ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಬೆಂಬಲಿಸಿದ, ವಿರೋಧಿಸಿದ ಪಕ್ಷಗಳಿವು

ಬಿಎಸ್‌ಪಿ, ಬಿಜೆಡಿ, ಟಿಡಿಪಿ, ವೈಎಸ್‌ಆರ್‌ಸಿಪಿ ಬೆಂಬಲ; ಕಾಂಗ್ರೆಸ್, ಡಿಎಂಕೆ, ಸಿಪಿಎಂ ವಿರೋಧ
Last Updated 7 ಆಗಸ್ಟ್ 2019, 5:19 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಬಿಎಸ್‌ಪಿ, ಎಐಎಡಿಎಂಕೆ, ಬಿಜೆಡಿ ಸೇರಿದಂತೆಪ್ರಾದೇಶಿಕ ಪಕ್ಷಗಳು ಬೆಂಬಲಿಸಿವೆ. ಕಾಂಗ್ರೆಸ್, ಸಿಪಿಎಂ, ಎನ್‌ಸಿಪಿಸೇರಿದಂತೆ ಪಕ್ಷಗಳು ವಿರೋಧಿಸಿವೆ. ಯಾವೆಲ್ಲ ಪಕ್ಷಗಳುಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ, ಯಾವೆಲ್ಲ ಪಕ್ಷಗಳು ವಿರೋಧಿಸಿವೆ ಎಂಬುದು ಇಲ್ಲಿದೆ.

ಬೆಂಗಲಿಸಿದ ಪಕ್ಷಗಳು

ಬಿಎಸ್‌ಪಿ (ಬಹುಜನ ಸಮಾಜ ಪಕ್ಷ):ಸಂವಿಧಾನದ 370ನೇ ವಿಧಿ ರದ್ದತಿ ಪ್ರಸ್ತಾವಕ್ಕೆ ನಮ್ಮಬೆಂಬಲವಿದೆ. ಈ ಮಸೂದೆಗೆ ಸದನದ ಅಂಗೀಕಾರ ಸಿಗಬೇಕು ಎಂದು ಬಿಎಸ್‌ಪಿ ನಾಯಕ ಸತೀಶ್‌ ಚಂದ್ರ ಮಿಶ್ರಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಎಐಎಡಿಎಂಕೆ (ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ):‘ಅಮ್ಮ (ಜಯಲಲಿತಾ) ಅವರು ಯಾವತ್ತೂ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ವಿಚಾರದಲ್ಲಿ ಪರವಾಗಿದ್ದರು. ಹೀಗಾಗಿ ಕೇಂದ್ರದ ನಿರ್ಧಾರವನ್ನು ಬೆಂಬಲಿಸುತ್ತೇವೆ’ ಎಂದು ಎಐಎಡಿಎಂಕೆ ಸಂಸದ ಎ. ನವನೀತಕೃಷ್ಣನ್ ಹೇಳಿದ್ದಾರೆ.

ಬಿಜೆಡಿ (ಬಿಜು ಜನತಾ ದಳ):‘ನಿಜವಾದ ಅರ್ಥದಲ್ಲಿ ಜಮ್ಮು ಮತ್ತು ಕಾಶ್ಮೀರ ಇಂದು ಭಾರತದ ಅಂಗವಾಗಿದೆ. ನಮ್ಮ ಪಕ್ಷವು ನಿರ್ಣಯವನ್ನು ಬೆಂಬಲಿಸುತ್ತದೆ. ನಮ್ಮದು ಪ್ರಾದೇಶಿಕ ಪಕ್ಷ, ಆದರೆ ನಮಗೆ ದೇಶ ಮೊದಲು’ ಎಂದು ಬಿಜೆಡಿ ಸಂಸದ ಪ್ರಸನ್ನ ಆಚಾರ್ಯ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಶಿವಸೇನಾ:‘ಕಾಶ್ಮೀರಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಗಲಿಲ್ಲ. ಇಂದು ಕಾಶ್ಮೀರ ಕಣಿವೆಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂತು. ಇಂದು ಈ ದೇಶದ ಬಹುದೊಡ್ಡ ಕನಸು ನನಸಾಗಿದೆ. ಸಂವಿಧಾನ ತಿದ್ದುಪಡಿ ವಿರೋಧಿಸುವವರು ಕಾಶ್ಮೀರದ ಲೂಟಿಕೋರರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಅಖಂಡ ಹಿಂದೂಸ್ತಾನದ ಕನಸನ್ನು ಪ್ರಧಾನಿ ಮತ್ತು ಗೃಹ ಸಚಿವರು ಶೀಘ್ರ ಈಡೇರಿಸುತ್ತಾರೆ’ ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಹೇಳಿದ್ದಾರೆ.

ವೈಎಸ್‌ಆರ್‌ಸಿಪಿ (ಯುವಜನ ಶ್ರಮಿಕರೈತು ಕಾಂಗ್ರೆಸ್ ಪಕ್ಷ):‘ಭಾರತದೊಳಗೆ ಎರಡು ಸಂವಿಧಾನಗಳು ಹೇಗೆ ಇರಲು ಸಾಧ್ಯ? ಒಂದು ದೇಶದಲ್ಲಿ ಎರಡು ಪ್ರತ್ಯೇಕ ಬಾವುಟಗಳು ಇರಲು ಸಾಧ್ಯ? ರಾಷ್ಟ್ರಧ್ವಜ ಹರಿದು ಹಾಕುವುದು ಅಪರಾಧ ಅಲ್ಲ ಅಂದರೆ ಹೇಗೆ? ದೇಶವು ಎರಡು ಪ್ರಧಾನಿಗಳನ್ನು ಹೇಗೆ ಹೊಂದಿರಲು ಸಾಧ್ಯ? ಕಾಶ್ಮೀರಿ ಮಹಿಳೆ ಬೇರೆ ರಾಜ್ಯದ ಹುಡುಗನನ್ನು ಮದುವೆಯಾದರೆ ಏಕೆ ಆಸ್ತಿ ಹಕ್ಕು ಕಳೆದುಕೊಳ್ಳಬೇಕು? ಇದು ನಮ್ಮ ಪ್ರಶ್ನೆಗಳು. ದೇಶ ಇಂದು ನಿಜವಾದ ಅರ್ಥದಲ್ಲಿ ಏಕೀಕರಣಗೊಂಡಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್‌ ಬಾಕಿ ಉಳಿಸಿದ್ದ ಕೆಲಸವನ್ನು ಅಮಿತ್‌ ಶಾ ಪೂರ್ಣಗೊಳಿಸಿದ್ದಾರೆ. ಇದು ಐತಿಹಾಸಿಕ ನಿರ್ಧಾರ’ ಎಂದು ಆಂಧ್ರಪ್ರದೇಶದ ವೈಎಸ್‌ಆರ್‌ಸಿ ಪಕ್ಷದ ರಾಜ್ಯಸಭೆ ಸದಸ್ಯ ವಿ.ವಿಜಯ್‌ಸಾಯಿ ರೆಡ್ಡಿ ಹೇಳಿದ್ದಾರೆ.

ಟಿಡಿಪಿ (ತೆಲುಗುದೇಶಂ ಪಕ್ಷ):ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವನ್ನು ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸ್ವಾಗತಿಸುತ್ತದೆ ಎಂದು ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಶಾಂತಿ ನೆಲೆಸುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿರೋಧಿಸಿದ ಪಕ್ಷಗಳು

ಕಾಂಗ್ರೆಸ್: ‘ನೀವು ಇದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದೀರಿ. ಇದು ಎಂಥ ದಿನ ಎನ್ನುವುದನ್ನು ಇತಿಹಾಸವೇ ನಿರ್ಧರಿಸುತ್ತೆ. ನೀವು ಇಂಥ ಕೆಲಸಕ್ಕೆ ಏಕೆ ಮುಂದಾದಿರಿ? ನಿಮಗೆ ಬೇಕಾದಂತೆ ಬಹುಮತವನ್ನು ನಿರ್ಮಿಸಿಕೊಂಡಿದ್ದೀರಿ (ಮ್ಯಾನುಫೇಕ್ಚರ್ಡ್‌). ನಿಮಗೆ ಚರ್ಚೆ ಬೇಕಿಲ್ಲ. ಬಹುಮತವಿರುವ ಕಾರಣ ಈ ಮಸೂದೆಯನ್ನು ಜಾರಿ ಮಾಡಿಯೇ ತೀರುತ್ತೀರಿ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಕ್ಷೇಪಿಸಿದ್ದಾರೆ.

‘ನೀವು ಜಮ್ಮು ಮತ್ತು ಕಾಶ್ಮೀರಕ್ಕೆ ಮಾಡುತ್ತಿರುವ ಅನ್ಯಾಯವನ್ನು ದೇಶದ ಇತರ ರಾಜ್ಯಗಳಿಗೂ ಮಾಡಬಹುದು. ಅಲ್ಲಿನ ಜನರು ಪ್ರಜಾಪ್ರಭುತ್ವದ ಪರವಾಗಿ ಇದ್ದಾರೆ. ನೀವೇಕೆ ಅದನ್ನು ನಿರಾಕರಿಸುತ್ತೀರಿ’ ಎಂದು ಸಂಸದ ಪಿ.ಚಿದಂಬರಂ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿರುವ ಗಡಿ ರಾಜ್ಯವನ್ನು ಸಂವಿಧಾನದ 370ನೇ ಪರಿಚ್ಛೇದವು ಒಂದಾಗಿ ಬೆಸೆದಿತ್ತು. ಅಧಿಕಾರದ ಅಮಲೇರಿಸಿಕೊಂಡಿರುವಬಿಜೆಪಿ ಇದನ್ನು ತುಂಡರಿಸಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.

ಎಂಡಿಎಂಕೆ (ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ): ‘ಕಾಶ್ಮೀರದ ಅನನ್ಯತೆ ಕಾಪಾಡಿಕೊಳ್ಳಲು ಅವಕಾಶ ಕೊಡುತ್ತೇವೆ ಎಂದು ಹೇಳಿ ಭಾರತ ಕಾಶ್ಮೀರವನ್ನು ತನ್ನೊಂದಿಗೆ ಸೇರಿಸಿಕೊಂಡಿತ್ತು. ಆದರೆ ಇಂದು ಆ ಮಾತಿನಿಂದ ದೂರ ಸರಿಯಿತು. ಇಂದು ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ನಡೆದ ದಿನ. ಈ ಪ್ರಸ್ತಾವವನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ’ ಎಂದು ಎಂಡಿಎಂಕೆ ನಾಯಕ ವೈಕೊ ರಾಜ್ಯಸಭೆಯಲ್ಲಿತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.

ಪಿಡಿಪಿ(ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ):ಪಿಡಿಪಿ ಸದಸ್ಯರಾದ ಮೀರ್ ಮೊಹಮದ್ ಫಯಾಜ್ ಸಂವಿಧಾನದ ಪ್ರತಿಯನ್ನು ರಾಜ್ಯಸಭೆಯಲ್ಲಿ ಹರಿದು ಹಾಕಿ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಸಿಪಿಎಂ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ):‘ಇದು ನಮ್ಮ ದೇಶದ ಕರಾಳ ದಿನ. ದೇಶದ ಸಂವಿಧಾನಕ್ಕೆ ಬಿಜೆಪಿ ಅಗೌರವ ತೋರಿದೆ. ನೀವು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಜನರ ಅಭಿಪ್ರಾಯ ಕೇಳಲಿಲ್ಲ. ಅಲ್ಲಿನ ವಿಧಾನಸಭೆ ವಿಸರ್ಜಿಸಿದಿರಿ. ಚುನಾವಣೆ ನಡೆಸಲು ಸಿದ್ಧರಿಲ್ಲ. ಹೆಚ್ಚುವರಿಯಾಗಿ 35 ಸಾವಿರ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದೀರಿ. ಮತ್ತೊಂದು ಪ್ಯಾಲಸ್ಟೀನ್ ಹುಟ್ಟುಹಾಕುತ್ತಿದ್ದೀರಿ’ ಎಂದು ಸಿಪಿಎಐ ನಾಯಕ ಟಿ.ಕೆ.ರಂಗರಾಜನ್ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT