ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮೂರನೇ ಅವಧಿಗೆ ಕೇಜ್ರಿವಾಲ್‌ ಪ್ರಮಾಣ

Last Updated 16 ಫೆಬ್ರುವರಿ 2020, 21:46 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್‌ ಅವರು ಸತತ ಮೂರನೇ ಬಾರಿಗೆ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಷ್ಟ್ರ ರಾಜಧಾನಿಯನ್ನು ಜಗತ್ತಿನ ಅತ್ಯುತ್ತಮ ನಗರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಿದ್ದಾರೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಕ್ಷಮೆ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಸಮಾರಂಭ ನಡೆದ ಚಾರಿತ್ರಿಕ ರಾಮಲೀಲಾ ಮೈದಾನವು ತ್ರಿವರ್ಣ ಧ್ವಜ ಮತ್ತು ಎಎಪಿ ಧ್ವಜಗಳಿಂದ ಕಂಗೊಳಿಸುತ್ತಿತ್ತು. ಈ ಹಿಂದೆ ಎರಡು ಬಾರಿಯೂ ಇದೇ ಮೈದಾನದಲ್ಲಿ ಕೇಜ್ರಿವಾಲ್‌ ಪ್ರಮಾಣವಚನ ಸ್ವೀಕರಿಸಿದ್ದರು.

ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್‌, ಇಮ್ರಾನ್‌ ಹುಸೇನ್‌, ಕೈಲಾಶ್‌ ಗೆಹ್ಲೊಟ್‌ ಮತ್ತು ರಾಜೇಂದ್ರ ಪಾಲ್‌ ಗೌತಮ್‌ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾಲ್‌ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.

40 ನಿಮಿಷಗಳ ಕಾರ್ಯಕ್ರಮವು ಕೇಜ್ರಿವಾಲ್‌ ಅವರ ಭಾಷಣದೊಂದಿಗೆ ಮುಕ್ತಾಯವಾಯಿತು. ಔಪಚಾರಿಕ ವಿಧಿಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಮಾತನಾಡಿದರು. ದೆಹಲಿಯ ಅಭಿವೃದ್ಧಿ ಮತ್ತು ರಾಜಧಾನಿಯ ಸುಗಮ ಆಡಳಿತಕ್ಕಾಗಿ ಕೇಂದ್ರದ ಜತೆಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಹೇಳಿದರು. ಪ್ರಧಾನಿ ಮೋದಿ ಅವರ ಆಶೀರ್ವಾದ ಕೋರುವುದಾಗಿಯೂ ಹೇಳಿದರು.

‘ಕೇಜ್ರಿವಾಲ್‌ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ತಾಯಿಯ ಪ್ರೀತಿಯಂತೆ ಅತ್ಯುತ್ತಮವಾದ ಎಲ್ಲವೂ ಈ ಜಗತ್ತಿನಲ್ಲಿ ಉಚಿತವಾಗಿಯೇ ಇವೆ. ಕೇಜ್ರಿವಾಲ್‌ಗೆ ದೆಹಲಿ ಜನರ ಮೇಲೆ ಪ್ರೀತಿ ಇದೆ. ಈ ಪ್ರೀತಿಯೂ ಉಚಿತವೇ. ವಿದ್ಯಾರ್ಥಿಗಳಿಂದ ನಾನು ಶುಲ್ಕ ಸಂಗ್ರಹಿಸಬೇಕೇ? ವೈದ್ಯಕೀಯ ತಪಾಸಣೆ ಮತ್ತು ಔಷಧಿಗಾಗಿ ರೋಗಿಗಳಿಂದ ಹಣ ಪಡೆಯಬೇಕೇ? ನಾನುಹಾಗೆ ಮಾಡಿದರೆ ಅದು ನಾಚಿಕೆಗೇಡು’ ಎಂದು ಹೇಳಿದರು.

ಕೇಜ್ರಿವಾಲ್‌ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದಾರೆ ಎಂಬುದು ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ದೊಡ್ಡ ಆರೋಪ ಆಗಿತ್ತು.

ದೆಹಲಿ ನಿರ್ಮಾತೃಗಳು
ಸಮಾರಂಭದಲ್ಲಿ 50 ವಿಶೇಷ ಅತಿಥಿಗಳಿದ್ದರು. ಅವರಲ್ಲಿ, ಆರು ವರ್ಷದ ಬಾಲಕಿಯ ಅಪಹರಣವನ್ನು ತಡೆದ ಬಸ್‌ ನಿರ್ವಾಹಕ ಅರುಣ್ ಕುಮಾರ್‌, ಬೇಸಾಯದಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಶಿಕ್ಷಕ ಮತ್ತು ದೆಹಲಿ ಮೆಟ್ರೊದ ಮಹಿಳಾ ಚಾಲಕಿ ಸೇರಿದ್ದರು.

‘ಪುಟಾಣಿ ಮಫ್ಲರ್ ಮನುಷ್ಯ’ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಕಳೆದ ಮಂಗಳವಾರ ದೆಹಲಿ ಚುನಾವಣೆಯ ಮತಎಣಿಕೆ ದಿನ, ಕೇಜ್ರಿವಾಲ್‌ ಅವರಂತೆ ಮಫ್ಲರ್‌ ಧರಿಸಿದ್ದ ಒಂದು ವರ್ಷದ ಬಾಲಕನ ಫೋಟೊ ಟ್ವಿಟರ್‌ನಲ್ಲಿ ಭಾರಿ ಸಂಚಲನ ಮೂಡಿಸಿತ್ತು.

50 ವಿಶೇಷ ಅತಿಥಿಗಳಲ್ಲಿ ಈ ಬಾಲಕನೂ ಇದ್ದ. ವೈದ್ಯರು, ರಿಕ್ಷಾ ಚಾಲಕರು, ನೈರ್ಮಲ್ಯ ಕೆಲಸಗಾರರು ಕೂಡ ಈ ವಿಶೇಷ ಅತಿಥಿಗಳ ಗುಂಪಿನಲ್ಲಿ ಇದ್ದರು. ಇವರನ್ನು ‘ದೆಹಲಿಯ ನಿರ್ಮಾತೃ’ಗಳು ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ಮೂರನೇ ಅವಧಿ
*ಕೇಜ್ರಿವಾಲ್‌ ಅವರು 2013ರಲ್ಲಿ ಮೊದಲ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 49 ದಿನಗಳ ಬಳಿಕ, ಜನಲೋಕಪಾಲ ಮಸೂದೆಗೆ ಆಗ್ರಹಿಸಿ ರಾಜೀನಾಮೆ ನೀಡಿದ್ದರು

*2015ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಕೇಜ್ರಿವಾಲ್‌ ನೇತೃತ್ವದ ಎಎಪಿ 70 ಕ್ಷೇತ್ರಗಳ ಪೈಕಿ 67ರಲ್ಲಿ ಜಯಗಳಿಸಿತ್ತು. ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು

*ಈ ಬಾರಿ ಎಎಪಿ 62 ಕ್ಷೇತ್ರಗಳಲ್ಲಿ ಜಯ ಗಳಿಸಿದೆ

ದೆಹಲಿಗೆ ಸೀಮಿತ
*ಪ್ರಮಾಣವಚನ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ನೇತಾರರನ್ನು ಆಹ್ವಾನಿಸುವ
ರೂಢಿ ಇದೆ. ಆದರೆ, ಕೇಜ್ರಿವಾಲ್‌ ಅದನ್ನು ಕೈಬಿಟ್ಟಿದ್ದಾರೆ

*ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿರುವ ಅವರು ಪ್ರಮಾಣವಚನಕ್ಕೆ ಬಂದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT