ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌–2019: ಓಲೈಕೆಗೆ ಕಸರತ್ತು, ಸಂಪನ್ಮೂಲಕ್ಕಿಲ್ಲ ಒತ್ತು

Last Updated 1 ಫೆಬ್ರುವರಿ 2019, 20:33 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅತ್ಯುತ್ತಮ ಎಂದು ಅನೇಕರು ಬಣ್ಣಿಸುತ್ತಿದ್ದಾರೆ. ಚುನಾವಣೆಯ ಲೆಕ್ಕಚಾರದಿಂದ ನೋಡುವುದಾದರೆ ಈ ಮಾತನ್ನು ಒಪ್ಪಬಹುದೆನೋ. ಆದರೆ, ಆರ್ಥಿಕ ಶಿಸ್ತಿನ ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಉತ್ತಮ ಬಜೆಟ್ ಎನ್ನಲು ಸಾಧ್ಯವಿಲ್ಲ. ಚುನಾವಣೆ ಪರ್ವದಲ್ಲಿ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಮಧ್ಯಂತರ ಬಜೆಟ್‌ನಲ್ಲಿ ವಿತ್ತೀಯ ಶಿಸ್ತನ್ನು ಗಾಳಿಗೆ ತೂರಲಾಗಿದೆ. ಆದಾಯದ ಹೊಸ ಮೂಲಗಳನ್ನು ಹುಡುಕದೆ ಲಭ್ಯ ಸಂಪನ್ಮೂಲವನ್ನೇ ಜನರ ಓಲೈಕೆಗೆ ಮೀಸಲಿಟ್ಟಿರುವುದು ಬಜೆಟ್ ಘೋಷಣೆಗಳಲ್ಲಿ ಸ್ಪಷ್ಟವಾಗುತ್ತದೆ.

ಜನಪ್ರಿಯ ಯೋಜನೆಗಳ ಭಾರ: ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ ಕಾನೂನಿನ (ಎಫ್‌ಆರ್‌ಬಿಎಂ) ಚೌಕಿಟ್ಟಿಗೆ ಅಂಟಿಕೊಳ್ಳದಿರುವುದು, ಜಿಎಸ್‌ಟಿಯಲ್ಲಿ ನಿರೀಕ್ಷಿತ ಆದಾಯ ಬಾರದಿರುವುದು, ಹೊಸ ಯೋಜನೆಗಳ ಘೋಷಣೆ ವಿತ್ತೀಯ ಕೊರತೆ ನಿಯಂತ್ರಣಕ್ಕೆ ಸವಾಲಾಗಿವೆ.

ಇದರ ನಡುವೆಯೇ ₹ 5 ಲಕ್ಷ ವರೆಗಿನ ನಿವ್ವಳ ಆದಾಯ ಹೊಂದಿರುವವರಿಗೆ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಇದರಿಂದ ₹ 23 ಸಾವಿರ ಕೋಟಿ ಹೊರೆಯಾಗಲಿದೆ. ಎಲ್ಲಾ ಕೊಡುಗೆಗಳಿಂದ ಉಂಟಾಗುವ ಹೊರೆಗೆ ಪರ್ಯಾಯ ಸಂಪನ್ಮೂಲ ಎಲ್ಲಿ ಎನ್ನುವುದು ಅಸ್ಪಷ್ಟವಾಗಿದೆ.

2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ 12 ಕೋಟಿ ರೈತ ಕುಟುಂಬಗಳಿಗೆ ವರ್ಷಕ್ಕೆ ₹ 6 ಸಾವಿರಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಿಸಲಾಗಿದೆ. ₹ 75,000 ಕೋಟಿ ಮೊತ್ತದ ಈ ಯೋಜನೆ ಕೇಳಲು ಹಿತವೆನಿಸಿದರು ಅಭಿವೃದ್ಧಿಗೆ ಇದು ಪೂರಕವಲ್ಲ.

ಅಸಂಘಟಿತ ಕಾರ್ಮಿಕರನ್ನು ಸೆಳೆಯಲು ಪ್ರಧಾನಮಂತ್ರಿ ಶ್ರಮಯೋಗಿ ಮಂಧಾನ ಪಿಂಚಣಿ ಯೋಜನೆ ಘೋಷಿಸಿದೆ. ಇದರಂತೆ ವ್ಯಕ್ತಿಗೆ 60 ವರ್ಷಗಳ ನಂತರ ತಿಂಗಳಿಗೆ ₹ 3 ಸಾವಿರ ಪಿಂಚಣಿ ಸಿಗಲಿದೆ. ಈ ಯೋಜನೆ ಉತ್ತಮವಾಗಿದೆ ಎಂದರೂ ಆರ್ಥಿಕ ಹೊರೆಗೆ ಕಾರಣವಾಗಲಿದೆ.

ಸವಾಲುಗಳೇ ಹೆಚ್ಚು: ನೇರ ತೆರಿಗೆ ಸಂಗ್ರಹದಲ್ಲಿ ಸುಧಾರಣೆಯಾಗಿದೆ. ₹ 6.38 ಲಕ್ಷ ಕೋಟಿ ಇದ್ದ ಸಂಗ್ರಹ ₹ 12 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ, ಜಿಎಸ್‌ಟಿ ನಿಗದಿತ ಗುರಿ ಮುಟ್ಟುವುದು ಕಷ್ಟಸಾಧ್ಯವೆನಿಸುತ್ತಿದೆ. 2018- 19 ನೇ ಸಾಲಿನಲ್ಲಿ ₹ 12.9 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಮೊದಲ ಮೂರು ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹ ₹ 8,71,043 ಮುಟ್ಟಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ₹ 11 ಲಕ್ಷ ಕೋಟಿಯಷ್ಟಿದೆ. ಈ ಎಲ್ಲ ಸವಾಲುಗಳ ಮಧ್ಯೆ ಹಣದುಬ್ಬರ, ಜಿಡಿಪಿ ದರ ಮತ್ತು ಬಡ್ಡಿ ದರವನ್ನು ಸ್ಥಿರವಾಗಿಡುವ ಸವಾಲು ಕೂಡ ಸರ್ಕಾರದ
ಮೇಲಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಹಿನ್ನಡೆಯಾಗಿದ್ದರೂ ಸಹಿತ 2019-20 ನೇ ಸಾಲಿನಲ್ಲಿ ಶೇ 21 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜು ಮಾಡಿದೆ. ಆದಾಯ ತೆರಿಗೆ ಸಂಗ್ರಹ ಪ್ರಮಾಣವು ಶೇ 17.2 ರಷ್ಟು ಏರಿಕೆ ಕಾಣಲಿದೆ ಹಾಗೂ ಕಾರ್ಪೊರೇಟ್ ತೆರಿಗೆ ಸಂಗ್ರಹ ಶೇ 13.3 ರಷ್ಟು ಏರಿಕೆಯಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಹೊಂದಿದೆ. ಇದಲ್ಲದೆ ₹ 90 ಸಾವಿರ ಕೋಟಿ ಮೊತ್ತದ ಷೇರು ವಿಕ್ರಯ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 4.47 ಲಕ್ಷ ಕೋಟಿಗಳಷ್ಟು ಸಾಲವನ್ನು ಸರ್ಕಾರ ಪಡೆದುಕೊಂಡಿದೆ. ವಾಸ್ತವ ಚಿತ್ರಣ ಅಂದಾಜಿಗೆ ಹತ್ತಿರವಿರುವುದೇ ಎನ್ನುವ ಸಂದೇಹ ಇದೆ.

ವಿತ್ತೀಯ ಕೊರತೆಯ ನೋಟ: ಆರ್ಥಿಕ ವ್ಯವಸ್ಥೆಗೆ ವಿತ್ತೀಯ ಕೊರತೆ ಎನ್ನುವುದು ಮಾರಕ. ವಿತ್ತೀಯ ಕೊರತೆ ಕಡಿಮೆ ಇದ್ದಾಗ ಬಜೆಟ್‌ಗೆ ಬಲ ಬರುತ್ತದೆ. ಬರುವ ಒಟ್ಟು ಆದಾಯಕ್ಕಿಂತ ಖರ್ಚು ಜಾಸ್ತಿ ಇದ್ದರೆ ಅದನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ.

ಎನ್‌ಡಿಎ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿತ್ತೀಯ ಕೊರತೆಯನ್ನು ತಗ್ಗಿಸಲು ಪ್ರಯತ್ನ ಮಾಡುತ್ತಲೇ ಬಂದಿದೆ. 2014 ಅಂದರೆ, ಯುಪಿಎ ಆಡಳಿತದ ಕೊನೆಯ ವರ್ಷದಲ್ಲಿ ವಿತ್ತೀಯ ಕೊರತೆ ಶೇ 4.6 ರಷ್ಟಿತ್ತು. ಎನ್‌ಡಿಎ ಅವಧಿಯ 2015-16 ರಲ್ಲಿ ಈ ಕೊರತೆಯ ಪ್ರಮಾಣ ಜಿಡಿಪಿಯ ಶೇ 3.9ಕ್ಕೆ ತಗ್ಗಿತು. ಅದು ಮುಂದಿನ ಎರಡು ವರ್ಷಗಳಲ್ಲಿ ಶೇ 3.5 ಕ್ಕೆ ನಿಂತಿತ್ತು. 2018-19 ನೇ ಸಾಲಿನಲ್ಲಿ ಶೇ 3.3 ಕ್ಕೆ ಇಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿತ್ತು. ಆದರೆ ಬಜೆಟ್ ನಲ್ಲಿ ಈ ಗುರಿಯನ್ನು ಪರಿಷ್ಕರಿಸಲಾಗಿದೆ. ಶೇ 3.4 ರಷ್ಟು ಇರಲಿರುವುದು ಸರ್ಕಾರ ತನ್ನ ಹಣಕಾಸನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಭಾವನೆ ಮೂಡಿಸುತ್ತದೆ.

(‘ಇಂಡಿಯನ್ ಮನಿ ಡಾಟ್ ಕಾಂ'ನ ಉಪಾಧ್ಯಕ್ಷ)

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT