ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್‌ ಬಳಿಕ ಆಗಿದ್ದೇನು?

Last Updated 2 ಫೆಬ್ರುವರಿ 2019, 5:52 IST
ಅಕ್ಷರ ಗಾತ್ರ

ವಿತ್ತ ಸಚಿವ ಪೀಯೂಷ್ ಗೋಯಲ್‌ ಶುಕ್ರವಾರ ಮಂಡಿಸಿರುವ ಮಧ್ಯಂತ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹40,000 ದಿಂದ ₹50,000ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇದು ತಿಂಗಳ ಸಂಬಳ ಪಡೆಯುತ್ತಿರುವವರು ಹಾಗೂ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ ಪಡೆಯಲು ಸಹಕಾರಿಯಾಗಿದೆ. ₹5 ಲಕ್ಷ ಒಳಗಿನ ತೆರಿಗೆಗೆ ಒಳಪಡುವ ಆದಾಯ ಹೊಂದಿರುವವರಿಗೆ ತೆರಿಗೆ ಕಾಯ್ದೆ ಸೆಕ್ಷನ್‌ 87ಎ ಅಡಿಯಲ್ಲಿ ಸಂಪೂರ್ಣ ವಿನಾಯಿತಿಯಿದೆ.

* ₹5 ಲಕ್ಷ ಆದಾಯ ಇದ್ದರೆ...

2019–20ರ ಮಧ್ಯಂತರ ಬಜೆಟ್‌ ಘೋಷಣೆಯಂತೆ ₹5 ಲಕ್ಷ ವರೆಗಿನ ತೆರಿಗೆಗೆ ಒಳಪಡುವ ಆದಾಯ ಹೊಂದಿರುವವರು ತೆರಿಗೆಯಿಂದ ಪೂರ್ಣ ವಿನಾಯಿತಿ ಪಡೆಯುತ್ತಾರೆ. ₹5 ಲಕ್ಷ ಆದಾಯ ಪಡೆಯುತ್ತಿರುವವರು ವಾರ್ಷಿಕ ಕಟ್ಟುವ ತೆರಿಗೆ ಗರಿಷ್ಠ ₹13,000. ತೆರಿಗೆ ವಿನಾಯಿತಿ ಘೋಷಣೆಯಿಂದಾಗಿ ₹5 ಲಕ್ಷ ಆದಾಯ ಪಡೆಯುತ್ತಿರುವ ವ್ಯಕ್ತಿಗೆ ವಾರ್ಷಿಕ ₹13 ಸಾವಿರ ಉಳಿತಾಯವಾಗಲಿದೆ ಎಂದು ಆರ್ಥಿಕ ಸಲಹೆಗಾರರಾದ ಶಾಲಿನಿ ಜೈನ್‌ ಪ್ರತಿಕ್ರಿಯಿಸಿರುವುದಾಗಿಎಕನಾಮಿಕ್ ಟೈಮ್ಸ್ವರದಿ ಮಾಡಿದೆ.

(ವಾರ್ಷಿಕ ಸಂಬಳದ ಆಧಾರ ಮೇಲೆ ತೆರಿಗೆ ಉಳಿಕೆ ಮತ್ತು ಸಲ್ಲಿಕೆ)

ತೆರಿಗೆ ಲೆಕ್ಕಾಚಾರ–ವಾರ್ಷಿಕ ಸಂಬಳ ವಾರ್ಷಿಕ ಗಳಿಕೆ ₹ ಗಳಲ್ಲಿ
ವಿವರ ಪ್ರಸ್ತುತ ಬಜೆಟ್‌ ನಂತರ
ಮೂಲ ವೇತನ+ ಡಿಎ 3,77,200 3,77,200
ಇತರೆ ತೆರಿಗೆಗೆ ಒಳಪಡುವ ಭತ್ಯೆ 1,72,800 1,72,800
ಒಟ್ಟು ಗಳಿಕೆ 5,50,000 5,50,000
ಸ್ಟಾಂಡರ್ಡ್‌ ಡಿಡಕ್ಷನ್‌ (40,000) (50,000)
ಕಡಿತದ ಬಳಿಕ ಸಂಬಳ 5,10,000 5,00,000
ಆದಾಯ ತೆರಿಗೆ 14,500 12,500
ಸೆಕ್ಷನ್‌ 87ಎ ಅಡಿಯಲ್ಲಿ ವಿನಾಯಿತಿ –––– (12,500)
ವಿನಾಯಿತಿ ಬಳಿಕ ಒಟ್ಟು ತೆರಿಗೆ ಪಾವತಿ 14,500 ––––
ಸರ್ಚ್‌ ಚಾರ್ಜ್‌@10%/15% –––– ––––
ಸರ್ಚ್‌ ಚಾರ್ಜ್‌ ಬಳಿಕ ತೆರಿಗೆ ಮೊತ್ತ 14,500 ––––
ಎಜ್ಯುಕೇಷನ್‌ ಸೆಸ್‌ @ 4% 580 ––––
ಒಟ್ಟು ತೆರಿಗೆ, ಸರ್ಚ್‌ ಚಾರ್ಜ್‌, ಎಜ್ಯುಕೇಷನ್‌ ಸೆಸ್‌ 15,080 ––––
ಪಾವತಿಸಬೇಕಾದ ಒಟ್ಟು ತೆರಿಗೆ (15,080) ––––

ಗಮನಿಸಿ: ವಾರ್ಷಿಕ ಒಟ್ಟು ಆದಾಯದಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಕಳೆದು ಉಳಿಯುವ ಮೊತ್ತ ₹5 ಲಕ್ಷ ಮತ್ತು ಅದಕ್ಕಿಂತ ಕಡಿಮೆ ಆಗಿದ್ದರೆ ಮಾತ್ರ ತೆರಿಗೆ ವಿನಾಯಿತಿ ಅನ್ವಯವಾಗಲಿದೆ. ₹5 ಲಕ್ಷ ಮೀರಿದರೆ, ಈ ಹಿಂದೆ ನಿಗದಿ ಪಡಿಸಿರುವಂತೆ ಶೇ 5, ಶೇ 20 ಹಾಗೂ ಶೇ 30 ಮತ್ತು ಸರ್ಚ್‌ ಚಾರ್ಜ್‌, ಸೆಸ್‌ಗಳನ್ನು ಒಳಗೊಂಡ ತೆರಿಗೆ ಅನ್ವಯವಾಗುತ್ತದೆ.

* ಸ್ಟಾಂಡರ್ಡ್‌ ಡಿಡಕ್ಷನ್‌ ಹೆಚ್ಚಳ; ಯಾರಿಗೆಷ್ಟು ಲಾಭ?

₹40 ಸಾವಿರದಿಂದ ₹50 ಸಾವಿರಕ್ಕೆ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಚ್ಚಿಸಲಾಗಿದೆ. ಒಟ್ಟು ₹10 ಸಾವಿರ ಕಡಿತ ಹೆಚ್ಚಿಸಿರುವುದರಿಂದ ₹5 ಲಕ್ಷ–₹10 ಲಕ್ಷದೊಳಗಿನ ಆದಾಯ ಹೊಂದಿರುವವರು ₹2,080 ಉಳಿಸಬಹುದು.

₹10ಲಕ್ಷ–₹50 ಲಕ್ಷ ಆದಾಯ ಹೊಂದಿರುವವರು ₹3,120; ₹50 ಲಕ್ಷದಿಂದ ₹1 ಕೋಟಿ ಆದಾಯ ಪಡೆಯುವವರು ₹3,432 ಹಾಗೂ ₹1 ಕೋಟಿಗೂ ಅಧಿಕ ಆದಾಯ ಹೊಂದಿರುವವರು ₹3,588 ಉಳಿಸಬಹುದು. ಇದು ಸೆಸ್‌ ಹಾಗೂ ಸರ್ಚ್ ಒಳಗೊಂಡ ಮೊತ್ತವಾಗಿದೆ.

* ಉಳಿತಾಯ ಮಾಡಿ ತೆರಿಗೆ ಉಳಿಸಿ!

ಸ್ಟಾಂಡರ್ಡ್‌ ಡಿಡಕ್ಷನ್‌ ಹಾಗೂ ನಿಗದಿತ ಉಳಿತಾಯ, ಹೂಡಿಕೆ ಯೋಜನೆಗಳಿಗೆ ಹಣ ಕಡಿತಗೊಂಡ ನಂತರ ಉಳಿಯುವ ಮೊತ್ತವು ತೆರಿಗೆಗೆ ಒಳಪಡುವ ಆದಾಯವಾಗಿರುತ್ತದೆ. ಹೀಗಾಗಿ ವಾರ್ಷಿಕ ಒಟ್ಟು ಗಳಿಕೆ ₹5.5 ಲಕ್ಷಕ್ಕಿಂತ ಹೆಚ್ಚು ಹೊಂದಿರುವ ವ್ಯಕ್ತಿ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ, ತೆರಿಗೆಗೆ ಒಳ ಪಡುವ ಆದಾಯ ₹5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರುವುದು ದೃಢಪಡಿಸಿದರೆ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದು.

ಉದಾಹರಣೆಗೆ; ಮಾರ್ಕೆಂಟಿಗ್‌ ಎಕ್ಸಿಕ್ಯುಟಿವ್‌ ಆಗಿರುವ ವನಿತಾ ವಾರ್ಷಿಕ ಒಟ್ಟು ₹6.5 ಲಕ್ಷ ಗಳಿಸುತ್ತಿರುತ್ತಾರೆ. ಸೆಕ್ಷನ್‌ 80ಸಿ ಒಳಗೊಂಡಿರುವ ಉಳಿತಾಯ ಯೋಜನೆಗಳಲ್ಲಿ ₹1.5 ಲಕ್ಷ ಹೂಡುತ್ತಿದ್ದರೆ, ಕಡಿತದ ನಂತರ ಆಕೆಯ ಒಟ್ಟು ಗಳಿಕೆ ₹5 ಲಕ್ಷ ಆಗಿರುತ್ತದೆ.

ಇದರೊಂದಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ ₹50 ಸಾವಿರದ ವರೆಗೂ ಹಾಗೂ ಸೆಕ್ಷನ್‌ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ಮತ್ತು ಆರೋಗ್ಯ ತಪಾಸಣೆಗಳಿಗೆ ಆಗುವ ಖರ್ಚು ತೋರಿಸಬಹುದು.

* ಎರಡು ಮನೆ ಇದ್ದರೂ ತೆರಿಗೆ ವಿನಾಯಿತಿ

ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮನೆ ಹೊಂದಿದ್ದರೆ, ವಾಸಿಸುತ್ತಿರುವ ಒಂದು ಮನೆಯನ್ನು ಹೊರತು ಪಡಿಸಿ ಇತರೆ ಮನೆಗೆ ತೆರಿಗೆ(ಡೀಮ್ಡ್‌ ರೆಂಟ್‌) ಸಲ್ಲಿಸಬೇಕಿತ್ತು. ಎರಡನೇ ಮನೆಯಲ್ಲಿ ಕುಟುಂಬದವರೇ ವಾಸಿಸುತ್ತಿದ್ದರೂ ಅಥವಾ ಖಾಲಿ ಬಿಟ್ಟಿದ್ದರೂ ಅದನ್ನು ಬಾಡಿಗೆ ಮನೆಯ ರೀತಿ ತೆರಿಗೆಗೆ ಒಳಪಡಿಸಲಾಗುತ್ತದೆ. ಆದರೆ, ಈಗ ಎರಡನೇ ಮನೆಯನ್ನು ಸ್ವಂತಕ್ಕೆ ಬಳಸುತ್ತಿದ್ದರೆ ಅಥವಾ ಖಾಲಿ ಬಿಟ್ಟಿದ್ದರೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.

* ಬಡ್ಡಿ ಮೇಲಿನ ತೆರಿಗೆಯ ಗೆರೆ ಹೆಚ್ಚಳ

ಬ್ಯಾಂಕ್‌ ಮತ್ತು ಪೋಸ್ಟ್‌ ಆಫೀಸ್‌ಗಳಲ್ಲಿನ ಉಳಿತಾಯದಲ್ಲಿ ಪಡೆಯುವ ವಾರ್ಷಿಕ ಬಡ್ಡಿ ಮೊತ್ತ ₹10,000 ಮೀರಿದರೆ ಮೂಲದಲ್ಲಿಯೇ ತೆರಿಗೆ ಕಡಿತ(ಟಿಡಿಎಸ್)ಕ್ಕೆ ಒಳಪಡುತ್ತಿತ್ತು. ಇದೀಗ ತೆರಿಗೆಗೆ ಒಳಪಡುವ ಬಡ್ಡಿ ಮೊತ್ತವನ್ನು ₹40,000ಕ್ಕೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT