ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ವಿರುದ್ಧ ಬಿಜೆಪಿ ಮನಮೋಹನ್‌ ಸಿಂಗ್‌ ಅಸ್ತ್ರ!

Last Updated 19 ಡಿಸೆಂಬರ್ 2019, 10:29 IST
ಅಕ್ಷರ ಗಾತ್ರ

ನವದೆಹಲಿ: ನೆರೆಯ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲೀಂಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಕೇಂದ್ರದ ‘ಪೌರತ್ವ ತಿದ್ದುಪಡಿ ಕಾಯ್ದೆ’ಯ ವಿರುದ್ಧದ ಹೋರಾಟಗಳು ದೇಶವನ್ನೇ ವ್ಯಾಪಿಸುತ್ತಿವೆ. ಕಾಂಗ್ರೆಸ್‌ ಕೂಡ ಹೋರಾಟದ ಮುಂಚೂಣಿಯಲ್ಲಿದೆ. ಇದನ್ನು ಹತ್ತಿಕ್ಕಲು ಬಿಜೆಪಿ ಗುರುವಾರ ಮನಮೋಹನ್‌ ಸಿಂಗ್‌ ಅಸ್ತ್ರ ಪ್ರಯೋಗ ಮಾಡಿದೆ.

ವಲಸಿಗರಿಗೆ ಪೌರತ್ವ ನೀಡುವ ಪ‍್ರಕ್ರಿಯೆಯನ್ನು ಸರಳಗೊಳಿಸುವ ಕುರಿತು 2003ರಲ್ಲಿ ಅಂದಿನ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮನಮೋಹನ್‌ ಸಿಂಗ್‌ ಮಾಡಿದ್ದ ಭಾಷಣದ ವಿಡಿಯೊವನ್ನು ಸದ್ಯ ಸಾಮಾಜಿಕ ತಾಣ ಟ್ವಿಟರ್‌ನಲ್ಲಿಪೋಸ್ಟ್‌ ಮಾಡಿರುವಬಿಜೆಪಿ, ‘ಮನಮೋಹನ್‌ ಸಿಂಗ್‌ ಹೇಳಿದ್ದನ್ನೇಪೌರತ್ವ ತಿದ್ದುಪಡಿ ಕಾಯ್ದೆಯೂ ಮಾಡುತ್ತದೆ,’ ಎಂದು ಟ್ವೀಟ್‌ ಮಾಡಿದೆ. ಈ ಮೂಲಕ ಹೋರಾಟ ನಿರತ ಕಾಂಗ್ರೆಸ್‌ನ ಜಂಘಾಬಲ ಉಡುಗಿಸುವ ಪ್ರಯತ್ನ ಮಾಡಿದೆ.

ಏನು ಹೇಳಿದ್ದರು ಮನಮೋಹನ್‌ ಸಿಂಗ್‌

‘ವಲಸಿಗರ ವಿಚಾರವಾಗಿ ನಾನು ಮಾತನಾಡಲು ಬಯಸುತ್ತೇನೆ. ಭಾರತದ ವಿಭಜನೆ ನಂತರ ಬಾಂಗ್ಲಾದೇಶದಂಥ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗಿದ್ದಾರೆ. ಆಶ್ರಯ ಅರಸಿ ಬರುವ ಇಂಥವರ ಭಾದ್ಯತೆ ನಮ್ಮದಾಗಬೇಕು. ಇಂಥ ನತದೃಷ್ಟರಿಗೆ ಪೌರತ್ವ ನೀಡುವ ಕಡೆಗೆ ನಾವು ಉದಾರವಾಗಿ ನಡೆದುಕೊಳ್ಳಬೇಕು. ಉಪ ಮುಖ್ಯಮಂತ್ರಿ (ಗೃಹ ಖಾತೆ ಒಳಗೊಂಡಂತೆ) ಎಲ್‌.ಕೆ ಅಡ್ವಾಣಿ ಅವರು ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ಸೂಕ್ತ ನೀತಿ ರೂಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ,’ ಎಂದು ರಾಜ್ಯಸಭೆಯಲ್ಲಿ ಹೇಳಿರುವುದು ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿದೆ.

ಈ ವಿಡಿಯೊದೊಂದಿಗೆ ಟ್ವೀಟ್‌ ಮಾಡಿರುವ ಬಿಜೆಪಿ ‘ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವತ್ತ ಭಾರತ ಸರ್ಕಾರ ಉದಾರವಾಗಿ ನಡೆದುಕೊಳ್ಳಬೇಕು ಎಂದು ಮನಮೋಹನ್‌ ಸಿಂಗ್‌ ಅವರು 2003ರಲ್ಲಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮನಮೋಹನ್‌ ಸಿಂಗ್‌ ಅವರು ಅಂದು ಹೇಳಿದಂತೆಯೇ ಮಾಡುತ್ತದೆ,’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT