ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ’ ಜಾರಿ ಖಡಾಖಂಡಿತ: ಗೃಹ ಸಚಿವ ಅಮಿತ್ ಶಾ ದೃಢ ನುಡಿ

ಎಷ್ಟೇ ವಿರೋಧ ಬಂದರೂ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಬದ್ಧ
Last Updated 17 ಡಿಸೆಂಬರ್ 2019, 19:35 IST
ಅಕ್ಷರ ಗಾತ್ರ

ನವದೆಹಲಿ/ಭೋಗನಂದಿ: ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಜಾರಿಗೆ ಕೇಂದ್ರ ಸರ್ಕಾರವು ಬದ್ಧ. ಎಷ್ಟೇ ಪ್ರತಿಭಟನೆ ನಡೆಸಿದರೂ ಈ ಕಾಯ್ದೆ ಜಾರಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೃಢವಾಗಿ ಹೇಳಿದ್ದಾರೆ.

ಕಾಯ್ದೆಯ ಬಗ್ಗೆ ದೇಶದ ಜನರನ್ನು ತಪ್ಪು ದಾರಿಗೆಳೆಯಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಭಾರತದ ಯಾವುದೇ ಅಲ್ಪಸಂಖ್ಯಾತ ಸಮುದಾಯದ ಪೌರರ ಪೌರತ್ವವನ್ನು ಕಸಿದುಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಯ್ದೆಯಲ್ಲಿ ಅಂತಹ ಅಂಶವೂ ಇಲ್ಲ ಎಂದು ಶಾ ಹೇಳಿದ್ದಾರೆ.

‘ಕಾಯ್ದೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಯಾವುದೇ ರೀತಿಯಲ್ಲಿ ಇದು ಅನ್ಯಾಯ ಮಾಡುತ್ತಿದೆ ಎಂದು ನೀವು ಭಾವಿಸಿದರೆ ಅದನ್ನು ನಮ್ಮ ಗಮನಕ್ಕೆ ತನ್ನಿ. ಮೋದಿ ಸರ್ಕಾರವು ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

ಈ ಕಾಯ್ದೆಯ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಸುಳ್ಳನ್ನು ಹರಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಆರೋಪಿಸಿದ್ದಾರೆ. ಪಾಕಿಸ್ತಾನದ ಎಲ್ಲರಿಗೂ ಪೌರತ್ವ ನೀಡಲು ಸಿದ್ಧ ಎಂಬುದನ್ನು ಕಾಂಗ್ರೆಸ್ ಪಕ್ಷವು ಘೋಷಿಸಲಿ ಎಂದು ಅವರು ಸವಾಲು ಎಸೆದಿದ್ದಾರೆ.

ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ ಅವರು, ಕಾಯ್ದೆಯಿಂದಾಗಿ ಭಾರತೀಯರ ಪೌರತ್ವ ರದ್ದಾಗಲಿದೆ ಎಂಬ ಆತಂಕವನ್ನು ಹೋಗಲಾಡಿಸಲು ಪ್ರಯತ್ನಿಸಿದರು. ‘ಹೊಸ ಕಾಯ್ದೆಯ ಬಗ್ಗೆ ಮುಸ್ಲಿಮರಲ್ಲಿ ಭೀತಿ ಹುಟ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಈ ಕಾಯ್ದೆಯು ಭಾರತದ ಯಾವುದೇ ವ್ಯಕ್ತಿಯ ಪೌರತ್ವವನ್ನು ರದ್ದು ಮಾಡುವುದಿಲ್ಲ ಮತ್ತು ಭಾರತೀಯರಿಗೆ ಯಾವ ರೀತಿಯಲ್ಲಿಯೂ ತೊಂದರೆ ಆಗುವುದಿಲ್ಲ’ ಎಂದು ಅವರು ಹೇಳಿದರು.

***

ಬೆಳಗಾವಿ: ಕಲ್ಲು ತೂರಾಟ

ಬೆಳಗಾವಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳವಾರ ಜಮಿಯತ್ ಉಲೇಮಾ–ಎ–ಹಿಂದ್ ಸಂಘಟನೆ ನೇತೃತ್ವದಲ್ಲಿ ಮುಸ್ಲಿಮರು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಬಳಿಕ, ಇಲ್ಲಿನ ಶಿವಾಜಿನಗರದ ಆರ್‌ಟಿಒ ವೃತ್ತದಲ್ಲಿ ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಏಳು ಬಸ್‌, ಕಾರು, ಪೆಟ್ರೋಲ್‌ ತುಂಬಿದ ಟ್ಯಾಂಕರ್‌ ಹಾಗೂ ಎಟಿಎಂ ಕೇಂದ್ರದ ಮೇಲೆ ಕಲ್ಲು ತೂರಾಟದಿಂದಾಗಿ, ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಎಟಿಎಂ ಬಾಗಿಲಿನ ಗಾಜು ಜಖಂಗೊಂಡಿದೆ. ಇಬ್ಬರು ಗಾಯಗೊಂಡಿದ್ದಾರೆ.

***

ರಾಷ್ಟ್ರಪತಿಗೆ ಮನವಿ

ದೆಹಲಿಯ ಸೀಲಾಂಪುರದಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದೆ. 12 ಪೊಲೀಸರು ಸೇರಿ 21 ಮಂದಿ ಗಾಯಗೊಂಡಿದ್ದಾರೆ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ನಿಯೋಗ ಭೇಟಿಯಾಗಿದೆ. ‘ಅಸಾಂವಿಧಾನಿಕ ಮತ್ತು ವಿಭಜನಕಾರಿಯಾದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಹಿಂದಕ್ಕೆ ಪಡೆಯಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿದೆ.

*****

ಕಾಯ್ದೆಯನ್ನು ಜಾರಿ ಮಾಡಲು ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ. ನಿರಾಶ್ರಿತರು ಗೌರವದಿಂದ ಬಾಳುವಂತೆ ಅವರಿಗೆ ಪೌರತ್ವ ನೀಡುತ್ತೇವೆ

-ಅಮಿತ್‌ ಶಾ ಕೇಂದ್ರ ಗೃಹ ಸಚಿವ

ವಿ.ವಿ.ಗಳು ಮುಕ್ತ ಅಭಿವ್ಯಕ್ತಿ ಮತ್ತು ಚಿಂತನೆಯನ್ನು ಪೋಷಿಸುವ ಕೇಂದ್ರಗಳಾಗುವುದನ್ನು ಖಾತರಿಪಡಿಸುವುದು ನಿಮ್ಮ (ಕುಲಪತಿಗಳು) ಅತಿ ಮುಖ್ಯ ಕರ್ತವ್ಯ
-ರಾಮನಾಥ ಕೋವಿಂದ್‌, ರಾಷ್ಟ್ರಪತಿ (ಕುಲಪತಿಗಳ ಸಮಾವೇಶದಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT