ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕರ್ನಾಟಕ ಭವನದಲ್ಲಿ ಕನ್ನಡೇತರ ಅಧಿಕಾರಗಳ ದರ್ಬಾರ್‌!

ಬದಲಾವಣೆಗೆ ಬಿಜೆಪಿ ಸಂಸದರಿಂದ ಒತ್ತಾಯ
Last Updated 14 ಡಿಸೆಂಬರ್ 2019, 2:53 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಕರ್ನಾಟಕ ಭವನದಲ್ಲಿ ಕಳೆದ ಒಂದು ದಶಕದಿಂದ ಕನ್ನಡೇತರ ಅಧಿಕಾರಿಗಳದ್ದೇ ದರ್ಬಾರು ನಡೆದಿದೆ. ಕನ್ನಡಿಗರ ಅವಗಣನೆಗೆ ಕಾರಣವಾಗಿರುವ ಅವರನ್ನು ಕೂಡಲೇ ವರ್ಗಾಯಿಸಿ ರಾಜ್ಯ ಮೂಲದ, ಕನ್ನಡ ಬಲ್ಲ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಬಿಜೆಪಿ ಸಂಸದರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ಕುರಿತ ಪತ್ರ ಬರೆದಿರುವ 13 ಜನ ಸಂಸದರು, ತುರ್ತು ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕ ಭವನದಲ್ಲಿನ ಜ್ವಲಂತ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಕೋರಿದ್ದಾರೆ.

ಕಳೆದ 10 ವರ್ಷಗಳಿಂದ ಕನ್ನಡೇತರ ಅಧಿಕಾರಿಗಳನ್ನೇ ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಉತ್ತರ ಭಾರತದ ಮೂಲದ ಅನೇಕ ಅಧಿಕಾರಿಗಳು ಕೌಟುಂಬಿಕ ಕಾರಣದಿಂದ ದೆಹಲಿಯಲ್ಲಿನ ಕರ್ನಾಟಕ ಭವನಕ್ಕೆ ನಿಯುಕ್ತಿ ಹೊಂದುವ ಮೂಲಕ ಕರ್ನಾಟಕದ ಹಿತಾಸಕ್ತಿಯನ್ನು ಬದಿಗಿರಿಸಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.

ರಾಜ್ಯದ ನಗರ ಯೋಜನೆ ವಿಭಾಗದ ಅಧಿಕಾರಿಗಳಾಗಿರುವ ಉತ್ತರ ಭಾರತ ಮೂಲದ ಒಂದೇ ಕುಟುಂಬದ ಇಬ್ಬರು, ಏಳು ವರ್ಷಗಳಿಂದ ಇಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ನಗರ ಯೋಜನೆ ರೂಪಿಸಲು ನೇಮಕಗೊಂಡವರನ್ನು ಇಲ್ಲಿ ಆಡಳಿತ ಮತ್ತು ಹಣಕಾಸು ವಿಭಾಗಕ್ಕೆ ನಿಯುಕ್ತಗೊಳಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ₹ 14 ಲಕ್ಷ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ನಿವಾಸಿ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಕರ್ನಾಟಕ ಭವನದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರಿಂದ ಕನ್ನಡಿಗರು ಉದ್ಯೋಗದಿಂದ ವಂಚಿತರಾಗಿದ್ದಾರೆ. 13 ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ಕನ್ನಡಿಗರಿಗೆ ಅನ್ಯಾಯವೆಸಗಿದ್ದಾರೆ. ಮೊದಲು ಇಲ್ಲಿ 150ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಈಗ 80ಕ್ಕೆ ಕುಸಿದಿದೆ ಎಂದು ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ನೇಮಿಸುವ ಮೂಲಕ ಕರ್ನಾಟಕ ಭವನದಲ್ಲಿ ಕನ್ನಡದ ವಾತಾವರಣ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎಂದು ಬಿ.ವೈ. ರಾಘವೇಂದ್ರ, ಶೋಭಾ ಕರಂದ್ಲಾಜೆ, ವೈ.ದೇವೇಂದ್ರಪ್ಪ, ಎಸ್‌.ಮುನಿಸ್ವಾಮಿ, ಎ.ನಾರಾಯಣಸ್ವಾಮಿ, ರಾಜಾ ಅಮರೇಶ ನಾಯ್ಕ, ಡಾ.ಉಮೇಶ ಜಾಧವ್‌, ಬಿ.ಎನ್‌. ಬಚ್ಚೇಗೌಡ, ತೇಜಸ್ವಿ ಸೂರ್ಯ, ಪಿ.ಸಿ. ಗದ್ದಿಗೌಡರ್‌, ಶಿವಕುಮಾರ್‌ ಉದಾಸಿ ಅವರನ್ನು ಒಳಗೊಂಡ ಸಂಸದರ ನಿಯೋಗ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT