ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರ’ ಹಣೆಪಟ್ಟಿ: ಮಸೂದೆ ಮಂಡನೆ

Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅನುಮತಿ ನೀಡುವ ‘ಕಾನೂನು ಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ಮಸೂದೆ– 2019’ ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಮಸೂದೆಯನ್ನು ಬಲವಾಗಿ ವಿರೋಧಿಸಿರುವ ವಿರೋಧಪಕ್ಷಗಳು, ‘ಇದು ಕರಾಳ ಕಾಯ್ದೆ’ಯಾಗುವ ಸಾಧ್ಯತೆ ಇದೆ ಎಂದಿವೆ.

‘ಸರ್ಕಾರ ತರಾತುರಿಯಿಂದ ಈ ಮಸೂದೆಯನ್ನು ಮಂಡಿಸಿದೆ. ಇಂಥ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವ ಸಾಕಷ್ಟು ಕಾನೂನುಗಳು ಈಗಾಗಲೇ ಜಾರಿಯಲ್ಲಿವೆ. ಹೊಸ ಮಸೂದೆಯೊಂದನ್ನು ಸದನಕ್ಕೆ ತರುವ ಮುನ್ನ ಎಲ್ಲರ ಸಲಹೆ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಇಂಥ ಕಾನೂನು ರಚಿಸುವುದನ್ನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸಹ ವಿರೋಧಿಸಿದ್ದರು. ತಮ್ಮದೇ ಪಕ್ಷದ ಮುಖಂಡರೊಬ್ಬರ ದೃಷ್ಟಿಕೋನವನ್ನು ಬಿಜೆಪಿಯವರು ಗೌರವಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಹೇಳಿದರು.

ಈ ಬಗ್ಗೆ ಮಾತನಾಡಿದ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌, ‘ಭಯೋತ್ಪಾದನೆಯನ್ನು ಹತ್ತಿಕ್ಕುವ ಹೆಸರಿನಲ್ಲಿ ವ್ಯಕ್ತಿಯೊಬ್ಬನ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗದು. ಶಂಕಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಆಗಿರುವ ಕಷ್ಟವೇನು ಎಂಬ ಬಗ್ಗೆ ಸರ್ಕಾರವು ಸದನಕ್ಕೆ ಮಾಹಿತಿ ನೀಡಿಲ್ಲ. ಇಂಥ ವಿಚಾರಗಳಲ್ಲಿ ಸದನವನ್ನು ಕತ್ತಲಲ್ಲಿ ಇಡಬಾರದು’ ಎಂದರು.

ಗೃಹ ಸಚಿವ ಅಮಿತ್‌ ಶಾ ಪರವಾಗಿ ಮಸೂದೆಯನ್ನು ಮಂಡಿಸಿದ ಗೃಹ ಖಾತೆಯ ರಾಜ್ಯಸಚಿವ ಜಿ. ಕೃಷ್ಣಾ ರೆಡ್ಡಿ ಅವರು, ‘ಜಮಾತ್‌ ಉದ್‌– ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ವಿಶ್ವ ಸಂಸ್ಥೆಯವರು ‘ಭಯೋತ್ಪಾದಕ’ ಎಂದು ಘೋಷಿಸಬಹುದಾದರೆ ಅಂಥವೇ ಚಟುವಟಿಕೆ ನಡೆಸುವ ವ್ಯಕ್ತಿಗಳ ವಿರುದ್ಧ ಭಾರತ ಏಕೆ ಅಂಥದ್ದೇ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸಿದರು.

‘ಸರ್ಕಾರವು ಭಯೋತ್ಪಾದನೆಯ ವಿರುದ್ಧ ‘ಶೂನ್ಯ ಸಹನೆ’ಯ ನೀತಿ ಅನುಸರಿಸುತ್ತದೆ. ಅದಕ್ಕಾಗಿ ಭಯೋತ್ಪಾದನೆ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅನುವಾಗುವಂತೆ ಕಾನೂನಿಗೆ ತಿದ್ದುಪಡಿ ಮಾಡುವುದು ಅಗತ್ಯ’ ಎಂದು ಸಚಿವರು ವಾದಿಸಿದರು.

ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಲು ಸದ್ಯದ ಕಾನೂನಿನಲ್ಲಿ ಅವಕಾಶವಿದೆಯೇ ವಿನಾ, ವ್ಯಕ್ತಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ಇಲ್ಲ.

ಇವುಗಳ ಜೊತೆಗೆ ಸರ್ಕಾರಿ ನಿವಾಸಗಳಲ್ಲಿ ಅನಧಿಕೃತವಾಗಿ ಉಳಿದುಕೊಂಡಿರುವವರನ್ನು ತೆರವುಗೊಳಿಸುವ ‘ಸಾರ್ವಜನಿಕ ಸ್ಥಳ (ಅನಧಿಕೃತ ನಿವಾಸಿಗಳ ತೆರವು) ತಿದ್ದುಪಡಿ ಮಸೂದೆ–2019’ ಮತ್ತು ‘ಡಿಎನ್‌ಎ ತಂತ್ರಜ್ಞಾನ ನಿಯಂತ್ರಣ ಮಸೂದೆ’ಯನ್ನೂ ಸೋಮವಾರ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT