ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲೂ ಸುಲೇಮಾನಿ ಸಂಚು: ಟ್ರಂಪ್

ಇರಾನ್ ಕಮಾಂಡರ್ ಹತ್ಯೆ ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ; ಇರಾನ್‌ನಿಂದ ಪ್ರತೀಕಾರದ ಮಾತು
Last Updated 4 ಜನವರಿ 2020, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಭಾರತ ಹಾಗೂ ಬ್ರಿಟನ್‌ನಲ್ಲಿ ಹಿಂದೆ ನಡೆದಿದ್ದ ಭಯೋತ್ಪಾದಕ ದಾಳಿಗಳ ಹಿಂದೆ ಶುಕ್ರವಾರ ಹತರಾದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕಮಾಂಡರ್ ಖಾಸಿಂ ಸುಲೇಮಾನಿಯ ಸಂಚು ಇತ್ತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಸುಲೇಮಾನಿ ಹತ್ಯೆಯು ಯುದ್ಧವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯೇ ಹೊರತು ಯುದ್ಧದ ಆರಂಭವಲ್ಲ ಎಂದು’ ಅವರು ಪ್ರತಿಪಾದಿಸಿದ್ದಾರೆ.

‘ದೆಹಲಿ, ಲಂಡನ್‌ ಸೇರಿದಂತೆ ಹಲವೆಡೆ ಸುಲೇಮಾನಿ ಎಸಗಿದ ಕ್ರೌರ್ಯಗಳಿಗೆ ಬಲಿಯಾದವರಿಗೆ ನಾವು ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಎಷ್ಟೋ ಜೀವಗಳನ್ನು ಉಳಿಸಬಹುದಿತ್ತು. ಅಮಾಯಕರ ಜೀವ ತೆಗೆಯುತ್ತಿದ್ದ ಸುಲೇಮಾನಿ ಒಬ್ಬ ರೋಗಗ್ರಸ್ತ ಮನಸ್ಥಿತಿಯ ವ್ಯಕ್ತಿ’ ಎಂದು ಟ್ರಂಪ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಮಧ್ಯಪ್ರಾಚ್ಯದಲ್ಲಿ ಕಳೆದ 20 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಸುಲೇಮಾನಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರು ಸರ್ಕಾರದ ಕಿರುಕುಳದಿಂದ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮಿಡಿದ ಸಾವಿರಾರು ಜನ:

ಬಗ್ದಾದ್: ಸುಲೇಮಾನಿ ಹತ್ಯೆ ಖಂಡಿಸಿ ಇರಾಕ್‌ನ ಬಗ್ದಾದ್‌ನಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನಾಗರಿಕರು, ‘ಅಮೆರಿಕಕ್ಕೆ ಸಾವಾಗಲಿ’ ಎಂಬ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಮೆರವಣಿಗೆಯಲ್ಲಿ ಪ್ರಧಾನಿ ಅದೆಲ್ ಅಬ್ದೆಲ್, ಷಿಯಾ ವಿದ್ವಾಂಸ ಅಮ್ಮರ್ ಅಲ್ ಹಕೀಮ್, ಮಾಜಿ ಪ್ರಧಾನಿ ನುರಿ ಅಲ್ ಮಲಿಕಿ,ಇರಾಕ್‌ನ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು. ಕಪ್ಪು ಬಟ್ಟೆ ಧರಿಸಿದ್ದ ನಾಗರಿಕರು ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಒತ್ತಾಯಿಸಿದರು.

ಪ್ರತೀಕಾರ:ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಪರಮೋಚ್ಚ ನಾಯಕ ಅಯಾತ್‌ಉಲ್ಲ ಅಲಿ ಖೊಮೇನಿ ಶಪಥ ಮಾಡಿದ್ದಾರೆ. ಸೇನಾಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರು ಸಹ ಪ್ರತೀಕಾರದ ಪಣ ತೊಟ್ಟಿದ್ದಾರೆ.

3,500 ಸೇನಾ ತುಕಡಿ ನಿಯೋಜನೆ:ಇರಾಕ್‌ನ ಪಕ್ಕದಲ್ಲಿರುವ ಕುವೈತ್‌ನಲ್ಲಿ 3,500 ಸೇನಾ ತುಕಡಿಗಳನ್ನು ನಿಯೋಜಿಸುವುದಾಗಿ ಅಮೆರಿಕ ತಿಳಿಸಿದೆ. ಜಿಹಾದಿಗಳ ವಿರುದ್ಧ ಹೋರಾಡಲು ಸೈನಿಕರಿಗೆ ತರಬೇತಿ ನೀಡುವ ಸಲುವಾಗಿ ಅಮೆರಿಕವು ನಿಯೋಜಿಸಿದ್ದ 5,200 ತುಕಡಿಗಳು ಈಗಾಗಲೇ ಇರಾಕ್‌ನಲ್ಲಿ ಇವೆ.

ನ್ಯಾಟೊ ತರಬೇತಿ ಸ್ಥಗಿತ:ಸುಲೇಮಾನಿ ಹತ್ಯೆಯ ಬಳಿಕಇರಾಕ್‌ನಲ್ಲಿ ತರಬೇತಿ ಕಾರ್ಯಕ್ರಮವನ್ನು ನ್ಯಾಟೊ ಸ್ಥಗಿತಗೊಳಿಸಿದೆ ಎಂದು ವಕ್ತಾರ ಡೈಲನ್ ವೈಟ್ ಶನಿವಾರ ತಿಳಿಸಿದ್ದಾರೆ.

ಇರಾಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಹಿಮ್ಮೆಟ್ಟಿಸುವ ಸಲುವಾಗಿ ದೇಶದ ಸೇನಾಪಡೆಗಳಿಗೆ ತರಬೇತಿ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ಇದರನ್ವಯ ನ್ಯಾಟೊ ಪಡೆಯ ಯೋಧರು ಇರಾಕ್‌ ಸೇನೆಗೆ ತರಬೇತಿ ನೀಡುತ್ತಿದ್ದರು. ‘ನ್ಯಾಟೊ ಅಭಿಯಾನ ಮುಂದುವರಿಯಲಿದೆ ಆದರೆ, ತರಬೇತಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

***

* ಸುಲೇಮಾನಿ ತವರು ಕೆರ್ಮನ್‌ನಲ್ಲಿ ಮಂಗಳವಾರ ಅಂತ್ಯಕ್ರಿಯೆ

* ಸುಲೇಮಾನಿ ಉತ್ತರಾಧಿಕಾರಿಯಾಗಿ ಇಸ್ಮಾಯಿಲ್ ಖಾನಿ

* ಇರಾನ್, ಇರಾಕ್ ಪ್ರವಾಸ ಮಾಡದಂತೆ ನಾಗರಿಕರಿಗೆ ಬ್ರಿಟನ್ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT