ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ವಿಪಕ್ಷಗಳಿಗೆ ನೂಲಿನ ಮೇಲಿನ ನಡಿಗೆ

Last Updated 7 ನವೆಂಬರ್ 2018, 20:01 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಮುನ್ನೆಲೆಗೆ ಬರುವಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿರೋಧ ಪಕ್ಷಗಳು ಈ ವಿಷಯದಲ್ಲಿ ಬಹಳ ಜಾಗರೂಕತೆಯ ಹೆಜ್ಜೆ ಇಡುತ್ತಿವೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿಯ ರಾಜಕೀಯ ಆಟಕ್ಕೆ ಬಲಿ ಬೀಳಬಾರದು ಎಂಬುದು ಈ ಪಕ್ಷಗಳ ಲೆಕ್ಕಾಚಾರ.

ಅಯೋಧ್ಯೆ ವಿವಾದವನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಆದ್ಯತೆಯಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದೂ ತಿಳಿಸಿದೆ. ಇಂತಹ ಸಂದರ್ಭದಲ್ಲಿಯೇ, ವಿರೋಧ ಪ‍ಕ್ಷಗಳು ಈ ವಿಚಾರದಲ್ಲಿ ಖೆಡ್ಡಾಕ್ಕೆ ಬೀಳುವಂತೆ ಮಾಡಬೇಕು ಎಂಬುದು ಬಿಜೆಪಿಯ ಯೋಜನೆ. ಅಯೋಧ್ಯೆ ವಿವಾದದಲ್ಲಿ ಬಿಜೆಪಿಗೆ ಕಳೆದುಕೊಳ್ಳುವುದಕ್ಕೆ ಹೆಚ್ಚೇನೂ ಇಲ್ಲ.

ಯಾವ ಪ್ರತಿಕ್ರಿಯೆ ನೀಡಿದರೂ ಕೋಮು ಧ್ರುವೀಕರಣಕ್ಕೆ ಅದು ನೆರವಾಗಲಿದೆ ಎಂಬ ಅರಿವು ವಿರೋಧ ಪಕ್ಷಗಳಿಗೆ ಇದೆ. ಸುಪ್ರೀಂ ಕೋರ್ಟ್‌ ನಿರ್ಧಾರದ ಬಳಿಕ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದ ಇತರ ಸಂಘಟನೆಗಳು ರಾಮ ಮಂದಿರ ನಿರ್ಮಾಣದ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿವೆ. ಸುಗ್ರೀವಾಜ್ಞೆಯ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಈ ಸಂಘಟನೆಗಳು ಒತ್ತಡ ಹೇರುತ್ತಿವೆ.

ಈ ಮಧ್ಯೆ, ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯಾ ಜಿಲ್ಲೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬದಲಾಯಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮನ ಭಾರಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆ ಮತ್ತು ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಸಂಘ ಪರಿವಾರದ ಸಂಘಟನೆಗಳು ಟೀಕಿಸಿವೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ಸುಪ್ರೀಂ ಕೋರ್ಟ್‌ ಆದೇಶಗಳ ವಿರುದ್ಧ ಮಾತನಾಡಿದ್ದಾರೆ. ಈ ಟೀಕೆಗಳ ಮಹತ್ವ ಏನು ಎಂಬುದು ವಿರೋಧ ಪಕ್ಷಗಳಿಗೆ ಗೊತ್ತಿದೆ.

‘ಬಿಜೆಪಿ ಈಗ ಸಂಕಷ್ಟದಲ್ಲಿದೆ ಎಂಬುದು ನಮಗೆ ತಿಳಿದಿದೆ. ಕರ್ನಾಟಕ ಉಪಚುನಾವಣೆಯ ಫಲಿತಾಂಶ ಅದರ ಇತ್ತೀಚಿನ ಸೂಚನೆ. ರಾಮ ಮಂದಿರ ವಿಚಾರದಲ್ಲಿ ನಮ್ಮ ನಿಲುವೇನು ಎಂದು ಕೇಳುವ ಮೂಲಕ ಪ್ರಚೋದಿಸಲು ಅವರು ಯತ್ನಿಸುತ್ತಿದ್ದಾರೆ. ಅದು ಉದ್ದೇಶಪೂರ್ವಕ. ನಾವು ಏನೇ ಹೇಳಿದರೂ ಅದರಿಂದ ನಮಗೆ ಸಮಸ್ಯೆ ಸೃಷ್ಟಿಯಾಗಲಿದೆ. ಹಾಗಾಗಿ, ಅವರ ಬಣ್ಣ ಬಯಲು ಮಾಡಲು ನಾವು ಯತ್ನಿಸುತ್ತಿದ್ದೇವೆ’ ಎಂದು ವಿರೋಧ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅಯೋಧ್ಯೆ ವಿವಾದದಲ್ಲಿ ಆತುರ ಮಾಡುವ ಬದಲು ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಯುವುದೇ ಒಳ್ಳೆಯದು ಎಂಬುದು ವಿರೋಧ ಪಕ್ಷಗಳ ನಿಲುವು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹತಾಶವಾಗಿದೆ ಎಂಬುದು ಸ್ಪಷ್ಟ. ಬಿಜೆಪಿ ಮೇಲೆ ಜನರಿಗೆ ಭಾರಿ ಸಿಟ್ಟು ಇದೆ ಎಂಬುದನ್ನು ಕರ್ನಾಟಕ ಉಪಚುನಾವಣೆ ಫಲಿತಾಂಶ ತೋರಿಸಿದೆ. ಸೋಲು ಸನ್ನಿಹಿತ ಎಂಬುದು ಬಿಜೆಪಿಗೆ ಅರಿವಾಗಿದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

*
ಬಿಜೆಪಿಯವರು ಅಭಿವೃದ್ಧಿಯ ಮಾತು ಬಿಟ್ಟಿದ್ದಾರೆ. ರಾಮ ಅವರಿಗೆ ಧಾರ್ಮಿಕ ಸಂಕೇತ ಅಲ್ಲ, ಬದಲಿಗೆ ರಾಜಕೀಯ ಸಾಧನ.
-ಡಿ. ರಾಜಾ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT