ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆ ವಿರೋಧಿ ಹೋರಾಟ ವ್ಯಾಪಕ: ಉತ್ತರಪ್ರದೇಶದಲ್ಲಿ ಒಟ್ಟು 15 ಮಂದಿ ಸಾವು

Last Updated 21 ಡಿಸೆಂಬರ್ 2019, 14:46 IST
ಅಕ್ಷರ ಗಾತ್ರ

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಹೋರಾಟ ಭಾರತದಲ್ಲಿ ಶನಿವಾರ ಮತ್ತಷ್ಟು ತೀವ್ರಗೊಂಡಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವಪ್ರತಿಭಟನೆಯಲ್ಲಿ ಈ ವರೆಗೆ 15 ಮಂದಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಖಾನ್‌ಪುರದಲ್ಲಿ ಇಂದುನಡೆದ ಹೋರಾಟ ವಿಕೋಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸ್‌ ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ. ರಾಮ್‌ಪುರದಲ್ಲಿ ಹೋರಾಟಗಾರರು ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಪ್ರತಿಭಟನಾನಿರತರತ್ತ ಅಶೃವಾಯು ಸಿಡಿಸಿದ್ದಾರೆ.

ಉತ್ತರ ಪ್ರದೇಶದ ವಿಧಾನಭವನದಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆ ಕಡಿತ ಮುಂದುವರಿದಿದೆ. ಈವರೆಗೆ 705 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಜಾಮಿಯಾ ವಿವಿಯಲ್ಲಿ ಏಳನೇ ದಿನವೂ ಹೋರಾಟ ಮುಂದುವರಿದಿತ್ತು. ಹಳೆ ದೆಹಲಿಯಲ್ಲಿ ಶುಕ್ರವಾರ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 15 ಮಂದಿಯನ್ನು ಬಂಧಿಸಿದ್ದಾರೆ. ಘರ್ಷಣೆಯಲ್ಲಿ 35 ಮಂದಿ ಗಾಯಗೊಂಡಿದ್ದರು.

ಶುಕ್ರವಾರ ದೆಹಲಿಯ ಜಮಾ ಮಸೀದಿ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ಅವರನ್ನು ಹದಿನೈದು ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಧ್ಯಪ್ರದೇಶದ ಜಭಲ್‌ಪುರದಲ್ಲೂ ಹೋರಾಟಗಳು ನಡೆಯುತ್ತಿದ್ದು, ಅಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಬಿಹಾರದ ಪಟಣದಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಅವರು ಬೃಹತ್‌ ಪ್ರತಿಭಟನೆ ನಡೆಸಿ, ಪೌರತ್ವ ಕಾಯ್ದೆ ವಿರೋಧಿಸಿದರು.

ಟಿಎಂಸಿ ಸಂಸದರಿಂದ ಮೃತರ ಕುಟುಂಬಗಳ ಭೇಟಿ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದವರ ಕುಟುಂಬಗಳನ್ನುಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ನಾಲ್ವರು ಸಂಸದರ ನಿಯೋಗ ಭಾನುವಾರ ಭೇಟಿಯಾಗಿದೆ. ಸಂಸದ ದಿನೇಶ್‌ ತ್ರಿವೇದಿ ಅವರು ನಿಯೋಗದ ನೇತೃತ್ವ ವಹಿಸಿದ್ದಾರೆ.

ಬಂದೂಕಿಗೆ ಬಂದೂಕಿನಿಂದಲೇ ಉತ್ತರ: ಮಂಗಳೂರು ಘಟನೆ ಕುರಿತು ತಮಿಳುನಾಡಿನ ಬಿಜೆಪಿ ನಾಯಕನ ವಿವಾದಿತ ಹೇಳಿಕೆ

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಅನ್ನು ಸಮರ್ಥಿಸಿಕೊಂಡಿರುವ ತಮಿಳುನಾಡಿನ ಬಿಜೆಪಿ ನಾಯಕ ಎಚ್‌. ರಾಜಾ, ‘ನಾವು ಬಂದೂಕುಗಳಿಗೆ ಬಂದೂಕುಗಳ ಮೂಲಕವೇ ಉತ್ತರ ನೀಡುತ್ತೇವೆ. ಅವರೆಲ್ಲರೂ ನೂರಾರು ಮಂದಿಯನ್ನು ಕೊಲ್ಲುವುದರಲ್ಲಿದ್ದರು. ಹೀಗಾಗಿ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ,’ ಎಂದು ರಾಜಾ ಹೇಳಿದ್ದಾರೆ.

ಇದೇ ವೇಳೆ ತಮಿಳುನಾಡಿನ ಚೆನ್ನೈನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಹೋರಾಟಗಳೂ ನಡೆದವು. ಚೆನ್ನೈನ ಎಂಜಿಆರ್‌ ಕೇಂದ್ರ ರೈಲ್ವೇ ನಿಲ್ದಾಣದ ಬಳಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಘರ್ಷಣೆ ಸಂಭವಿಸಿತು. ಪ್ರತಿಭಟನಾಕಾರರು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಂಗಳೂರಿನಲ್ಲಿ ಗೋಲಿಬಾರ್‌ ನಡೆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ಕೇರಳದ ಕೆಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT