ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌: ಪ್ಯಾರಿಸ್‌ ಕಚೇರಿಗೆ ನುಗ್ಗಲು ಯತ್ನ

ಬೇಹುಗಾರಿಕೆ ಶಂಕೆ: ದಾಖಲೆಗಳ ಕಳ್ಳತನಕ್ಕೆ ಪ್ರಯತ್ನಿಸಿದ ಅನುಮಾನ
Last Updated 22 ಮೇ 2019, 18:45 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ಯಾರಿಸ್‌ನಲ್ಲಿನ ಭಾರತೀಯ ಯೋಜನಾ ನಿರ್ವಹಣಾ ತಂಡದ ಕಚೇರಿಗೆ ನುಗ್ಗಲು ಕೆಲವರು ಯತ್ನಿಸಿರುವುದು ಗೊತ್ತಾಗಿದೆ.

ಭಾರತೀಯ ವಾಯು ಪಡೆಗೆ ಸಂಬಂಧಿಸಿದ ಕಚೇರಿ ಇದಾಗಿದ್ದು, ಬೇಹುಗಾರಿಕೆ ಉದ್ದೇಶದಿಂದ ಈ ಯತ್ನ ಮಾಡಲಾಗಿದೆ ಎನ್ನುವ ಅನುಮಾನಗಳು ಮೂಡಿವೆ.

ಸೇಂಟ್‌ ಕ್ಲೌಡ್‌ ಪ್ರದೇಶದಲ್ಲಿರುವ ಈ ಕಚೇರಿಗೆ ಕಳೆದ ಭಾನುವಾರ ಅಪರಿಚಿತ ದುಷ್ಕರ್ಮಿಗಳು ನುಗ್ಗಲು ಯತ್ನಿಸಿದ್ದಾರೆ. ಈ ಕಚೇರಿ ಸಮೀಪದಲ್ಲೇ ರಫೇಲ್‌ ಯುದ್ಧ ವಿಮಾನ ತಯಾರಿಸುವ
ಡಾಸೊ ಏವಿಯೇಷನ್‌ ಕಂಪನಿಯ ಕಚೇರಿ ಇದೆ.

ಯುದ್ಧ ವಿಮಾನಕ್ಕೆ ಸಂಬಂಧಿಸಿದ ಮಾಹಿತಿ ಕದಿಯುವ ಪ್ರಯತ್ನ ಮಾಡಲಾಗಿದೆಯೇ ಎನ್ನುವ ಬಗ್ಗೆ ಪ್ಯಾರಿಸ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಹಾರ್ಡ್‌ ಡಿಸ್ಕ್‌ ಅಥವಾ ದಾಖಲೆಗಳು ಕಳುವಾಗಿಲ್ಲ. ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ರಕ್ಷಣಾ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

ಭಾರತೀಯ ವಾಯು ಪಡೆಯ ಯೋಜನಾ ನಿರ್ವಹಣಾ ತಂಡದ ನೇತೃತ್ವವನ್ನು ಗ್ರೂಪ್‌ ಕ್ಯಾಪ್ಟನ್‌ ವಹಿಸಿಕೊಂಡಿದ್ದಾರೆ. ಇಬ್ಬರು ಫೈಟರ್‌ ಪೈಲಟ್‌ಗಳು, ಶಸ್ತ್ರಾಸ್ತ್ರ ತಜ್ಞರು, ಎಂಜಿನಿಯರ್‌ಗಳು ಸಹ ಈ ತಂಡದಲ್ಲಿದ್ದಾರೆ.

ಸಕಾಲಕ್ಕೆ ಯುದ್ಧ ವಿಮಾನಗಳನ್ನು ಪಡೆಯುವ ಕುರಿತು ಈ ತಂಡ ಡಾಸೊ ಏವಿಯೇಷನ್‌ ಕಂಪನಿ ಜತೆ ಸಮನ್ವಯ ಸಾಧಿಸುತ್ತಿದೆ. ಪ್ಯಾರಿಸ್‌ನಲ್ಲಿಸೆಪ್ಟೆಂಬರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಮೊದಲ ರಫೇಲ್‌ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಉದ್ದೇಶವಿದೆ. ಆದರೆ, ಭಾರತಕ್ಕೆ ಬರುವುದು ಇನ್ನೂ ವಿಳಂಬವಾಗುವುದು ಎಂದು ಅಧಿಕಾರಿಗಳುತಿಳಿಸಿದ್ದಾರೆ.

‘ನ್ಯಾಯಾಲಯಕ್ಕೆ ತಪ್ಪು ಮಾಹಿತಿ’

‘ರಫೇಲ್‌ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ‌ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ’ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಿದೆ. ವಿಚಾರಣೆ ಸಂದರ್ಭದಲ್ಲಿ ನಿಖರ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮುಚ್ಚಿಡಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ನ್ಯಾಯಾಲಯ ಸರ್ಕಾರದ ಮೇಲೆ ವಿಶ್ವಾಸವಿಟ್ಟಿತು. ಆದರೆ, ಸರ್ಕಾರ ವಿಶ್ವಾಸದ್ರೋಹವೆಸಗಿತು. ಸುಳ್ಳುಗಳು ಮತ್ತು ಮಾಹಿತಿ ಮುಚ್ಚಿಡುವ ಮೂಲಕ ವಂಚನೆ ಎಸಗಲಾಗಿದೆ’ ಎಂದು ದೂರಿದ್ದಾರೆ. ಡಾಸೊ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ ಚಿಟ್‌ ನೀಡಿ ಡಿಸೆಂಬರ್‌ 14ರಂದು ನೀಡಿರುವ ತೀರ್ಪು ಪ್ರಶ್ನಿಸಿ ಈ ಮೂವರು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT