ಭಾನುವಾರ, ಜನವರಿ 26, 2020
28 °C

ಬಂದ್‌ ಅಲ್ಲ ಮುಷ್ಕರ: ಸೇವೆಗಳಲ್ಲಿ ವ್ಯತ್ಯಯವಿಲ್ಲ, ಶಾಲೆ–ಕಾಲೇಜುಗಳಿಗೆ ರಜೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ( ಜ. 8) ಕರೆ ನೀಡಿರುವ ಮುಷ್ಕರ, ಬಂದ್ ಆಗಿ ಬದಲಾಗುವ ಸಾಧ್ಯತೆ ಇಲ್ಲ.

ಇದು 'ಭಾರತ್‌ ಬಂದ್‌' ಎಂಬಂತೆ ಬಿಂಬಿತವಾಗಿದ್ದು, ಅಂದು ಬಂದ್‌ ಅಲ್ಲ, ಮುಷ್ಕರ ಮಾತ್ರ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ. ಹೀಗಾಗಿ ಬಸ್‌, ಆಟೊ, ಟ್ಯಾಕ್ಸಿ, ಸರಕು ಸಾಗಣೆ, ಬ್ಯಾಂಕಿಂಗ್‌ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಲಿವೆ. 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು, ಆಟೊ, ಟ್ಯಾಕ್ಸಿ, ಕ್ಯಾಬ್‌ ಮತ್ತು ಸರಕು ಸಾಗಣೆ ಚಾಲಕರು ಮತ್ತು ಮಾಲೀಕರ ಸಂಘಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಿವೆ. ಆದರೆ, ಸೇವೆ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು ಎಂದಿನಂತೆ ಸೇವೆ ಒದಗಿಸಲಿವೆ.

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪ್ರತಿಭಟನೆ ನಡೆಸಲು ಮುಂದಾಗಿರುವ ಸಂಘಟನೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಜ. 8ರಂದು ಮುಷ್ಕರ ಅಥವಾ ಮೆರವಣಿಗೆಗೆ ಅನುಮತಿ ಇಲ್ಲ. ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೆಕ್ಷನ್ 107 (ಅನುಮತಿ ಪಡೆಯದೇ ಮೆರವಣಿಗೆ ನಡೆಸುವುದು) ಅಡಿ ಮೊಕದ್ದಮೆ ದಾಖಲಿಸುತ್ತೇವೆ. ಮೆರವಣಿಗೆ ಬದಲಿಗೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.

ಕೆಲವರು ಬಂದ್‌ಗೆ ಕರೆ ಕೊಟ್ಟಿರುವುದಾಗಿ ಭಾವಿಸಿದ್ದಾರೆ. ಬಸ್‌, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಳಿಸುವುದಿಲ್ಲ. ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಉಳಿದಂತೆ ಯಾವುದೇ ಸೇವೆಗಳು ಬಂದ್‌ ಆಗುವುದಿಲ್ಲ. ಸಾರಿಗೆ ಸಂಸ್ಥೆ ನೌಕರರು ಅಲ್ಲಲ್ಲಿ ಧರಣಿ ನಡೆಸಲಿದ್ದಾರೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಅನಂತಸುಬ್ಬರಾವ್‌ ತಿಳಿಸಿದ್ದಾರೆ.

ಮುಷ್ಕರದಲ್ಲಿ ಭಾಗಿಯಾಗದಂತೆ ಸಾರಿಗೆ ನೌಕರರ ಮೇಲೆ ಎಸ್ಮಾ (ಅಗತ್ಯ ಸೇವೆ ನಿರ್ವಹಣಾ ಕಾಯ್ದೆ) ಅಸ್ತ್ರವನ್ನು ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಎಸ್ಮಾ ಜಾರಿಗೆ ಹೆದರಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕೆಲ ನೌಕರರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಚ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಖಾಸಗಿ ಶಾಲಾ-ಕಾಲೇಜುಗಳು ಬಂದ್ ಬೆಂಬಲಿಸದ ಕಾರಣ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಆಯಾ ಶಾಲಾ ಆಡಳಿತ ಮಂಡಳಿಗೆ ರಜೆ ನೀಡುವ ಅಧಿಕಾರವ ನೀಡಲಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.

ಸಿಐಟಿಯು ಅಡಿ ಬರುವ ಆಟೊ ಚಾಲಕರ ಸಂಘಟನೆಗಳ ಮಾತ್ರ ಬೆಂಬಲ ನೀಡಿದ್ದು ಬೆಂಗಳೂರು ನಗರ ಆಟೊ ಚಾಲಕರ ಸಂಘದಿಂದ ಬೆಂಬಲ ಇಲ್ಲ. ಆದರ್ಶ ಆಟೊ ಯೂನಿಯನ್‍ ಬೆಂಬಲ ನೀಡಿಲ್ಲ. ಎಂದಿನಂತೆ ಆಟೊ, ಊಬರ್, ಟ್ಯಾಕ್ಸಿ ಸಂಚಾರ ಇರಲಿದೆ

ಖಾಸಗಿ ಪ್ರವಾಸ ವಾಹನಗಳ ಸೇವೆ ಎಂದಿನಂತೆ ಇರಲಿದ್ದು, ಲಾರಿ ಮಾಲೀಕರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿಲ್ಲ. ಎಪಿಎಂಸಿ ಮಾರುಕಟ್ಟೆ ವಹಿವಾಟು ಎಂದಿನಂತೆ ನಡೆಸಲಿದೆ.

ಕನ್ನಡ ಪರ ಸಂಘಟನೆಗಳಿಂದಲೂ ಬಂದ್ ಮಾಹಿತಿ ಇಲ್ಲ. ಸಂಬಂಧಪಟ್ಟವರು ಬೆಂಬಲ ಕೇಳಿದರೆ ನೋಡೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.

ಬಂದ್‍ಗೆ ಹೋಟೆಲ್ ಸಂಘ ಬೆಂಬಲ ಇಲ್ಲ. ಮಾಲ್‍ಗಳು ಕೂಡ ತೆರೆದಿರುತ್ತವೆ. ಬಂದ್‍ಗೆ ಟ್ಯಾಕ್ಸಿ ಮಾಲೀಕರ ಬೆಂಬಲ ನೀಡಿಲ್ಲ. ಲಾರಿ ಸಂಚಾರ ಕೂಡ ಇರಲಿದ್ದು ಅಗತ್ಯ ವಸ್ತುಗಳ ಸಾಗಣೆ ಎಂದಿನಂತಿರಲಿವೆ.

ಎಸ್‍ಬಿಐ ಹೊರತುಪಡಿಸಿ ಉಳಿದ ಎಲ್ಲ ಬ್ಯಾಂಕ್‍ಗಳ ಸೇವೆ ಸ್ಥಗಿತವಾಗುವ ಸಾಧ್ಯತೆ ಇದೆ.  ರೈತರಿಂದ ಬೆಂಬಲ ವ್ಯಕ್ತವಾಗಿದ್ದು ಬಂದ್ ದಿನ ಯಾವುದೇ ಉತ್ಪನ್ನದ ಮಾರಾಟವೂ ಇಲ್ಲ, ಖರೀದಿಯೂ ಇಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು