ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್‌ ಎದುರು ರೂಪಾಯಿ ಕುಸಿತ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಡಾಲರ್‌ಗೆ ಹೆಚ್ಚಿದ ಬೇಡಿಕೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ ಕಂಡಿರುವುದರಿಂದ ಸೋಮವಾರ ಡಾಲರ್‌ ಎದುರಿನ ರೂಪಾಯಿ ವಿನಿಮಯ ಮೌಲ್ಯವು ₹ 67.13ಕ್ಕೆ ಕುಸಿತ ಕಂಡಿದೆ. ಇದು 15 ತಿಂಗಳ ಕನಿಷ್ಠ ಮಟ್ಟವಾಗಿದೆ.

ತೈಲ ಆಮದು ಮಾಡಿಕೊಳ್ಳುವ ಕಂಪನಿಗಳು ಭಾರಿ ಪ್ರಮಾಣದಲ್ಲಿ ಡಾಲರ್‌ ಖರೀದಿ ಮಾಡಿವೆ. ಇದರಿಂದ ರೂಪಾಯಿ ಮೌಲ್ಯ ಗಮನಾರ್ಹವಾಗಿ ಕುಸಿಯುವಂತಾಯಿತು ಎಂದು ಕರೆನ್ಸಿ ಮಾರಾಟಗಾರರು ಹೇಳಿದ್ದಾರೆ.

ಮಧ್ಯಾಹ್ನದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 67.18ಕ್ಕೆ ಇಳಿದಿತ್ತು. ನಂತರ ತುಸು ಚೇತರಿಕೆ ಕಂಡರೂ ಅಂತಿಮವಾಗಿ 28 ಪೈಸೆ ನಷ್ಟವಾಗಿ ₹ 67.13ಕ್ಕೆ ತಲುಪಿತು. 2017ರ ಫೆಬ್ರುವರಿಯಲ್ಲಿ ಒಂದು ಡಾಲರ್‌ಗೆ ₹ 67.19 ಇತ್ತು.

ಈ ವರ್ಷದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿತ ಕಾಣುತ್ತಲೇ ಬಂದಿದೆ. ಇದುವರೆಗೆ ಶೇ 5.10 ರಷ್ಟು ಇಳಿಕೆ ಕಂಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ. ಇದರಿಂದ ರೂಪಾಯಿ ಮೌಲ್ಯ ಮತ್ತಷ್ಟು ಇಳಿಕೆಯಾಗಲಿದೆ.

ರೂಪಾಯಿ ಮೌಲ್ಯದಲ್ಲಿ ಆಗುತ್ತಿರುವ ವ್ಯತ್ಯಯದಿಂದ ಆತಂಕಗೊಂಡಿರುವ ಆಮದುದಾರರು ನಷ್ಟದ ಪ್ರಮಾಣ ತಗ್ಗಿಸಲು ತಮ್ಮ ವಹಿವಾಟನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಿದ್ದಾರೆ. ರಫ್ತುದಾರರು ತಮ್ಮ ಅನೇಕ ವಾಯಿದಾ ವಹಿವಾಟುಗಳನ್ನು ರದ್ದುಪಡಿಸಿದ್ದಾರೆ.

ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗೆ ಏರಿದ ಕಚ್ಚಾ ತೈಲ ದರ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗಳಿಗೆ (₹ 5,025) ಏರಿಕೆಯಾಗಿದೆ. 2014ರ ನಂತರದ ಅತ್ಯಂತ ಗರಿಷ್ಠ ದರ ಇದಾಗಿದೆ.

ವೆನೆಜುವೆಲಾದಲ್ಲಿ ಮೂಡಿರುವ ಆರ್ಥಿಕ ಬಿಕ್ಕಟ್ಟು ಮತ್ತು ಇರಾನ್‌ ಮೇಲೆ ಅಮೆರಿಕ ಮತ್ತೆ ಆರ್ಥಿಕ ನಿರ್ಬಂಧ ಹೇರುವ ಸಾಧ್ಯತೆಯಿಂದ ತೈಲ ದರ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ 62 ಸೆಂಟ್‌ ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 75.49 ಡಾಲರ್‌ಗಳಿಗೆ ಏರಿಕೆ ಕಂಡಿತು.

ಇದರಿಂದ ತೈಲ ಮತ್ತು ಅನಿಲ ಕಂಪನಿಗಳಾದ ಗೇಲ್‌ (ಶೇ 3.93), ಆಯಿಲ್‌ ಇಂಡಿಯಾ (ಶೇ 2.57), ಐಒಸಿ (ಶೇ 1.58), ಬಿಪಿಸಿಎಲ್‌ (ಶೇ 1.43) ಮತ್ತು ಎಚ್‌ಪಿಸಿಎಲ್‌ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಭಾರತದ ಮೇಲೆ ಪರಿಣಾಮ: ಭಾರತ ತನ್ನ ಬೇಡಿಕೆಯ ಶೇ 80ಕ್ಕೂ ಅಧಿಕ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಿಂದ ವ್ಯಾಪಾರ ಕೊರತೆ ಅಂತರ ಹೆಚ್ಚಳಗೊಂಡು, ಬಂಡವಾಳ ಹೊರಹರಿವು ಏರಿಕೆಯಾಗುವ ಆತಂಕ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT