ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ರಾಮ ನವಮಿಯಂದು ಆರಂಭವಾಗಲಿದೆ ಮಂದಿರ ನಿರ್ಮಾಣ

2024ರ ಲೋಕಸಭೆ ಚುನಾವಣೆಗೂ ಮುನ್ನ ಪೂರ್ಣ
Last Updated 11 ನವೆಂಬರ್ 2019, 10:56 IST
ಅಕ್ಷರ ಗಾತ್ರ

ನವದೆಹಲಿ:ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾಮಗಾರಿ ಮುಂದಿನ ರಾಮ ನವಮಿಯಂದು ಆರಂಭವಾಗುವ ನಿರೀಕ್ಷೆ ಇದೆ (2020ರ ಏಪ್ರಿಲ್ 2) ಎಂದು ವರದಿಯಾಗಿದೆ.

ನಿರ್ಮಾಣ ಕಾಮಗಾರಿಯ ಪೂರ್ವಭಾವಿ ಕೆಲಸಗಳನ್ನು ಮಕರ ಸಂಕ್ರಾಂತಿಯಂದು ಆರಂಭಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಮೂಲಗಳು ತಿಳಿಸಿವೆ.

‘ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆರಂಭಿಸಲು ಇದಕ್ಕಿಂತ ಉತ್ತಮವಾದ ದಿನವಿಲ್ಲ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಟ್ರಸ್ಟ್ ರಚಿಸಲು ಸುಪ್ರೀಂ ಕೋರ್ಟ್ ವಿಧಿಸಿರುವ 3 ತಿಂಗಳ ಗಡುವು ಫೆಬ್ರುವರಿಯಲ್ಲಿ ಕೊನೆಗೊಳ್ಳಲಿದೆ. ಆ ವೇಳೆಗೆ ಎಲ್ಲ ತಯಾರಿ ಪೂರ್ಣಗೊಳ್ಳಲಿದೆ. ಆದಾಗ್ಯೂ, ಮಂದಿರ ನಿರ್ಮಾಣ ಆರಂಭಿಸುವ ದಿನಾಂಕ ನಿಗದಿಪಡಿಸುವುದಕ್ಕೂ ಮುನ್ನ ಒಮ್ಮೆ ಸರ್ಕಾರದ ಜತೆ ಸಮಾಲೋಚನೆ ನಡೆಸುತ್ತೇವೆ’ ಎಂದುವಿಎಚ್‌ಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ರಚಿಸುವ ಟ್ರಸ್ಟ್‌ನಲ್ಲಿ ರಾಮ ಜನ್ಮಭೂಮಿ ನ್ಯಾಸ್ ಮತ್ತು ವಿಎಚ್‌ಪಿಯನ್ನೂ ಸದಸ್ಯರನ್ನಾಗಿ ಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಪರಿಷತ್‌ನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಮಂದಿರ ನಿರ್ಮಾಣಕ್ಕೆ ಸುಮಾರು 4 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಮಂದಿರ ನಿರ್ಮಾಣಕ್ಕೆಂದು ಈಗಾಗಲೇ 1.25 ಲಕ್ಷ ಘನ ಅಡಿ ಕಲ್ಲುಗಳ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 1.75 ಲಕ್ಷ ಘನ ಅಡಿ ಕಲ್ಲುಗಳು ಅಗತ್ಯವಿದೆ ಎಂದು ವಿಎಚ್‌ಪಿ ಹೇಳಿದೆ.

‘ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವುದರಿಂದ ಮಂದಿರ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗದು ಎಂಬ ಭರವಸೆ ಇದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವ ಮತ್ತು ಮೂಲಸೌಕರ್ಯಗಳನ್ನು ಒದಗಿಸಿಕೊಡುವ ವಿಶ್ವಾಸವಿದೆ’ ಎಂದು ವಿಎಚ್‌ಪಿ ಹೇಳಿದೆ.

ವಾಸ್ತು ಶಿಲ್ಪಿ ಚಂದ್ರಕಾಂತ್ ಸೋಮಪುರ ಅವರು ಸಿದ್ಧಪಡಿಸಿದ ವಿನ್ಯಾಸದಲ್ಲೇ ಮಂದಿರ ನಿರ್ಮಾಣ ಮಾಡಲು ವಿಎಚ್‌ಪಿ ಬಯಸುತ್ತಿದೆ ಎನ್ನಲಾಗಿದೆ. ವಿಎಚ್‌ಪಿ ಮಾಜಿ ಮುಖ್ಯಸ್ಥ ಅಶೋಕ್ ಸಿಂಘಲ್ ಅವರ ಮನವಿಯ ಮೇರೆಗೆಚಂದ್ರಕಾಂತ್ ಅವರು ವಿನ್ಯಾಸ ಸಿದ್ಧಪಡಿಸಿಕೊಟ್ಟಿದ್ದರು. ಇದರ ಆಧಾರದಲ್ಲಿ ನಿರ್ಮಿಸಲಾಗಿರುವ ಮಂದಿರದ ಮಾದರಿಯನ್ನು ಅಯೋಧ್ಯೆಯ ಕರಸೇವಕಪುರದಲ್ಲಿ ಇಡಲಾಗಿದೆ.

ಅಯೋಧ್ಯೆಯ ಬಾಬರಿ ಮಸೀದಿ–ರಾಮ ಜನ್ಮಭೂಮಿ ವಿವಾದಿತ ನಿವೇಶನಕ್ಕೆ ಸಂಬಂಧಿಸಿ ಶನಿವಾರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಆ ಜಾಗವನ್ನು ರಾಮಲಲ್ಲಾಗೆ ನೀಡುವಂತೆ ಆದೇಶಿಸಿತ್ತು. ಮಸೀದಿ ನಿರ್ಮಾಣಕ್ಕೆ ಬೇರೆಡೆ 5 ಎಕರೆ ಜಾಗ ನೀಡುವಂತೆ ಸೂಚಿಸಿತ್ತು. ಟ್ರಸ್ಟೊಂದನ್ನು ನಿರ್ಮಿಸಿ ಅದಕ್ಕೆ ಮಂದಿರ ನಿರ್ಮಾಣದ ಹೊಣೆ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ತೀರ್ಪಿನ ಅನುಷ್ಠಾನಕ್ಕೆ 3 ತಿಂಗಳ ಗಡುವನ್ನೂ ಸರ್ವೋಚ್ಚ ನ್ಯಾಯಾಲಯ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT