆ.

‘ಆಡಳಿತದಲ್ಲಿನ ಸುಧಾರಣೆಗಾಗಿ ಕೃತಕ ಬುದ್ಧಿಮತ್ತೆ ಬಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ  ನಾಸ್ಕಾಂ ಜತೆಗೂಡಿ ಕೆಲಸ ಪ್ರಗತಿಯಲ್ಲಿದೆ’ ಎಂದು ಹೇಳಿದ್ದಾರೆ.

ಹೊಸ ತಂತ್ರಜ್ಞನ ಅಳವಡಿಕೆಯಿಂದ ಉದ್ಯೋಗ ನಷ್ಟದವಾಗುತ್ತಿದೆ ಎನ್ನುವ ವರದಿಗಳು ಕೇಳಿಬರುತ್ತಿವೆ. ಆದರೆ ಕೌಶಲ ಆಧಾರಿತ ಹುದ್ದೆಗಳು ಕಡಿತವಾಗುತ್ತಿಲ್ಲ. ಅಲ್ಲದೆ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದೇ ಇರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರವೃತ್ತಿ ಪ್ರತಿ ವರ್ಷವೂ ನಡೆಯುತ್ತಲೇ ಇರುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ.

ವಿಫುಲ ಉದ್ಯೋಗಾವಕಾಶ : ನಾಸ್ಕಾಂ

ತಂತ್ರಜ್ಞಾನ ನವೋದ್ಯಮ, ಇ–ಕಾಮರ್ಸ್‌, ಡಿಜಿಟಲ್ ಇಂಡಿಯಾ ಮತ್ತು ಡಿಜಿಟಲ್ ಪಾವತಿ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. 2025ರ ಒಳಗಾಗಿ ಕನಿಷ್ಠ 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ನಾಸ್ಕಾಂ ಹೇಳಿದೆ.

ತೆರಿಗೆ ಸಲಹಾ ಸಂಸ್ಥೆ ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಈಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ ಆ ಹುದ್ದೆಗಳನ್ನು ನಿಭಾಯಿಸುವ ಕೌಶಲದ ಕೊರತೆ ಇದೆ ಎನ್ನುವುದನ್ನು ಶೇ 80 ರಷ್ಟು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT