ಸೇತುವೆ ಮುಳುಗುವ ಮೊದಲು ಮಗು ಕಾಪಾಡಿದ ಧೀರ ಕನ್ಹಯ್ಯಕುಮಾರ್ ಕೇರಳದಲ್ಲೀಗ ಮನೆಮಾತು

7
ರಕ್ಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

ಸೇತುವೆ ಮುಳುಗುವ ಮೊದಲು ಮಗು ಕಾಪಾಡಿದ ಧೀರ ಕನ್ಹಯ್ಯಕುಮಾರ್ ಕೇರಳದಲ್ಲೀಗ ಮನೆಮಾತು

Published:
Updated:

ಇಡುಕ್ಕಿ (ಕೇರಳ): ಎಲ್ಲಿ ನೋಡಿದರೂ ನೀರೇ ನೀರು, ಸುರಿಯುವ ಮಳೆ, ಸೇತುವೆಯನ್ನು ಕೊಚ್ಚಿಹಾಕುವ ಆವೇಶದಲ್ಲಿ ಉಕ್ಕೇರುತ್ತಿರುವ ನದಿ. ಸೇತುವೆಯ ಈಚೆದಡದಲ್ಲಿ ಒಂದಿಷ್ಟು ಜನರಿದ್ದರೆ, ಆಚೆದಡದಲ್ಲಿ ಅಪ್ಪನ ಬೆನ್ನಿಗೆ ನಿಂತ ಪುಟ್ಟ ಮಗಳು, ಅವಳಿಗೆ ತುರ್ತಾಗಿ ವೈದ್ಯಕೀಯ ಸೇವೆ ಅಗತ್ಯ. ‘ಸೇತುವೆ ದಾಟಬೇಕು ಆದರೆ ಧೈರ್ಯ ಸಾಲುತ್ತಿಲ್ಲ’ ಎಂದು ಹಿಂಜರಿದು ನಿಂತ ಅಪ್ಪ...

ಕಣ್ಣಳತೆಯಲ್ಲಿ ಇದೆಲ್ಲವನ್ನೂ ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ಅಧಿಕಾರಿ ಕನ್ಹಯ್ಯ ಕುಮಾರ್‌ಗೆ ನದಿನೀರಿನಲ್ಲಿ ಸೇತುವೆ ಕೆಲವೇ ನಿಮಿಷಗಳಲ್ಲಿ ಮುಳುಗಲಿದೆ ಎನಿಸಿತು. ತಕ್ಷಣ ಅವರು ಮಗುವಿದ್ದ ಜಾಗಕ್ಕೆ ಓಡಿಹೋಗಿ ಮಗುವನ್ನು ಎತ್ತಿಕೊಂಡರು. ಆಚೆದಡಕ್ಕೆ ಓಡಲು ಆರಂಭಿಸಿದರು. ಮಗುವಿನ ತಂದೆಯೂ ಕನ್ಹಯ್ಯ ಅವರನ್ನು ಅನುಸರಿಸಿದರು.

ಇವರು ಕ್ಷೇಮವಾಗಿ ಹಿಂದಿರುಗಿ ಬರಲಿ ಈಚೆದಡದಲ್ಲಿ ನಿಂತಿದ್ದ ನೂರಾರು ಮಂದಿ ನಿರೀಕ್ಷಿಸುತ್ತಿದ್ದರು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಮಗು ಮತ್ತು ಮಗುವಿನ ತಂದೆಯ ಜೊತೆಗೆ ಹಿಂದಿರುಗಿ ಬಂದ ಕನ್ಹಯ್ಯ ಕುಮಾರ್ ಸುಧಾರಿಸಿಕೊಳ್ಳುವ ಮೊದಲೇ ಸೇತುವೆಯ ಮೇಲೆ ನೀರು ಹರಿಯಿತು. ಅಲ್ಲಿದ್ದ ಜನರಿಗೆ ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೂ ಉಕ್ಕಿತು.

ಹೀಗೆ ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಮಗುವೊಂದನ್ನು ಕಾಪಾಡಿದ ಕನ್ಹಯ್ಯಕುಮಾರ್ ಇದೀಗ ಕೇರಳದಲ್ಲಿ ಹೀರೊ ಆಗಿದ್ದಾರೆ. ಜನರು ಅವರನ್ನು ‘A real comrade’ (ಒಬ್ಬ ನಿಜವಾದ ಸಂಗಾತಿ) ಎಂದು ಗೌರವಿಸುತ್ತಿದ್ದಾರೆ. ‘ನ್ಯೂಸ್ 18’ ಮತ್ತು ‘ಮಲಯಾಳ ಮನೋರಮಾ’ದ ಪತ್ರಕರ್ತರು ಚಿತ್ರೀಕರಿಸಿದ್ದ ಮಗು ಮತ್ತು ಇಬ್ಬರು ನಾಗರಿಕರನ್ನು ಎನ್‌ಡಿಆರ್‌ಎಫ್ ರಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ಎನ್‌ಡಿಟಿವಿ ಸುದ್ದಿವಾಹಿನಿ’ಗೆ ಘಟನೆಯ ಕುರಿತು ವಿವರಿಸಿದ ಕನ್ಹಯ್ಯಕುಮಾರ್, ‘ಆ ಮನುಷ್ಯ ಯಾರು ಎಂದು ಕೇಳುವಷ್ಟೂ ಸಮಯ ನನಗೆ ಇರಲಿಲ್ಲ. ಅವರು ಸೇತುವೆ ದಾಟಬೇಕು ಆದರೆ ಹೆದರಿದ್ದಾರೆ ಎಂದಷ್ಟೇ ನನಗೆ ಗೊತ್ತಾಗಿತ್ತು. ನಾನು ನಿಂತಿದ್ದ ಸ್ಥಳದಲ್ಲಿ ರಾಜಕಾರಣಿಗಳು, ಸ್ಥಳೀಯರು ಸೇರಿದಂತೆ ಸಾಕಷ್ಟು ಜನರಿದ್ದರು. ಅದ್ಯಾವುದೂ ಆ ಕ್ಷಣದಲ್ಲಿ ನನ್ನ ಗಮನಕ್ಕೆ ಬರಲಿಲ್ಲ. ನಾನು ಒಂದೇ ಸಮನೆ ಆಚೆದಡಕ್ಕೆ ಓಡಿದೆ. ಮಗುವನ್ನು ಎತ್ತಿಕೊಂಡು ಈಚೆದಡಕ್ಕೆ ಓಡಲು ಆರಂಭಿಸಿದೆ. ಮಗುವಿನ ತಂದೆ ನನ್ನನ್ನು ಹಿಂಬಾಲಿಸಿದರು' ಎಂದು ನೆನಪಿಸಿಕೊಂಡರು.

‘ನನಗೆ ಇಂಥ ಕೆಲಸಗಳು ಹೊಸತೇನಲ್ಲ. ರಕ್ಷಣಾ ಕಾರ್ಯಾಚರಣೆಯಲ್ಲಿ ಆರು ವರ್ಷದ ಅನುಭವವಿದೆ. ನದಿಯ ನೀರು, ಪರಿಸರ, ಸೇತುವೆಯ ಸಾಮರ್ಥ್ಯವನ್ನು ಅವಲೋಕಿಸಿದ ನಂತರ ನಾನು ಯೋಚಿಸಿ ತೆಗೆದುಕೊಂಡ ನಿರ್ಧಾರ ಇದು’ ಎನ್ನುತ್ತಾರೆ ಅವರು.

ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆ ಎದುರಾದ ನೈಸರ್ಗಿಕ ವಿಕೋಪ ಸನ್ನಿವೇಶಗಳನ್ನು ನಿರ್ವಹಿಸುವಲ್ಲಿ ಎನ್‌ಡಿಆರ್‌ಎಫ್ ತಂಡದ ಭಾಗವಾಗಿ ಕನ್ಹಯ್ಯಕುಮಾರ್ ಶ್ರಮಿಸಿದ್ದಾರೆ. ತಮಿಳುನಾಡಿನ ಅರಕೋಣಂನಲ್ಲಿರುವ ಎನ್‌ಡಿಆರ್‌ಎಫ್‌ನ ನಾಲ್ಕನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿರುವ ಕನ್ಹಯ್ಯ ಮುಳುಗು ತಜ್ಞರೂ ಹೌದು.

ಕನ್ಹಯ್ಯ ಅವರ ಕೆಲಸದ ಬಗ್ಗೆ ನನ್ನ ಮತ್ತು ನನ್ನ ತಂಡ ಹೆಮ್ಮೆ ಪಡುತ್ತದೆ. ಕನ್ಹಯ್ಯ ಅವರ ಈ ಕೆಲಸವು ಎನ್‌ಡಿಆರ್‌ಎಫ್‌ ಕುರಿತು ಜನರು ಮೆಚ್ಚುಗೆಯಿಂದ ಮಾತನಾಡುವಂತೆ ಮಾಡಿದೆ ಎಂದು ಕನ್ಹಯ್ಯ ಅವರ ಮೇಲಧಿಕಾರಿ ಮಹಾವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಮಳೆ ಮತ್ತು ಭೂಕುಸಿತದಿಂದಾಗಿ ಆಗಸ್ಟ್ 8ರಿಂದ ಈಚೆಗೆ ಕೇರಳದಲ್ಲಿ ಒಟ್ಟು 37 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್‌ 14ರವರೆಗೆ ಮಳೆ ಇದೇ ರೀತಿ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ 35 ಸಾವಿರ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಎನ್‌ಡಿಆರ್‌ಎಫ್‌ನ ಒಟ್ಟು 14 ತಂಡಗಳ 404 ಸಿಬ್ಬಂದಿ ಕೇರಳದ ಇಡುಕ್ಕಿ, ವಯನಾಡ್, ಕಾಞಂಗಾಡ್, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ರಮಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 94

  Happy
 • 3

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !