ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ಮಾಲಾ ಹೆದ್ದಾರಿ ಯೋಜನೆಗೆ ಹಣಕಾಸು ಕೊರತೆ, ಅನುಷ್ಠಾನ ವಿಳಂಬ

ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಯೋಜನೆಗೆ ವಿಘ್ನ
Last Updated 21 ನವೆಂಬರ್ 2018, 8:27 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆಯ ಕಾಮಗಾರಿ ಹಣಕಾಸು ಕೊರತೆಯಿಂದ ತೀವ್ರ ವಿಳಂಬವಾಗುತ್ತಿರುವುದು ತಿಳಿದು ಬಂದಿದೆ.

2017ರಲ್ಲಿ ಚಾಲನೆ ನೀಡಲಾಗಿದ್ದ ಈ ಯೋಜನೆಯ ಕಾಮಗಾರಿ ಹಲವು ಹಂತಗಳಲ್ಲಿ ಕುಂಟುತ್ತಾ ಸಾಗುತ್ತಿರುವುದು ಕೇಂದ್ರ ಸರ್ಕಾರದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ಪರಿಶೀಲನಾ ವರದಿಯಿಂದ ತಿಳಿದುಬಂದಿದೆ.

ಭೂಸ್ವಾಧೀನ, ವಿಸ್ತೃತ ಯೋಜನಾ ವರದಿ ಸಿದ್ಧತೆ, ಬಿಡ್ಡಿಂಗ್ ಮತ್ತು ಕಾಮಗಾರಿಗೆ ಆಡಳಿತಾತ್ಮಕ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆ; ಹೀಗೆ ಹಲವು ಹಂತಗಳಲ್ಲಿ ಯೋಜನೆ ನನೆಗುದಿಗೆ ಬಿದ್ದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವರದಿಯಲ್ಲಿ ಹೇಳಲಾಗಿದೆ.

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ) ಯೋಜನೆಯ ಮೊದಲ ಹಂತದಲ್ಲಿ ಐದು ವರ್ಷಗಳ ಅವಧಿಗೆ (2017–18ರಿಂದ 2021–22 ಹಣಕಾಸು ವರ್ಷದ ವರೆಗೆ) ಅಂದಾಜು ₹5.35 ಲಕ್ಷ ಕೋಟಿ ಹೂಡಿಕೆ ಮಾಡಲು ಅನುಮೋದನೆ ನೀಡಿತ್ತು. ಆರ್ಥಿಕ ಕಾರಿಡಾರ್‌ಗಳು, ಇಂಟರ್–ಕಾರಿಡಾರ್‌ಗಳು, ಗಡಿ ಹಾಗೂ ಅಂತರರಾಷ್ಟ್ರೀಯ ರಸ್ತೆಗಳು, ಕರಾವಳಿ–ಬಂದರು ಸಂಪರ್ಕ ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಮೂಲಕ ಮೂಲಸೌಕರ್ಯ ಅಂತರಗಳನ್ನು ನಿವಾರಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ಸುಮಾರು 24,800 ಕಿ.ಮೀ. ಉದ್ದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 10,000 ಕಿ.ಮೀ. ರಸ್ತೆಯೂ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

‘ಯೋಜನೆಯ ಅನುಷ್ಠಾನಕ್ಕಾಗಿ ಯೋಜನಾ ನಿರ್ವಹಣಾ ಕಚೇರಿ ಸ್ಥಾಪಿಸಲಾಗಿದೆ. ಮೊದಲ ಹಂತದ ಯೋಜನಾ ಅನುಷ್ಠಾನಕ್ಕಾಗಿ ಎಟಿ ಕೆರ್ನಿ ಮತ್ತು ಕ್ರಿಸಿಲ್ ಕಂಪನಿಗಳನ್ನು ಸಲಹಾ ಸಂಸ್ಥೆಗಳನ್ನಾಗಿ ನೇಮಕ ಮಾಡಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಯೋಜನೆಯನ್ನು ವಿವಿಧ ಏಜೆನ್ಸಿಗಳ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ, ಲೋಕೋಪಯೋಗಿ ಇಲಾಖೆ ಮತ್ತು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಗಳ ಮೂಲಕ ಸಚಿವಾಲಯ ಯೋಜನೆಯ ಅನುಷ್ಠಾನ ಮಾಡುತ್ತದೆ.

ಹಣಕಾಸು ಸಮಸ್ಯೆಗಳು...

ಯೋಜನೆಯ ಒಟ್ಟು ಬಂಡವಾಳ ವೆಚ್ಚವು ಸಿಸಿಇಎ ಅನುಮೋದನೆ ನೀಡಿರುವ ಮೊತ್ತದ ಶೇ 50ಕ್ಕಿಂತಲೂ ಹೆಚ್ಚಾಗಿದೆ. 6,361 ಕಿ.ಮೀ. ಯೋಜನೆಗೆ ಭಾರತ್‌ಮಾಲಾ ಅಡಿ ₹1.475 ಲಕ್ಷ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಪೈಕಿ, ₹1.03 ಲಕ್ಷ ಕೋಟಿ ಮೌಲ್ಯದ 4,383 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಯೂ ಸೇರಿದೆ. ಜತೆಗೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಪೂರ್ಣವಾಗಿರುವ ರಸ್ತೆ ನಿರ್ಮಾಣ ಯೋಜನೆಗಳೂ ಸೇರಿವೆ.

’ಪ್ರತಿ ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 23.1 ಕೋಟಿ ಬಂಡವಾಳ ವೆಚ್ಚ (ಭೂಸ್ವಾಧೀನ, ಕಾಮಗಾರಿಪೂರ್ವ ವೆಚ್ಚ ಎಲ್ಲ ಸೇರಿ) ಅಂದಾಜಿಸಲಾಗಿದೆ. ಇದುಸಿಸಿಇಎ ಅನುಮೋದನೆ ನೀಡಿರುವ ಮೊತ್ತದ ಶೇ 50ಕ್ಕಿಂತಲೂ ಹೆಚ್ಚಾಗಿದೆ.ಸಿಸಿಇಎ ಅನುಮೋದನೆ ನೀಡಿರುವ ಮೊತ್ತ ಪ್ರತಿ ಕಿಲೋ ಮೀಟರ್‌ಗೆ ₹15.5 ಕೋಟಿ ಆಗಿದೆ ಎಂದುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವರದಿಯಲ್ಲಿ ಹೇಳಲಾಗಿದೆ.

ವರದಿಯ ಪ್ರಕಾರ, ಭೂಸ್ವಾಧೀನಕ್ಕೇ ಹೆಚ್ಚು ವೆಚ್ಚ ತಗಲುತ್ತಿದೆ. ಪ್ರತಿ ಕಿಲೋ ಮೀಟರ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ₹13.7 ಕೋಟಿ ಅನುಮೋದನೆ ನೀಡಲಾಗಿದ್ದು, ವಾಸ್ತವದಲ್ಲಿ ₹17.3 ಕೋಟಿ ವೆಚ್ಚ ತಗಲುತ್ತದೆ. ಇದೇ ರೀತಿ,ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ 1,978 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಗೆ ₹44,309 ಕೋಟಿ (ಪ್ರತಿ ಕಿ.ಮೀ.ಗೆ ₹23.3 ಕೋಟಿ) ವೆಚ್ಚ ಅಂದಾಜಿಸಲಾಗಿದೆ. ಆದರೆ ಸಿಸಿಇಎ ಅನುಮೋದನೆ ನೀಡಿರುವ ಮೊತ್ತ ಪ್ರತಿ ಕಿ.ಮೀ.ಗೆ ₹15 ಕೋಟಿ ಆಗಿದೆ. ಹೀಗಾಗಿ ಹಣಕಾಸು ಗುರಿಯ ಹೊರತಾಗಿ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದ್ದು, ವರ್ಷದ ಗುರಿ ತಲುಪಲು ಇನ್ನಷ್ಟು ಕಷ್ಟವಾಗಬಹುದು ಎನ್ನಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 8,134 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹಮ್ಮಿ ಕೊಳ್ಳಲಾಗಿದೆ. ಆದರೆ, ಸೆಪ್ಟೆಂಬರ್ ವೇಳೆಗೆ ಕೇವಲ 268 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ಘೋಷಿಸಲಾಗಿದೆ.

‘ಮೊದಲ ತ್ರೈಮಾಸಿಕದಲ್ಲಿ 321 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹಮ್ಮಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ 118 ಕಿ.ಮೀ. ರಸ್ತೆ ನಿರ್ಮಾಣಕ್ಕಷ್ಟೇ ಅನುದಾನ ಘೋಷಿಸಲಾಗಿದೆ. ಎರಡನೇತ್ರೈಮಾಸಿಕದಲ್ಲಿ2,707 ಕಿ.ಮೀ. ಪರಿಷ್ಕೃತ ಗುರಿ ನಿಗದಿ‍ಪಡಿಸಲಾಗಿದ್ದು, ಸೆಪ್ಟೆಂಬರ್ ವರೆಗೆ ಕೇವಲ 150 ಕಿ.ಮೀ.ಗೆ ಅನುದಾನ ಘೋಷಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಭಾರತ್‌ಮಾಲಾ ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 957 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹೊಂದಿದೆ. ಆದರೆ, ಇದಕ್ಕೆ ಸೆಪ್ಟೆಂಬರ್‌ ವರೆಗೂ ಅನುದಾನ ಘೋಷಣೆಯಾಗಿಲ್ಲ. 5,944 ಕಿ.ಮೀ. ರಸ್ತೆ ನಿರ್ಮಾಣದ 122 ಯೋಜನೆಗಳಿಗೆ 2018ರ ಜನವರಿ ಒಳಗೆ ಅನುದಾನ ಘೋಷಣೆಯಾಗಬೇಕಿತ್ತು. ಈ ಪೈಕಿ 3,209 ಕಿ.ಮೀ. ರಸ್ತೆ ನಿರ್ಮಾಣದ 58 ಯೋಜನೆಗಳ ಬಿಡ್ಡಿಂಗ್ ದಾಖಲೆಗಳು ಇನ್ನೂ ಸಲ್ಲಿಕೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಹಾದುಹೋಗುವ 39 ರಸ್ತೆ ನಿರ್ಮಾಣ ಯೋಜನೆಗಳಿಗೆ ಇನ್ನೂಆಡಳಿತಾತ್ಮಕ ಸಂಸ್ಥೆಗಳ ನೇಮಕವಾಗಿಲ್ಲ. ಗುಜರಾತ್‌ಗೆ ಯೋಜನೆ ಘೋಷಣೆಯಾಗಿ ಐದು ತಿಂಗಳು ಕಳೆದರೂಆಡಳಿತಾತ್ಮಕ ಸಂಸ್ಥೆಗಳ ನೇಮಕವಾಗಿಲ್ಲ ಎಂಬುದೂ ವರದಿಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT