ಭಾನುವಾರ, ಸೆಪ್ಟೆಂಬರ್ 20, 2020
22 °C
ಎಲ್ಲ ಜಲ ವ್ಯಾಜ್ಯಗಳಿಗೆ ಒಂದೇ ನ್ಯಾಯಧಿಕರಣ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು: ಪೋಕ್ಸೊ ಕಾಯ್ದೆ ತಿದ್ದುಪಡಿಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲ: ಅನಿಯಂತ್ರಿತ ಠೇವಣಿ ಯೋಜನೆಗಳನ್ನು ನಿಷೇಧಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಕೊಟ್ಟಿದೆ. ಕಾರ್ಮಿಕರಿಗೆ ಸಂಬಂಧಿಸಿದ 13 ಕಾನೂನುಗಳನ್ನು ಒಂದೇ ಕಡೆ ತರುವ ಮಸೂದೆ ಹಾಗೂ ಪೋಕ್ಸೊ ತಿದ್ದುಪಡಿ ಕಾಯ್ದೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಮಸೂದೆ: ಅನಿಯಂತ್ರಿತವಾಗಿ ಹಣ ಠೇವಣಿ ಇರಿಸಿಕೊಳ್ಳುವ ಯೋಜನೆಗಳನ್ನು ನಿಷೇಧಿಸುವ ಕಾಯ್ದೆ ಜಾರಿಗೆ ಕೇಂದ್ರ ಮುಂದಾಗಿದೆ. ದೇಶದಲ್ಲಿ ಅಕ್ರಮವಾಗಿ ಠೇವಣಿ ಇರಿಸಿಕೊಳ್ಳುವ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. 

ಅನಿಯಂತ್ರಿತ ಠೇವಣಿ ಯೋಜನೆ ಸುಗ್ರೀವಾಜ್ಞೆ–2019ರ ಬದಲಿಗೆ ಈ ಮಸೂದೆ ಜಾರಿಗೆ ಬರಲಿದ್ದು, ಕೇಂದ್ರ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ. 

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಾವಡೇಕರ್, ‘ಚಿಟ್‌ಫಂಡ್ ಹಗರಣಗಳಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಬಡವರು ಕಷ್ಟಪಟ್ಟು ದುಡಿದ ಹಣವನ್ನು ಬಿಗಿಯಾದ ಆಡಳಿತಾತ್ಮಕ ಕ್ರಮಗಳ ಕೊರತೆಯಿಂದಾಗಿ ಕಳೆದುಕೊಳ್ಳುವಂತಾಗಿದೆ’ ಎಂದರು.

ಅಕ್ರಮವಾಗಿ ಠೇವಣಿ ಇರಿಸಿಕೊಳ್ಳುವ ಯೋಜನೆಗಳು ಕಂಡುಬಂದರೆ, ಶಿಕ್ಷೆ ನೀಡುವ ಹಾಗೂ ಠೇವಣಿ ಮರುಪಾವತಿಗೆ ವ್ಯವಸ್ಥೆ ಮಾಡುವ ಕುರಿತಂತೆ ಸಾಕಷ್ಟು ಅವಕಾಶಗಳನ್ನು ಈ ಕಾಯ್ದೆ ಹೊಂದಿದೆ.

ಪೋಕ್ಸೊ ಕಾಯ್ದೆಗೆ ತಿದ್ದುಪಡಿ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಗಲ್ಲು ಶಿಕ್ಷೆ ವಿಧಿಸುವುದೂ ಸೇರಿದಂತೆ ಪೋಕ್ಸೊ ಕಾಯ್ದೆಗೆ ತಿದ್ದಪಡಿ ತರಲು ಕೇಂದ್ರ ಒಪ್ಪಿಗೆ ಕೊಟ್ಟಿದೆ. ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊ ಪ್ರಸಾರವನ್ನು ನಿಯಂತ್ರಣದಲ್ಲಿಡಲು ದಂಡ ವಿಧಿಸುವ ಅಥವಾ ಶಿಕ್ಷೆ ನೀಡುವ ಅವಕಾಶವನ್ನು ತಿದ್ದುಪಡಿ ಕಾಯ್ದೆ ಹೊಂದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಸೇರ್ಪಡೆ ಮಾಡಲಾಗಿರುವ ಪ್ರಬಲ ನಿಯಮಗಳಿಂದ ಕಾಯ್ದೆಗೆ ಇನ್ನಷ್ಟು ಬಲ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ. 

ಸಂಕಷ್ಟದಲ್ಲಿರುವ ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಘನತೆಯನ್ನು ಕಾಪಾಡುವ ಉದ್ದೇಶವನ್ನು ತಿದ್ದುಪಡಿ ಮಸೂದೆ ಹೊಂದಿದೆ. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶಿಕ್ಷೆಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಕಾಯ್ದೆ ಸ್ಪಷ್ಟತೆಯನ್ನು ನೀಡುತ್ತದೆ.

ಕಾರ್ಮಿಕ ಕಾನೂನುಗಳಿಗೆ ಏಕ ಸಂಹಿತೆ: 13 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ ಏಕ ಸಂಹಿತೆ ರೂಪಿಸುವ ಮಸೂದೆಗೂ ಸಂಪುಟ ಒಪ್ಪಿಗೆ ನೀಡಿದೆ. 10ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. 

‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ನಿಯಮಗಳ ಮಸೂದೆ 2019’ ಉದ್ಯೋಗಿಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಒಳಗೊಂಡಿದೆ. ಐಟಿ ಸಂಸ್ಥೆಗಳು, ಸೇವಾ ಕ್ಷೇತ್ರಗಳು, ಉದ್ದಿಮೆ, ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೂ ಇದರಡಿ ಬರಲಿವೆ.

ಎಲ್ಲ ಜಲ ವ್ಯಾಜ್ಯಗಳಿಗೆ ಒಂದೇ ನ್ಯಾಯಧಿಕರಣ
ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸುವ ಏಕೈಕ ಹಾಗೂ ಶಾಶ್ವತ ನ್ಯಾಯಧಿಕರಣ ಸ್ಥಾಪಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಈಗಿರುವ ಒಂಬತ್ತು ಜಲ ವಿವಾದ ನ್ಯಾಯಧಿಕರಣಗಳ ಬದಲಾಗಿ ಒಂದೇ ಪ್ರಾಧಿಕಾರ ಅಸ್ತಿತ್ವಕ್ಕೆ ತಂದರೆ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸಾಧ್ಯವಾಗಲಿದೆ ಎಂದು ಸಚಿವ ಜಾವಡೇಕರ್ ತಿಳಿಸಿದ್ದಾರೆ.

ಹೊಸದಾಗಿ ಅಸ್ವಿತ್ವಕ್ಕೆ ಬರಲಿರುವ ನ್ಯಾಯಧಿಕರಣಕ್ಕೆ ಅಂತಿಮ ತೀರ್ಪು ನೀಡಲು ಎರಡು ವರ್ಷಗಳ ಕಾಲಾವಕಾಶ ಇರಲಿದೆ. ಕೃಷ್ಣಾ, ಮಹದಾಯಿ ಸೇರಿದಂತೆ ಸದ್ಯ ಇರುವ ನ್ಯಾಯಧಿಕರಣಗಳು ಪ್ರತಿ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಲು 17ರಿಂದ 27 ವರ್ಷಗಳಷ್ಟು ಸುದೀರ್ಘ ಅವಧಿ ತೆಗೆದುಕೊಂಡಿವೆ.

ವ್ಯಾಜ್ಯಗಳು ಹಾಗೂ ಅಗತ್ಯಗಳನ್ನು ಪರಿಗಣಿಸಿ ‘1956ರ ಅಂತರರಾಜ್ಯ ನದಿನೀರು ವಿವಾದ ಕಾಯ್ದೆ’ಗೆ ತಿದ್ದುಪಡಿ ತರುವ ಮೂಲಕ ಹೊಸ ನ್ಯಾಯಧಿಕರಣಕ್ಕೆ ವಿವಿಧ ಪೀಠಗಳನ್ನು ರಚನೆ ಮಾಡಲು ಅವಕಾಶ ನೀಡಲಾಗಿದೆ ಎಂದು ಪ್ರಸ್ತಾವನೆ ಹೇಳುತ್ತದೆ.

ವಿವಾದ ಇತ್ಯರ್ಥವಾದ ಬಳಿಕ ಆಯಾ ಪೀಠ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯು ನ್ಯಾಯಧಿಕರಣದ ಮುಖ್ಯಸ್ಥರಾಗಿರುತ್ತಾರೆ.

ಸದ್ಯ ಇರುವ 1956ರ ಕಾಯ್ದೆಯ ಪ್ರಕಾರ, ರಾಜ್ಯ ಸರ್ಕಾರವು ನದಿ ನೀರು ಹಂಚಿಕೆ ಸಂಬಂಧ ಪ್ರಸ್ತಾವ ಸಲ್ಲಿಸಿದರೆ ಕೇಂದ್ರ ಸರ್ಕಾರವು ಜಲವಿವಾದ ನ್ಯಾಯಧಿಕರಣ ರಚಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.