ಶನಿವಾರ, ಜೂಲೈ 4, 2020
27 °C

ಚೀನಾ ಗಡಿಯತ್ತ ಸೇನೆಯ ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದ ಸೇನಾ ಜಮಾವಣೆಯಿಂದ ಉಂಟಾಗಿರುವ ಉದ್ವಿಗ್ನ ಸ್ಥಿತಿಯೂ ಸೇರಿದಂತೆ ಭಾರತವು ಎದುರಿಸುತ್ತಿರುವ ಭದ್ರತಾ ಸವಾಲುಗಳ ಬಗ್ಗೆ ಸೇನೆಯ ಉನ್ನತ ಕಮಾಂಡರ್‌ಗಳು ಬುಧವಾರ ಸಮಾಲೋಚನೆ ಆರಂಭಿಸಿದ್ದಾರೆ. ಭೂಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಈ ಸಮಾವೇಶ ನಡೆಯುತ್ತಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿನ ಸ್ಥಿತಿಯ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಆದರೆ, ಲಡಾಖ್‌ನಲ್ಲಿನ ಉದ್ವಿಗ್ನ ಸ್ಥಿತಿಯ ಬಗ್ಗೆಯೇ ಗಮನ ಕೇಂದ್ರೀಕೃತವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಸೂಕ್ಷ್ಮ ಪ್ರದೇಶಗಳಾದ ಪ್ಯಾಂಗಾಂಗ್‌ ಸರೋವರ, ಗಾಲ್ವನ್‌ ಕಣಿವೆ, ಡೆಮ್ಚೊಕ್‌ ಮತ್ತು ದೌಲತ್‌ ಬೇಗ್‌ ಓಲ್ಡಿಯಂತಹ ಸೂಕ್ಷ್ಮ ಪ್ರದೇಶಗಳ ಎರಡೂ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಜಮಾಯಿಸಿದ್ದಾರೆ. 

ಮೇ 5ರಂದು ಪೂರ್ವ ಲಡಾಖ್‌ನಲ್ಲಿ ಚೀನಾದ 250 ಸೈನಿಕರು ಮತ್ತು ಭಾರತದ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ಏರ್ಪಟ್ಟಿತ್ತು. ಎರಡೂ ಕಡೆಯ ನೂರಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಉತ್ತರ ಸಿಕ್ಕಿಂನ ಗಡಿ ಪ್ರದೇಶದಲ್ಲಿಯೂ ಮೇ 9ರಂದು ಇಂತಹುದೇ ಘಟನೆ ನಡೆದಿತ್ತು. 

ಮಾತುಕತೆಗೆ ರಾಯಭಾರಿ ಉತ್ಸಾಹ: ಭಿನ್ನಾಭಿಪ್ರಾಯಗಳು ದ್ವಿಪಕ್ಷೀಯ ಸಂಬಂಧದ ಮೇಲೆ ಕರಿನೆರಳು ಬೀರದಂತೆ ನೋಡಿಕೊಳ್ಳಬೇಕು ಮತ್ತು ಪರಸ್ಪರ ವಿಶ್ವಾಸ ಹೆಚ್ಚಬೇಕು ಎಂದು ಭಾರತದಲ್ಲಿ ಚೀನಾದ ರಾಯಭಾರಿ ಸುನ್‌ ವೈಡಾಂಗ್‌ ಹೇಳಿದ್ದಾರೆ. 

ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವಣ ಮುಖಾಮುಖಿಯನ್ನು ಉಲ್ಲೇಖಿಸದೆಯೇ ಅವರು ಮಾತನಾಡಿದ್ದಾರೆ. ಯಾವ ದೇಶವೂ ಪರಸ್ಪರರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂಬ ನೆಲೆಯಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮಧ್ಯಸ್ಥಿಕೆ ಟ್ರಂಪ್‌ ಸಿದ್ಧ

ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸಿ, ಗಡಿ ವಿವಾದ ಶಮನಕ್ಕೆ ನೆರವಾಗಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

ಕಾಶ್ಮೀರ ವಿವಾದ ಪರಿಹಾರಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಧಾನಕಾರನಾಗಿ ಕೆಲಸ ಮಾಡಲು ಸಿದ್ಧ ಎಂದು ಟ್ರಂಪ್‌ ಅವರು ಕೆಲವು ತಿಂಗಳ ಹಿಂದೆ ಹಲವು ಬಾರಿ ಹೇಳಿದ್ದರು. ಟ್ರಂಪ್‌ ಅವರ ಹೇಳಿಕೆಯನ್ನು ಪಾಕಿಸ್ತಾನ ಸ್ವಾಗತಿಸಿತ್ತು. ಆದರೆ, ಭಾರತ ತಿರಸ್ಕರಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು