ಸಿಗಡಿ, ಮೀನು, ಬಿರಿಯಾನಿ, ಕಬಾಬ್‌ ಪಂಚಪ್ರಾಣ!

7
ಬೋಜನಪ್ರಿಯ, ಪಾಕ ಪ್ರವಿಣ..

ಸಿಗಡಿ, ಮೀನು, ಬಿರಿಯಾನಿ, ಕಬಾಬ್‌ ಪಂಚಪ್ರಾಣ!

Published:
Updated:
Deccan Herald

ನವದೆಹಲಿ: ಹಿಂದಿಯಲ್ಲಿ ಕವಿತೆ ರಚನೆ ಮತ್ತು ವಾಚನದ ಹೊರತಾಗಿ ವಾಜಪೇಯಿ ಅವರ ಮತ್ತೊಂದು ಮೆಚ್ಚಿನ ಹವ್ಯಾಸ ಎಂದರೆ ಭೋಜನ!

ಹೌದು! ವಾಜಪೇಯಿ ಭೋಜನಪ್ರಿಯರಾಗಿದ್ದರು. ಸಿಹಿ ತಿಂಡಿ ಮತ್ತು ಮಾಂಸಾಹಾರ ಎಂದರೆ ಅವರಿಗೆ ಪಂಚಪ್ರಾಣ. ಕುರುಕಲು ತಿಂಡಿ, ಉಪ್ಪು ಹಚ್ಚಿದ ನೆಲಗಡಲೆ, ಗುಲಾಬ್ ಜಾಮೂನು, ಸಿಗಡಿ ಮೀನು, ಕಬಾಬ್‌ಗಳನ್ನು ಅವರು ಚಪ್ಪರಿಸಿ ತಿನ್ನುತ್ತಿದ್ದರು.

ವೈದ್ಯರು ಆಹಾರ ಪಥ್ಯ ಸೂಚಿಸಿದ್ದರೂ ಬಾಯಿ ಚಪಲಕ್ಕೆ  ಬ್ರೇಕ್‌ ಹಾಕಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಧಾನಿಯಾಗಿದ್ದ ವಾಜಪೇಯಿ ಅವರು ಔತಣಕೂಟದಲ್ಲಿ ಆಹಾರ ಕೌಂಟರ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಸಿಹಿ ಖಾದ್ಯಗಳನ್ನು ತಿನ್ನದಂತೆ ಅವರನ್ನು ತಡೆಯುವುದು ಸವಾಲಾಗಿತ್ತು. ಅದಕ್ಕಾಗಿ ಅವರ ಆಪ್ತರು ಒಂದು ಯೋಜನೆ ರೂಪಿಸಿದರು.

ಮಾಧುರಿ ಕರೆತಂದ ಆಪ್ತರು: ಅಲ್ಲಿಯೇ ಇದ್ದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಕರೆತಂದು ವಾಜಪೇಯಿ ಅವರಿಗೆ ಪರಿಚಯಿಸಿದರು. ಅಷ್ಟರಲ್ಲಿ ಟೇಬಲ್‌ ಮೇಲಿದ್ದ ಗುಲಾಬ್‌ ಜಾಮೂನ್‌ ಮತ್ತು ಇತರ ಸಿಹಿ ತಿಂಡಿಗಳನ್ನು ಅಲ್ಲಿಂದ ಸಾಗಿಸಿಬಿಟ್ಟಿದ್ದರು.

ವಾಜಪೇಯಿ ಅವರಿಗೆ ಎಲ್ಲಿಗೆ ಹೋದರೂ ಸ್ಥಳೀಯ ತಿಂಡಿ, ತಿನಿಸುಗಳ ರುಚಿ ನೋಡುವ ಹವ್ಯಾಸವಿತ್ತು. ಹೈದರಾಬಾದ್‌ಗೆ ಹೋದರೆ ಬಿರಿಯಾನಿ, ಲಖನೌದಲ್ಲಿ ಗಲೋಟಿ ಕಬಾಬ್‌, ಕೋಲ್ಕತ್ತದಲ್ಲಿ ಪಚ್ಕಾಸ್‌ ಸವಿಯುವುದನ್ನು ಅವರು ಅಪ್ಪಿತಪ್ಪಿಯೂ ತಪ್ಪಿಸಿಕೊಳ್ಳುತ್ತಿರಲಿಲ್ಲ.

ಸಂಜೆಯ ವೇಳೆ ಹುಲ್ಲು ಹಾಸಿನ ಮೇಲೆ ಕುಳಿತು ಚಾಟ್‌ ಮಸಾಲಾ, ಪಕೋಡ ಮತ್ತು ಜತೆಗೊಂದು ಕಪ್‌ ಮಸಾಲಾ ಚಹಾ ಇದ್ದರೆ ಸಾಕು. ಪುಂಖಾನುಪುಂಖವಾಗಿ ಹಿಂದಿ ಕವನ ಹೊರಬರುತ್ತಿದ್ದವು ಎಂದು ಅವರನ್ನು ಹತ್ತಿರದಿಂದ ಕಂಡ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

ಸ್ವತಃ ಅಡುಗೆ ಮಾಡಿ ಬಡಿಸುತ್ತಿದ್ದರು: ಆಹಾರವನ್ನು ಅವರು ಯಾವಾಗಲೂ ಆನಂದಿಂದ ಆಸ್ವಾದಿಸುತ್ತಿದ್ದರು. ಬಳಿಕ ಅದರ ರುಚಿಯನ್ನು ಅಲ್ಲಿದ್ದವರಿಗೆ ರಸವತ್ತಾಗಿ ಬಣ್ಣಿಸುತ್ತಿದ್ದರು.

ಅವಿವಾಹಿತರಾಗಿದ್ದ ವಾಜಪೇಯಿ ಒಳ್ಳೆಯ ಪಾಕ ಪ್ರವೀಣರೂ ಆಗಿದ್ದರು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. ಅಡ್ವಾಣಿ ಸೇರಿದಂತೆ ಅನೇಕ ಆಪ್ತರು ಹಾಗೂ  ಕೆಲವು ಪತ್ರಕರ್ತರು ಅವರ ಕೈರುಚಿ ನೋಡಿದ್ದಾರೆ. ವಾಜಪೇಯಿ ಸ್ವತಃ ಅಡುಗೆ ಮಾಡಿ ಪತ್ರಕರ್ತರು ಮತ್ತು ಸ್ನೇಹಿತರಿಗೆ ಅನೇಕ ಬಾರಿ ಉಣ ಬಡಿಸಿದ್ದಾರೆ. ಸಾಮಾನ್ಯವಾಗಿ ಸಿಹಿ ತಿಂಡಿ ಇಲ್ಲವೇ ಮಾಂಸಾಹಾರ ಅಡುಗೆಯಲ್ಲಿ ಅವರು ಸಿದ್ಧ ಹಸ್ತರು. ಸಂಪುಟ ಸಭೆಗಳಲ್ಲಿ ಸದಾ ಅವರು ಬಾಯಿ ಆಡಿಸುತ್ತಲೇ ಇದ್ದರು.

ಉಪ್ಪು ಹಚ್ಚಿದ ನೆಲಗಡಲೆಗಳನ್ನು ಚಪ್ಪರಿಸುತ್ತಿದ್ದರು. ಔತಣಕೂಟಗಳಲ್ಲಿ ಅವರ ತಟ್ಟೆ ಖಾಲಿ ಇದ್ದದ್ದು ಕಡಿಮೆ. ಸದಾ ಅವರ ತಟ್ಟೆ ಮೀನು, ಕಬಾಬ್‌ಗಳಿಂದ ತುಂಬಿರುತ್ತಿತ್ತು. ಲಖನೌದ ಚೌಕ್‌ ಪ್ರದೇಶದಿಂದ ವಾಜಪೇಯಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಕಬಾಬ್‌ಗಳನ್ನು ತರುವುದು ಬಿಜೆಪಿ ನಾಯಕ ಲಾಲಜಿ ಟಂಡನ್ ಅವರ ನಿತ್ಯದ ಕೆಲಸವಾಗಿತ್ತು. ಕೇಂದ್ರ ಸಚಿವ ವಿಜಯ್‌ ಗೋಯಲ್‌ ಹಳೆಯ ದೆಹಲಿಯ ಅಂಗಡಿಯೊಂದರಿಂದ ಆಲೂ ಮತ್ತು ಚಾಟ್‌ ಮಸಾಲಾ ತಂದರೆ, ವೆಂಕಯ್ಯ ನಾಯ್ಡು  ಆಂಧ್ರದಿಂದ ಸಿಗಡಿ ಮೀನು ತರುತ್ತಿದ್ದರು. ಇಷ್ಟು ಇದ್ದರೆ ವಾಜಪೇಯಿ ಅವರ ಸಭೆ ರಂಗೇರುತ್ತಿತ್ತು.

ಮೈಯಲ್ಲಿ ಹುಷಾರು ಇಲ್ಲದಿದ್ದರೂ ಗೋಡಂಬಿ ಮತ್ತು ಸಮೋಸಾ ಸವಿಯುವುದನ್ನು ಮಾತ್ರ ಅವರು ಬಿಡುತ್ತಿರಲಿಲ್ಲವಂತೆ. ವಾಜಪೇಯಿ ಅವರ ನಾಲಿಗೆ ಚಾಪಲ್ಯದ ಕುರಿತು ಇಂತಹ ಅನೇಕ ರಸವತ್ತಾದ ಕಥೆಗಳನ್ನು ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 27

  Happy
 • 6

  Amused
 • 1

  Sad
 • 3

  Frustrated
 • 3

  Angry

Comments:

0 comments

Write the first review for this !