ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತರಬೇತಿಯಲ್ಲಿ ‘ಸಂತಸದ ತರಗತಿ’

ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಇಂಗಿತ
Last Updated 31 ಜುಲೈ 2019, 18:52 IST
ಅಕ್ಷರ ಗಾತ್ರ

ನವದೆಹಲಿ: ‘ನಾವೆಲ್ಲರೂ ಸಂತೋಷದಿಂದ ಇದ್ದರೆ ಯಾವುದೇ ವಿವಾದ–ವ್ಯಾಜ್ಯಗಳು ಇರುವುದಿಲ್ಲ. ಹೀಗಾಗಿ ಕಾನೂನು ತರಬೇತಿ ಕೇಂದ್ರಗಳಲ್ಲಿ ಈ ಸಂಬಂಧ ತರಗತಿಗಳನ್ನು ಆರಂಭಿಸಬೇಕು’ ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಬುಧವಾರ ಇಂಗಿತ ವ್ಯಕ್ತಪಡಿಸಿದರು.

ದೆಹಲಿ ಸರ್ಕಾರ ಅಧೀನದ ಶಾಲೆಗಳಲ್ಲಿ ಆರಂಭಿಸಲಾಗಿರುವ ‘ಸಂತಸದ ತರಗತಿಗಳ’ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ತಾಲ್‌ಕಟೋರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಾರ್ಷಿಕೋತ್ಸವದ ಅಂಗವಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳ ಕಾಲ ‘ಸಂತಸದ ಉತ್ಸವ’ವನ್ನು ಸಹ ಹಮ್ಮಿಕೊಳ್ಳಲಾಗಿದೆ.

‘ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಇಂಥ ತರಗತಿಗಳನ್ನು ಆರಂಭಿಸಿರುವುದು ಅದ್ಭುತ ಆಲೋಚನೆಯಾಗಿದೆ. ಇದೇ ಮಾದರಿಯಲ್ಲಿಯೇ ಕಾನೂನು ತರಬೇತಿ ಕೇಂದ್ರಗಳಲ್ಲಿಯೂ ತರಗತಿಗಳನ್ನು ಆರಂಭಿಸಬೇಕು. ಜನರು ಸಂತಸದಿಂದ ಇರದ ಕಾರಣದಿಂದಲೇ ವಿವಾದ, ವ್ಯಾಜ್ಯಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲಾ ನ್ಯಾಯದಾನವೂ ವಿಳಂಬವಾಗಿ ಜನರ ಸಂತೋಷ ಮತ್ತಷ್ಟು ಹಾಳಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸಂತೋಷದ ಸೂಚ್ಯಂಕದಲ್ಲಿ ಕಳೆದ ವರ್ಷ ನಮ್ಮ ದೇಶ 133ನೇ ಸ್ಥಾನದಿಂದ 140ನೇ ಸ್ಥಾನಕ್ಕೆ ಕುಸಿದಿದೆ. ಸಂತೋಷದಿಂದ ಹೇಗೆ ಇರಬೇಕು ಎಂಬ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳಿಗೆ 12 ದೇಶಗಳು ಚಾಲನೆ ನೀಡಿವೆ’ ಎಂದೂ ಅವರು ಹೇಳಿದರು.

ಭೇಟಿ: ‘ಸಂತಸದ ತರಗತಿ’ಗಳ ಕುರಿತಂತೆ ಮಾಹಿತಿ ಪಡೆಯುವ ಸಲುವಾಗಿ, ಮಣಿಪುರ, ಮಧ್ಯಪ್ರದೇಶ, ಪುದುಚೇರಿ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳ ಶಿಕ್ಷಣ ಇಲಾಖೆ ಅಧಿಕಾರಿಗಳು ದೆಹಲಿ ಸರ್ಕಾರಿ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದರು. ತಮ್ಮ ರಾಜ್ಯಗಳ ಶಾಲೆಗಳಲ್ಲಿ ಇದೇ ಮಾದರಿಯಲ್ಲಿ ತರಗತಿ ಆರಂಭಿಸುವ ಸಲುವಾಗಿ ದೆಹಲಿ ಸರ್ಕಾರದೊಂದಿಗೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಈ ರಾಜ್ಯಗಳ ಅಧಿಕಾರಿಗಳು ಹೇಳಿದ್ದಾರೆ.

‘ಸಂತಸದ ಪಠ್ಯಕ್ರಮ’ ಹೀಗಿದೆ
ಮಗುವಿನ ಸರ್ವಾಂಗೀಣ ವಿಕಾಸವನ್ನು ಗಮನದಲ್ಲಿಟ್ಟುಕೊಂಡು ಈ ಪಠ್ಯಕ್ರಮವನ್ನು ರೂಪಿಸಲಾಗಿದೆ. ನರ್ಸರಿಯಿಂದ 6ನೇ ತರಗತಿವರೆಗೆ ಈ ಪಠ್ಯಕ್ರಮದಂತೆ ತರಬೇತಿ ನೀಡಲಾಗುತ್ತದೆ. ಧ್ಯಾನ, ನೈತಿಕ ಮೌಲ್ಯಗಳ ಕುರಿತು ತಿಳಿವಳಿಕೆ ನೀಡುವುದು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಅಭ್ಯಾಸಗಳಲ್ಲಿ ವಿದ್ಯಾರ್ಥಿಗಳು ತೊಡಗುವಂತೆ ಮಾಡುವುದು ಈ ಪಠ್ಯಕ್ರಮದಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT