ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದ ಹಾದಿ ಹಿಡಿದ ಹಾನಗಲ್ ವ್ಯಾಪಾರಿಗಳು

ರಮ್ಜಾನ್ ಮಾಸದಲ್ಲಿ ಹಣ್ಣಿನ ವ್ಯಾಪಾರ ಕುಸಿತ
Last Updated 9 ಜೂನ್ 2018, 11:00 IST
ಅಕ್ಷರ ಗಾತ್ರ

ಹಾನಗಲ್: ರಮ್ಜಾನ್‌ ತಿಂಗಳ ಉಪವಾಸದ ದಿನಗಳಲ್ಲಿ ಕಂಡು ಬರುತ್ತಿದ್ದ ಹಣ್ಣುಗಳ ವ್ಯಾಪಾರದ ಭರಾಟೆ ಈ ಬಾರಿ ಇಲ್ಲದಂತಾಗಿದೆ. ಪಟ್ಟಣದಲ್ಲಿ ಹಣ್ಣಿನ ವ್ಯಾಪಾರದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ರಮ್ಜಾನ್‌ ಸಮಯದಲ್ಲಿ ಯಥೇಚ್ಛವಾಗಿ ಬಿಕರಿಯಾಗುತ್ತಿದ್ದ ಖರ್ಜೂರ್, ಸೇಬು, ಪೇರಲೆ, ದ್ರಾಕ್ಷಿ, ಸಪೋಟ, ಕಿತ್ತಳೆ ಮತ್ತು ಮಾವಿನ ಹಣ್ಣುಗಳ ವ್ಯಾಪಾರ ಈ ಬಾರಿ ಚುರುಕಾಗಿಲ್ಲ. ಅಂಗಡಿಗಳು ಖಾಲಿ ಹೊಡೆಯುತ್ತಿವೆ. ದರ ಏರಿಕೆ ಇದಕ್ಕೆ ಕಾರಣ ಎಂದು ಸಹ ಹೇಳುವಂತಿಲ್ಲ.

‘ಹಣ್ಣು ಸೇವನೆಯಿಂದ ನಿಫಾ ವೈರಸ್‌ ಹರಡುವ ಭೀತಿ ಮತ್ತು ತಾಲ್ಲೂಕಿನಲ್ಲಿ ಮಾವಿನ ಹಣ್ಣುಗಳ ಭರ್ಜರಿ ಇಳುವರಿ ಒಟ್ಟಾರೆ ಬೇರೆ ಹಣ್ಣುಗಳ ವ್ಯಾಪಾರ ತಗ್ಗಲು ಪ್ರಮುಖ ಕಾರಣ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಹಾನಗಲ್‌ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಭತ್ತದ ಗದ್ದೆಗಳು ಇತ್ತೀಚಿನ ವರ್ಷಗಳಲ್ಲಿ ಮಾವು ತೋಟಗಳಾಗಿ ಪರಿವರ್ತನೆಯಾಗಿವೆ. ಹೀಗಾಗಿ ಈ ಮಾವಿನ ಋತುವಿನಲ್ಲಿ ಹೇರಳವಾಗಿ ಬೆಳೆ ಬಂದಿದೆ. ಬೆಲೆ ಕುಸಿದಿರುವ ಕಾರಣ ಮಾವು ಬೆಳೆಗಾರರು ತಮ್ಮ ಪರಿಚಿತರು, ಬಂಧುಗಳಿಗೆ ಮಾವು ವಿತರಿಸುತ್ತಿದ್ದಾರೆ. ತೋಟದಿಂದ ನೇರವಾಗಿ ಮನೆಗೆ ಬರುವ ಮಾವು ಮಾಗಿಸಿಕೊಂಡು ಜನರು ಸೇವಿಸುತ್ತಿದ್ದಾರೆ. ಹೀಗಾಗಿ ಜನರು ಹಣ್ಣು ಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ’ ಎಂಬುದು ಹಣ್ಣಿನ ವ್ಯಾಪಾರಿ ಆಸೀಫ್‌ ಸಂಗೂರ ಅಭಿಮತ.

‘ರಮ್ಜಾನ್‌ ಪ್ರಯುಕ್ತ ಹಣ್ಣುಗಳ ಖರೀದಿಗೆ ಮೊದಲೇ ಬೇಡಿಕೆ ಸಲ್ಲಿಸಿದ್ದೆವು. ಆದರೆ ನಿರೀಕ್ಷೆಯಂತೆ ಹಣ್ಣುಗಳ ಮಾರಾಟದಲ್ಲಿ ಏರಿಕೆಯಾಗದ ಕಾರಣ ನಷ್ಟ ಅನುಭವಿಸುವಂತಾಗಿದೆ’ ಎಂದು ವ್ಯಾಪಾರಿ ಗೌಸ್‌ ಬಾಳಂಬೀಡ ಅಳಲು ತೋಡಿಕೊಂಡರು.

ತರೇಹವಾರಿ ತಳಿಯ ಕಲ್ಲಂಗಡಿ ಹಣ್ಣುಗಳ ಋತು ಈಗ ಕೊನೆಯ ಹಂತದಲ್ಲಿದೆ. ಪಟ್ಟಣದಲ್ಲಿನ ಕಲ್ಲಂಗಡಿ ಹಣ್ಣುಗಳ ಮಳಿಗೆಗಳು ಬಾಗಿಲು ಮುಚ್ಚಿಕೊಂಡಿವೆ. ನಾಗರಪಂಚಮಿ ಹಬ್ಬದ ಸಮಯದಲ್ಲಿ ಹಣ್ಣು ವ್ಯಾಪಾರ ಚೇತರಿಕೆ ಕಾಣುವ ಆಶಯವನ್ನು ಹಣ್ಣಿನ ವ್ಯಾಪಾರಸ್ಥರು ಹೊಂದಿದ್ದಾರೆ.

ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT