ಭಾನುವಾರ, ಸೆಪ್ಟೆಂಬರ್ 27, 2020
21 °C

ಬಂಡೀಪುರ ಸಂಚಾರ ನಿಷೇಧದ ವಿರುದ್ಧ ಕೇರಳ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧವನ್ನು ರದ್ದುಪಡಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ. 

ದೇಶದಲ್ಲಿ 50ಕ್ಕೂ ಹೆಚ್ಚು ಹುಲಿ ರಕ್ಷಿತಾರಣ್ಯಗಳಿವೆ. ಈ ಯಾವುದೇ ಅರಣ್ಯವನ್ನು ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ಇಲ್ಲ. ಹಾಗಾಗಿ, ಬಂಡೀಪುರ ರಕ್ಷಿತಾರಣ್ಯವನ್ನು ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿರುವುದು ತಾರತಮ್ಯದ ಕ್ರಮ. ಈ ರಸ್ತೆಯಲ್ಲಿ ಸಂಪೂರ್ಣವಾಗಿ ಸಂಚಾರ ನಿಷೇಧದ ಪ್ರಸ್ತಾವವು ಕೇರಳದ ವಯನಾಡ್‌ನ ಜನರಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ. ಜನರ ಸಂಚಾರದ ಹಕ್ಕನ್ನು ಖಾತರಿಪಡಿಲು ಈಗ ಇರುವ ಸಂಚಾರ ನಿಷೇಧವನ್ನು ಕೇಂದ್ರವು ತೆರವು ಮಾಡಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಕೇರಳದ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್‌ ಅವರು ನಿರ್ಣಯವನ್ನು ಮಂಡಿಸಿದರು.

ಬಂಡೀಪುರವನ್ನು ಹಾದುಹೋಗುವ ಹೆದ್ದಾರಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿ 90 ಅನ್ನು ಸೂಚಿಸಲಾಗಿದೆ. ಈ ರಸ್ತೆಗಳು ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಕೇರಳದ ತೋಲ್‌ಪಟ್ಟಿ ವನ್ಯಧಾಮವನ್ನು ಹಾದು ಹೋಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧವು ವಯನಾಡ್‌, ಗುಂಡ್ಲುಪೇಟೆ, ನಂಜನಗೂಡು ಮತ್ತು ಕೊಳ್ಳೇಗಾಲದ ಜನರಿಗೆ ಭಾರಿ ಸಂಕಷ್ಟ ಉಂಟು ಮಾಡಿದೆ ಎಂದೂ ನಿರ್ಣಯವು ಹೇಳಿದೆ.

ಬಂಡೀ‍ಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧವನ್ನು ವಿರೋಧಿಸಿ ವಯನಾಡ್‌ನಲ್ಲಿ ಕಳೆದ ತಿಂಗಳು ಭಾರಿ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್‌ ಮುಖಂಡ ಮತ್ತು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಸಂಚಾರ ನಿಷೇಧದ ವಿಚಾರದಲ್ಲಿ ಮಧ್ಯಪ್ರವೇಶಿಸುವುದಾಗಿ ಕೇರಳ ಸರ್ಕಾರ ಭರವಸೆ ಕೊಟ್ಟ ಬಳಿಕ ಈ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು