ಸೋಮವಾರ, ಆಗಸ್ಟ್ 2, 2021
28 °C

ಗಡಿಯಲ್ಲಿ ಸಂಘರ್ಷ | ಅಕ್ಷಾಯ್‌ ಚಿನ್‌ ರಕ್ಷಣೆಗೆ ಗಾಲ್ವನ್‌ ಮೇಲೆ ಚೀನಾ ಕಣ್ಣು

ಅನಿರ್ಬನ್‌ ಭೌಮಿಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಗಾಲ್ವನ್‌ ಕಣಿವೆಯ ಮೇಲೆ ನಿಯಂತ್ರಣ ಸಾಧಿಸುವ ಚೀನಾದ ಹವಣಿಕೆಯ ಹಿಂದೆ ಸ್ಪಷ್ಟ ಉದ್ದೇಶ ಇದೆ. ವಿವಾದಾತ್ಮಕ ಅಕ್ಷಾಯ್‌ ಚಿನ್‌ ಪ್ರದೇಶದ ಮೂಲಕ ಹಾದು ಹೋಗಿ, ಸಮಸ್ಯಾತ್ಮಕವಾದ ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ಅನ್ನು ಸಂಪರ್ಕಿಸುವ ಹೆದ್ದಾರಿ 219ಕ್ಕೆ ರಕ್ಷಣೆ ನೀಡುವುದೇ ಮುಖ್ಯ ಉದ್ದೇಶ.

ಭಾರತ–ಚೀನಾ ಗಡಿಯಲ್ಲಿ ಆಗಾಗ ಸಂಘರ್ಷಗಳು ನಡೆಯುತ್ತಿದ್ದರೂ ಗಾಲ್ವನ್‌ ಕಣಿವೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಭಾರತದ ಗಡಿ ಠಾಣೆಯೊಂದರ ಮೇಲೆ 1962ರ ನವೆಂಬರ್‌ನಲ್ಲಿ ಚೀನಾದ ಸೇನೆ ದಾಳಿ ಮಾಡಿತ್ತು. ಅದರ ಬಳಿಕ ಈವರೆಗೆ ಅಲ್ಲಿ ಯಾವ ತಕರಾರೂ ಇರಲಿಲ್ಲ. ಕಳೆದ ತಿಂಗಳ ವರೆಗೆ ಈ ಪ್ರದೇಶದಲ್ಲಿ ಶಾಂತಿಯೂ ನೆಲೆಸಿತ್ತು. ಕಳೆದ ತಿಂಗಳು ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಚೀನಾ ಇಲ್ಲಿಗೆ ಸಾಗಿಸಿತ್ತು. ಗಡಿಯ ತನ್ನ ಭಾಗದಲ್ಲಿ ಭಾರತವು ಸೇನಾ ಮೂಲಸೌಕರ್ಯ ನಿರ್ಮಿಸುತ್ತಿದೆ ಎಂಬುದು ಇದಕ್ಕೆ ಕಾರಣ ಎಂದು ಚೀನಾದ ಗ್ಲೋಬಲ್‌ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. 

ಈಗ, ಗಾಲ್ವನ್‌ ಕಣಿವೆ ತನ್ನದು ಎಂದು ಚೀನಾ ಪ್ರತಿ‍ಪಾದಿಸುತ್ತಿದೆ. ಚೀನಾದ ಪಶ್ಚಿಮ ಕಮಾಂಡ್‌ನ ವಕ್ತಾರ ಅದನ್ನು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.

ಗುಲಾಂ ರಸೂಲ್‌ ಗಾಲ್ವನ್‌ ಹೆಸರನ್ನು ಈ ಕಣಿವೆಗೆ ಇರಿಸಲಾಗಿದೆ. ಪಶ್ಚಿಮ ದೇಶಗಳ ಸಾಹಸಿಗಳ ಗುಂಪಿನ ಮಾರ್ಗದರ್ಶಕನಾಗಿದ್ದ ಈ ವ್ಯಕ್ತಿ, ಆ ತಂಡವನ್ನು ಈಗಿನ ಟಿಬೆಟ್‌ ಸ್ವಾಯತ್ತ ಪ್ರದೇಶ ಮತ್ತು ಕ್ಸಿನ್‌ಜಿಯಾಂಗ್‌ ಉಯ್‌ಗುರ್‌ ಸ್ವಾಯತ್ತ ಪ್ರದೇಶಕ್ಕೆ ಕರೆದೊಯ್ದಿದ್ದರು.

ಉಯ್‌ಗುರ್‌ ಮತ್ತು ಟಿಬೆಟನ್ನರ ಪ್ರತಿಭಟನೆಯನ್ನು ಚೀನಾವು ನಿರ್ದಯವಾಗಿ ಹೊಸಕಿ ಹಾಕುತ್ತಿದೆ. ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ನಲ್ಲಿ ಚೀನಾದ ಆಳ್ವಿಕೆಯನ್ನು ಈ ಗುಂಪುಗಳು ವಿರೋಧಿಸುತ್ತಲೇ ಬಂದಿವೆ. ಇಲ್ಲಿ ಚೀನಾ ಸರ್ಕಾರವು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಅಂತರರಾಷ್ಟ್ರೀಯ ಸಮುದಾಯವು ಟೀಕಿಸುತ್ತಲೇ ಇದೆ. ಈ ಎರಡೂ ಪ್ರದೇಶಗಳು ಚೀನಾಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ನಡುವೆ 1951 ಮತ್ತು 1957ರಲ್ಲಿ ನಿರ್ಮಿಸಿದ ರಸ್ತೆಯ ಮೂಲಕ ಸಂಪರ್ಕ ಇದೆ. ಈಗ ಜಿ 219 ಎಂದು ಗುರುಸಿಲಾಗುವ ಈ ಹೆದ್ದಾರಿಯು ಅಕ್ಷಾಯ್‌ ಚಿನ್‌ ಮೂಲಕ ಹಾದು ಹೋಗುತ್ತದೆ. ಭಾರತ–ಚೀನಾ ನಡುವಣ 1962ರ ಸಂಘರ್ಷಕ್ಕೆ ಈ ಹೆದ್ದಾರಿಯೂ ಒಂದು ಕಾರಣವಾಗಿತ್ತು. 

ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ಭಾರತದ ಆಸಕ್ತಿ ಹೆಚ್ಚಾದರೆ, ಅದು ಕ್ಸಿನ್‌ಜಿಯಾಂಗ್‌–ಟಿಬೆಟ್‌ ಹೆದ್ದಾರಿಗೆ ಕಂಟಕವಾಗಬಹುದು ಎಂಬ ಭಾವನೆ ಚೀನಾದಲ್ಲಿ ಇದೆ. ಅದಲ್ಲದೆ, ಅಕ್ಷಾಯ್‌ ಚಿನ್‌ಗೆ ಭಾರತದ ಸೇನೆಯು ಸುಲಭವಾಗಿ ಸಾಗಬಹುದಾದ ಸಾಧ್ಯತೆಯು ಚೀನಾದ ಇನ್ನೊಂದು ಆತಂಕವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು