ಮಂಗಳವಾರ, ಸೆಪ್ಟೆಂಬರ್ 22, 2020
26 °C

ಭಾರತ್ ಪೆಟ್ರೋಲಿಯಂ ಮಾರಾಟಕ್ಕೆ ಕೇಂದ್ರ ಸರ್ಕಾರದ ಸದ್ದಿಲ್ಲದ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

ಸರ್ಕಾರಿ ಸ್ವಾಮ್ಯದ ‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌’ನಲ್ಲಿ (ಬಿಪಿಸಿಎಲ್‌) ತಾನು ಹೊಂದಿರುವ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಬಿಪಿಸಿಎಲ್‌ ಖಾಸಗೀಕರಣ ಪ್ರಕ್ರಿಯೆಗೆ, ಈ ಮೊದಲು ಸಂಸತ್ತಿನ ಅನುಮೋದನೆ ಅಗತ್ಯವಾಗಿತ್ತು. ಆದರೆ, ಈ ಅನುಮೋದನೆಯನ್ನು ಕಡ್ಡಾಯಗೊಳಿಸಿದ್ದ ಕಾಯ್ದೆಯನ್ನು ಸರ್ಕಾರವು ಸದ್ದಿಲ್ಲದೆಯೇ ರದ್ದುಗೊಳಿಸಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರದ ಮೇಲೆ ನೇರ ಪರಿಣಾಮ ಬೀರುವ ಈ ಕ್ರಮವನ್ನು ಸರ್ಕಾರವು ಸದ್ದಿಲ್ಲದೆಯೇ ಕೈಗೊಂಡಿದೆ

ಸರ್ಕಾರಕ್ಕೆ ಹಣದ ಚಿಂತೆ, ಸದ್ದಿಲ್ಲದೇ ಕಾಯ್ದೆ ರದ್ದು

ಮೂಲತಃ ‘ಬರ್ಮಾ ಷೆಲ್‌’ ಹೆಸರಿನ ಈ ಕಂಪನಿಯನ್ನು 1974ರಲ್ಲಿ ರಾಷ್ಟ್ರೀಕರಣ ಮಾಡಿ, ಸರ್ಕಾರವು ತನ್ನ ಸ್ವಾಮ್ಯಕ್ಕೆ ಪಡೆದಿತ್ತು. ಈ ಕಂಪನಿಯ ಷೇರುಗಳನ್ನು ಮಾರಾಟ ಮಾಡಲು ಸಂಸತ್ತಿನ ಅನುಮೋದನೆಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು 1976ರಲ್ಲಿ ಜಾರಿಗೆ ತರಲಾಗಿತ್ತು.

‘ಷೇರುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ–2 ಸರ್ಕಾರವು 2016ರಲ್ಲೇ ಈ ಕಾಯ್ದೆಯನ್ನು ರದ್ದು ಮಾಡಿದೆ. ‘ಬಳಕೆಯಲ್ಲಿ ಇಲ್ಲದ ಮತ್ತು ಅನಗತ್ಯ ಕಾಯ್ದೆಗಳ ಹಿಂತೆಗೆತ ಕಾಯ್ದೆ–2016’ರ ಮೂಲಕ ಮೋದಿ ಸರ್ಕಾರವು 187 ಕಾಯ್ದೆಗಳನ್ನು ರದ್ದುಪಡಿಸಿತ್ತು. ಇದರಲ್ಲಿ ಬಿಪಿಸಿಎಲ್‌ನ ರಾಷ್ಟ್ರೀಕರಣ ಕಾಯ್ದೆಯೂ ಇತ್ತು’ ಎಂದು ಪೆಟ್ರೋಲಿಯಂ ಸಚಿವಾಲಯದ ಮೂಲಗಳು ಭಾನುವಾರವಷ್ಟೇ ಮಾಹಿತಿ ನೀಡಿವೆ.

ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ₹ 1.05 ಲಕ್ಷ ಕೋಟಿಯಷ್ಟು ಮೊತ್ತವನ್ನು ಬಂಡವಾಳ ಹಿಂತೆಗೆತದ ಮೂಲಕ ಸಂಗ್ರಹಿಸಲು ಯೋಜಿಸಿದೆ. ₹ 1.05 ಲಕ್ಷ ಕೋಟಿಯಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತ ಬಿ‍ಪಿಸಿಎಲ್‌ ಮಾರಾಟ ಒಂದರಿಂದಲೇ ಸರ್ಕಾರಕ್ಕೆ ಲಭಿಸಲಿದೆ. ಹೀಗಾಗಿಯೇ ಬಿಪಿಸಿಎಲ್‌ನ ಷೇರುಗಳ ಮಾರಾಟಕ್ಕೆ ಸರ್ಕಾರ ಉತ್ಸುಕವಾಗಿದೆ.

₹ 1.11 ಲಕ್ಷ ಕೋಟಿ: ಬಿಪಿಸಿಎಲ್‌ನ ಎಲ್ಲಾ ಷೇರುಗಳ ಮೌಲ್ಯ

53.3 %: ಬಿಪಿಸಿಎಲ್‌ನಲ್ಲಿ ಸರ್ಕಾರ ಹೊಂದಿರುವ ಪಾಲು

₹ 60,000–70,000 ಕೋಟಿ: ತನ್ನ ಪಾಲಿನ ಷೇರುಗಳ ಮಾರಾಟದಿಂದ ಸರ್ಕಾರಕ್ಕೆ ದೊರೆಯಬಹುದಾದ ಆದಾಯ

ವಾಜಪೇಯಿ ಅವರದ್ದೇ ಮುಂದಡಿ

ಬಿಪಿಸಿಎಲ್‌ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ಗಳಲ್ಲಿ (ಎಪಿಸಿಎಲ್‌) ಕೇಂದ್ರ ಸರ್ಕಾರ ಹೊಂದಿರುವ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ–1 ಸರ್ಕಾರ ಮುಂದಾಗಿತ್ತು. ಈ ಕಂಪನಿಗಳಲ್ಲಿ ತಾನು ಹೊಂದಿರುವ ಷೇರುಗಳನ್ನು ಸರ್ಕಾರವು ಮಾರಾಟಕ್ಕೆ ಇಟ್ಟಿತ್ತು. ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌, ಜಾಗತಿಕ ತೈಲ ದೈತ್ಯ ಟೋಟಲ್‌ ಈ ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿದ್ದವು. ಈ ಸಂಬಂಧ ಒಂದು ಹಂತದ ಮಾತುಕತೆಯೂ ನಡೆದಿತ್ತು. ಆದರೆ ಸಂಸತ್ತಿನ ಅನುಮೋದನೆ ಪಡೆಯದೆ ಮಾರಾಟಕ್ಕೆ ಮುಂದಾದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿತ್ತು. 

ಸರ್ಕಾರಕ್ಕೆ ಅಧಿಕಾರವಿಲ್ಲ: ಸುಪ್ರೀಂ

‘ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ಗಳ ಷೇರು ಮಾರಾಟಕ್ಕೆ ಸರ್ಕಾರವು ಸಂಸತ್ತಿನ ಅನುಮೋದನೆಯನ್ನು ಪಡೆಯಲೇಬೇಕು. ಈ ಪ್ರಕ್ರಿಯೆಯನ್ನು ಕಡೆಗಣಿಸಿ ಷೇರುಗಳನ್ನು ಮಾರಾಟ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆಯೇ ಎಂಬುದು ಈಗ ನಮ್ಮ ಮುಂದೆ ಇರುವ ಪ್ರಶ್ನೆ. ಆದರೆ ಅಂತಹ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ 2003ರಲ್ಲಿ ತೀರ್ಪು ನೀಡಿತ್ತು.

ಹೀಗಾಗಿ 2003ರಲ್ಲಿ ಬಿ‍ಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಷೇರುಗಳ ಮಾರಾಟ ಪ್ರಕ್ರಿಯೆಯನ್ನು ಕೈಬಿಡಲಾಗಿತ್ತು.

ಖರೀದಿಗೆ ರಿಲಯನ್ಸ್ ಆಸಕ್ತಿ

‘ಈಗ ಬಿಪಿಸಿಎಲ್‌ನ ಷೇರುಗಳನ್ನು ಖರೀದಿಸಲು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಉತ್ಸುಕವಾಗಿದೆ. ಬಿಪಿಸಿಎಲ್‌ ಷೇರುಗಳನ್ನು ಖರೀದಿಸುವುದರಿಂದ ಭಾರತದ ಶೇ 25ರಷ್ಟು ಮಾರುಕಟ್ಟೆ ಪಾಲು ರಿಲಯನ್ಸ್‌ಗೆ ಅನಾಯಾಸವಾಗಿ ದೊರೆಯಲಿದೆ. ಅಲ್ಲದೆ ಬಿಪಿಸಿಎಲ್‌ನ ಸಂಸ್ಕರಣ ಘಟಕಗಳು, ಕೊಳವೆ ಮಾರ್ಗಗಳು ಮತ್ತು ಬಂಕ್‌ಗಳು ರಿಲಯನ್ಸ್‌ನ ತೆಕ್ಕೆಗೆ ಬರಲಿವೆ. ಕಂಪನಿ ತನ್ನ ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಬಿಪಿಸಿಎಲ್‌ನ ಷೇರುಗಳ ಖರೀದಿಗೆ ಬಂಡವಾಳವನ್ನು ಹೇಗೆ ಕ್ರೋಢೀಕರಿಸಲಿದೆ ಎಂಬುದೇ ದೊಡ್ಡ ಪ್ರಶ್ನೆ’ ಎಂದು ಜಾಗತಿಕ ಷೇರು ನಿರ್ವಹಣಾ ಕಂಪನಿ ನೊಮ್ಯುರಾ ಗ್ಲೋಬಲ್‌ ಹೇಳಿದೆ.

‘ತೈಲಕ್ಕೆ ಸಂಬಂಧಿಸಿದಂತೆ ಭಾರತದ ನೀತಿಯಲ್ಲಿ ಸ್ಥಿರತೆ ಇಲ್ಲ. ಹೀಗಾಗಿ ಜಾಗತಿಕ ಕಂಪನಿಗಳು ಬಿಪಿಸಿಎಲ್‌ ಷೇರುಗಳನ್ನು ಖರೀದಿಸಲು ಹಿಂದೇಟು ಹಾಕಲಿವೆ. ಹೀಗಾಗಿ ರಿಲಯನ್ಸ್‌ ಕಂಪನಿಯೇ ಈ ಷೇರುಗಳನ್ನು ಖರೀದಿಸರುವ ಸಾಧ್ಯತೆ ಇದೆ’ ಎಂದೂ ನೊಮ್ಯುರಾ ಹೇಳಿದೆ.

ಬಿಪಿಸಿಎಲ್‌ ಷೇರುಗಳನ್ನು ಖರೀದಿಸಲು ಮತ್ತೊಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹ ಉತ್ಸುಕವಾಗಿದೆ. ‘ಆದರೆ, ಈ ಷೇರುಗಳನ್ನು ಖಾಸಗಿ ಕಂಪನಿಗಳಿಗೇ ಮಾರಾಟ ಮಾಡಬೇಕು’ ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ.

ಪರಿಣಾಮಗಳು

ಭಾರತದ ತೈಲ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲು ಶೇ 70ಕ್ಕೂ ಹೆಚ್ಚು. ಈ ಕಂಪನಿಗಳು ತೈಲ ಬೆಲೆ ಮತ್ತು ಮಾರುಕಟ್ಟೆ ನೀತಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಪ್ರಭಾವ ಬೀರುವುದಿಲ್ಲ. ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಖಾಸಗಿ ಕಂಪನಿಗಳು ಮಾರುಕಟ್ಟೆ ಮೇಲೆ ಹಿಡಿತ ಹೊಂದಿಲ್ಲ. ಈ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಪಾಲು ಹೆಚ್ಚಾದರೆ, ಅವು ತಮ್ಮ ಲಾಭಕ್ಕಾಗಿ ಲಾಬಿ ನಡೆಸುತ್ತವೆ. ದೀರ್ಘಾವಧಿಯಲ್ಲಿ ಇದು ಪೆಟ್ರೋಲ್‌, ಡೀಸೆಲ್ ಮತ್ತು ಅಡುಗೆ ಅನಿಲದ ದರದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು