ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವನ್‌‌ ಕಣಿವೆ | ಸಂಘರ್ಷದ ಹಿಂದೆ ಚೀನಾದ ಯೋಜನೆ, ತಂತ್ರ

Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ಭಾರತ– ಚೀನಾ ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯು ಆತಂಕಕಾರಿ ಸ್ಥಿತಿಯನ್ನು ತಲುಪಿದೆ. ಗಾಲ್ವನ್‌‌ ಕಣಿವೆಯಲ್ಲಿ ನಡೆದ ಕೈ ಕೈ ಮಿಲಾಯಿಸುವಿಕೆಯಲ್ಲಿ ಭಾರತದ ಯೋಧರ ಹತ್ಯೆಯಾಗಿರುವ ಘಟನೆಯು ಇದನ್ನು ಪುಷ್ಟೀಕರಿಸಿದೆ. ಎರಡೂ ಕಡೆಗಳಲ್ಲಿ ಪ್ರಾಣ ಹಾನಿಯಾಗಿವೆ ಎಂದು ವರದಿಯಾಗಿದೆ. ಗಡಿಯಲ್ಲಿ ಚಕಮಕಿ ನಿರಂತರವಾಗಿ ನಡೆಯುತ್ತಿದ್ದರೂ ನಾಲ್ಕು ದಶಕಗಳ ನಂತರ ಪ್ರಾಣಹಾನಿಯ ಘಟನೆ ವರದಿಯಾಗಿದೆ.

ಎರಡು– ಮೂರು ತಿಂಗಳಿಗೊಮ್ಮೆಯಾದರೂ ಗಡಿಯಲ್ಲಿ ಚಕಮಕಿ ನಡೆದ ವರದಿ ಮಾಧ್ಯಮಗಳಲ್ಲಿ ಬರುತ್ತಲೇ ಇರುತ್ತದೆ. ದೋಕಲಾದ ಸಾಹಸವಿರಲಿ ಅಥವಾ ಈಗಿನ ಘಟನೆ ಇರಲಿ, ಚೀನಾದ ಇಂಥ ಪ್ರಯತ್ನದ ಹಿಂದೆ ಒಂದು ಯೋಜನೆ ಹಾಗೂ ತಂತ್ರ ಇದೆ ಎಂಬುದು ಸ್ಪಷ್ಟ. ಭಾರತದ ಜತೆಗಿನ ಸಂಘರ್ಷವನ್ನು ಜೀವಂತವಾಗಿಡುವುದು ಚೀನಾದ ಭೌಗೋಳಿಕ ರಾಜಕೀಯದ ಭಾಗ. ಇದು ಚೀನಾದ ಹಲವು ಉದ್ದೇಶಗಳನ್ನು ಈಡೇರಿಸುತ್ತದೆ. ಮೊದಲನೆಯದು– ಭಾರತ ಜತೆಗೆಗಿನ ವಿವಾದದ ಕಡೆಗೆ ಜಗತ್ತಿನ ಗಮನವನ್ನು ಸೆಳೆಯುವುದು. ಎರಡನೆಯದು, ಇತರ ಬೆಳವಣಿಗೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು (ಈ ಘಟನೆಯು ಕೋವಿಡ್‌–19 ಹರಡುವುದರಲ್ಲಿ ತನ್ನ ಪಾತ್ರದ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು) ಇದು ಚೀನಾಗೆ ಸಹಾಯಕವಾಗುತ್ತದೆ.

ಮೂರನೆಯದಾಗಿ, ಭಾರತವು ಹೊಸ ಶಕ್ತಿಯಾಗಿ ಉದಯಿಸುವುದನ್ನು ತಡೆಯಲು ತನ್ನ ದೀರ್ಘಕಾಲೀನ ಹೋರಾಟವನ್ನು ಮುಂದುವರಿಸುವ ಉದ್ದೇಶವನ್ನು ಚೀನಾ ಹೊಂದಿದೆ. ನೇಪಾಳದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದವರಿಗೆ, ಆ ದೇಶವು ಈಚೆಗೆ ತೆಗೆದುಕೊಂಡಿರುವ ಭಾರತ ವಿರೋಧಿ ನಿಲುವು ಕಾಕತಾಳೀಯವಲ್ಲ ಎಂಬುದು ಅರ್ಥವಾಗುತ್ತದೆ. ಕೊನೆಯದಾಗಿ, ಚೀನಾವಿರೋಧಿ ಭಾವನೆ ಭಾರತದಲ್ಲಿ ದಟ್ಟವಾದಾಗಲೆಲ್ಲಾ ಗಡಿಯಲ್ಲಿ ಸಂಘರ್ಷ ನಡೆದಿರುವುದನ್ನು ಗಮನಿಸಬಹುದು. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಈಚೆಗೆ ಭಾರತ ನೀಡಿರುವ ಕರೆಯು ಚೀನಾದ ಈ ಸಾಹಸಕ್ಕೆ ಕಾರಣವಾಗಿರಬಹುದು.

1962ರ ಚೀನಾದ ಆಕ್ರಮಣಶೀಲತೆಯು ಆ ದೇಶವನ್ನು ಕುರಿತ ಭಾರತದ ನೀತಿಯನ್ನು ಗಂಭೀರವಾಗಿ ಮರು ಪರಿಶೀಲಿಸುವಂತೆ ಮಾಡಿತು ಎಂಬುದನ್ನು ಗಮನಿಸಬೇಕು. ಚೀನಾದ ಉದ್ದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅಂದಿನ ಗೃಹಸಚಿವ ಲಾಲ್‌ ಬಹದ್ದೂರ್‌‌ ಶಾಸ್ತ್ರಿ ಅವರು, ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆಹಲವು ಬಾರಿ ಎಚ್ಚರಿಕೆ ನೀಡಿರುವುದಕ್ಕೆ ಪುರಾವೆಗಳು ಲಭಿಸುತ್ತವೆ. ರಕ್ಷಣಾ ಸಚಿವ ಕೃಷ್ಣ ಮೆನನ್‌ ಅವರನ್ನು (ಯುದ್ಧಾನಂತರ) ಸಂಪುಟದಿಂದ ಕೈಬಿಡುವಂತೆ ನೆಹರೂ ಅವರಿಗೆ ಸಲಹೆ ನೀಡಿದ ಮೊದಲಿಗರಲ್ಲಿ ಶಾಸ್ತ್ರಿ ಒಬ್ಬರು. ಆದರೆ ಈ ಸಲಹೆಯನ್ನು ನೆಹರೂ ಸ್ವೀಕರಿಸಲಿಲ್ಲ. 1964ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರಿ ಅವರು ಆರಂಭದಿಂದಲೇ ‘ಚೀನಾ ಮಾದರಿ’ಯನ್ನು ತಡೆಯಲು ಮುಂದಾದರು. ಪಾಕಿಸ್ತಾನದ ಜತೆಗೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಾಗಲೂ ಚೀನಾದ ಮೇಲೆ ಅವರು ಒಂದು ಕಣ್ಣಿಟ್ಟಿದ್ದರು. ಭಾರತ- ಪಾಕ್‌ ಸಂಘರ್ಷದಲ್ಲಿ ಚೀನಾ ಮಧ್ಯಪ್ರವೇಶ ಮಾಡಬಹುದೆಂಬ ಸಂದೇಹ ಅವರಿಗಿತ್ತು.

ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ತನ್ನ ಅರ್ಥವ್ಯವಸ್ಥೆಯನ್ನೂ ಮುಕ್ತಗೊಳಿಸಿದೆ. ಭಾರತವು ಚೀನಾದಂತೆ ಆಕ್ರಮಣಶೀಲತೆಯನ್ನು ಪ್ರದರ್ಶಿಸದೆ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಬಂದಿದೆ. ಜಾಗತಿಕ ವೇದಿಕೆಗಳಲ್ಲಿ ಮತ್ತು ಪ್ರಮುಖ ರಾಷ್ಟ್ರಗಳ ಮುಂದೆ ತನ್ನ ನಿಲುವನ್ನು ಗಟ್ಟಿಯಾಗಿ ಹೇಳಲು ನಮ್ಮ ರಾಜತಾಂತ್ರಿಕರು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇದು ಭಾರತದ ನಿಲುವಿಗೆ ಸ್ವಲ್ಪಮಟ್ಟಿನಲ್ಲಿ ಅಂತರರಾಷ್ಟ್ರೀಯ ಬೆಂಬಲ ಲಭಿಸುವಂತೆ ಮಾಡಿದೆ.

ಸಂದೀಪ್‌ ಶಾಸ್ತ್ರಿ

ಉಭಯ ರಾಷ್ಟ್ರಗಳ ನಡುವೆ ನಡೆದ ಸಂಘರ್ಷದ ಸ್ವರೂಪವನ್ನು ನೋಡುತ್ತಾ ಬಂದರೆ, ಈ ಬಾರಿಯೂ ಅದೇ ಸ್ವರೂಪದ ಸಂಘರ್ಷ ನಡೆದಿರುವುದು ಗೋಚರಿಸುತ್ತದೆ. ವಾಸ್ತವಗಡಿರೇಖೆಯನ್ನು ಉಲ್ಲಂಘಿಸುವುದು, ಅದರ ಬೆನ್ನಲ್ಲೇ ತನ್ನ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುವುದು ಚೀನಾ ಅನುಸರಿಸಿಕೊಂಡು ಬಂದಿರುವ ತಂತ್ರ. ಈ ಬಾರಿಯೂ ಅಲ್ಲಿನ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯು, ‘ಚೀನಾದ ಸಂಯಮವನ್ನು ತಪ್ಪಾಗಿ ಅರ್ಥೈಸಬೇಡಿ, ಸೊಕ್ಕಿನ ನಡೆ ಬೇಡ’ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ. ಚೀನಾದ ಯೋಜನೆಯನ್ನು ಭಾರತ ಅರ್ಥ ಮಾಡಿಕೊಂಡಿದೆ. ನಮ್ಮ ಸೇನಾಪಡೆಯು ಗಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿರುವಾಗಲೂ ಸಂಯಮವನ್ನು ಕಾಯ್ದುಕೊಂಡು ರಾಜತಾಂತ್ರಿಕ ಹಾದಿಯನ್ನು ತುಳಿಯಲು ಭಾರತ ನಿರ್ಧರಿಸಿದೆ.

ಎರಡೂ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಯಲ್ಲಿರುವ ಭಿನ್ನತೆಯೂ ಈಗ ಸ್ಪಷ್ಟವಾಗಿದೆ. ಚೀನಾದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರ ನಿಯಂತ್ರಣ ಹೊಂದಿದೆ. ಆದ್ದರಿಂದ ಸರ್ಕಾರವು ಬಿತ್ತಲು ಬಯಸುವ, ಆಯ್ದ ಮಾಹಿತಿಯನ್ನು ಮಾತ್ರ ಮಾಧ್ಯಮಗಳು ಬಿತ್ತರಿಸುತ್ತವೆ. ಆದರೆ ಮುಕ್ತ ಮತ್ತು ಪಾರದರ್ಶಕ ವ್ಯವಸ್ಥೆಯೇ ದೀರ್ಘಾವಧಿಯಲ್ಲಿ ಒಳ್ಳೆಯ ಫಲವನ್ನು ನೀಡುತ್ತದೆ ಎಂಬುದನ್ನು ಮರೆಯಬಾರದು.

ಕೋವಿಡ್‌–19ರ ಹರಡುವಿಕೆಯಿಂದ ಜಾಗತಿಕ ಮಟ್ಟದಲ್ಲಿ ಚೀನಾ ಏಕಾಂಗಿಯಾಗುತ್ತಿದೆ. ಚೀನಾದ ಹೂಡಿಕೆ ಹೆಚ್ಚಾಗಿದ್ದ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಲ್ಲೂ ಚೀನಾ ವಿರೋಧಿ ಅಲೆ ಕಾಣಿಸಲಾರಂಭಿಸಿದೆ. ಸೋಂಕಿನ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಲು ವಿಳಂಬ ಮಾಡಿದ್ದು ಸಹ ಜಾಗತಿಕ ಮಟ್ಟದಲ್ಲಿ ಚೀನಾವಿರೋಧಿ ಭಾವನೆ ದಟ್ಟವಾಗಲು ಕಾರಣವಾಗಿದೆ. ಈ ಬೆಳವಣಿಗೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಚೀನಾ ಗಾಲ್ವನ್‌‌ ಕಣಿವೆಯಲ್ಲಿ ತನ್ನ ನೆಚ್ಚಿನ ತಂತ್ರ ಜಾರಿಮಾಡುವ ಸಾಹಸಕ್ಕೆ ಕೈಹಾಕಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT