ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕಳಪೆ ಟೆಸ್ಟ್ ಕಿಟ್ ಮೂಲಕವೂ ಹಣ ಮಾಡಲು ಹೊರಟ ಚೀನಾ?

Last Updated 22 ಏಪ್ರಿಲ್ 2020, 3:39 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ ರ್‍ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳು ದೋಷಪೂರಿತವಾಗಿವೆ ಎಂಬ ಆರೋಪ ಕೇಳಿಬಂದಿದೆ. ರಾಜಸ್ಥಾನ ಹಾಗೂ‍‍ಪಶ್ಚಿಮ ಬಂಗಾಳ ರಾಜ್ಯಗಳು ದೂರು ನೀಡಿದ್ದು, ಎರಡು ದಿನದ ಮಟ್ಟಿಗೆ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಮಂಗಳವಾರ ಸೂಚನೆ ನೀಡಿದೆ.

‘ದೆಹಲಿಯಿಂದ ವಿವಿಧ ರಾಜ್ಯಗಳಿಗೆ ಕಳುಹಿಸುವ ಮುನ್ನ ಪರಿಶೀಲನೆ ನಡೆಸಿದಾಗ, ಫಲಿತಾಂಶದ ನಿಖರತೆ ಶೇ 71ರಷ್ಟಿತ್ತು. ಈಗ ನಿಖರತೆಯು ಶೇ 6ರಿಂದ ಶೇ 71ರ ವ್ಯಾಪ್ತಿಯಲ್ಲಿದೆ. ಇಷ್ಟೊಂದು ವ್ಯತ್ಯಾಸ ಇರಬಾರದು. ಐಸಿಎಂಆರ್ ತಂಡವು ಕಿಟ್‌ಗಳನ್ನು ಪರಿಶೀಲಿಸಿ, ಬಳಕೆ ಕುರಿತಂತೆ ಮಾರ್ಗಸೂಚಿ ಪ್ರಕಟಿಸಲಿದೆ’ ಎಂದು ಮಂಡಳಿಯ ಡಾ. ರಮಣ ಗಂಗಾಖೇಡ್ಕರ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತಡೆ: ರಾಜ್ಯ ಸರ್ಕಾರದ ಪ್ರಯೋಗಾಲಯಗಳಿಗೆ ಪೂರೈಕೆ ಮಾಡಿದ್ದ ದೋಷಪೂರಿತ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್‌ಗಳನ್ನು ಪಶ್ಚಿಮ ಬಂಗಾಳದಲ್ಲಿ ಹಿಂಪಡೆಯಲಾಗಿದೆ. ಐಸಿಎಂಆರ್‌ನ ರಾಜ್ಯದ ನೋಡಲ್ ಏಜೆನ್ಸಿ ಎನ್‌ಐಸಿಎಡಿ ಪೂರೈಸಿದ್ದ ಕಿಟ್‌ಗಳು ನಿಖರ ತಪಾಸಣಾ ವರದಿ ನೀಡುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಿಟ್‌ಗಳು ಕಳಪೆ ಗುಣಮಟ್ಟದ್ದಾಗಿರುವ ಸಾಧ್ಯತೆಯಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಐಸಿಎಂಆರ್‌–ಎನ್‌ಐಸಿಇಡಿ ತಿಳಿಸಿವೆ.

ರಾಜಸ್ಥಾನದಲ್ಲಿ ಪರೀಕ್ಷೆಗೆ ಅಡ್ಡಿ:ತಪ್ಪು ಫಲಿತಾಂಶ ನೀಡುತ್ತಿರುವ ಚೀನಾ ನಿರ್ಮಿತ ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳ ಬಳಕೆ ಸ್ಥಗಿತಗೊಳಿಸುವುದಾಗಿ ರಾಜಸ್ಥಾನ ಸರ್ಕಾರ ಮಂಗಳವಾರ ತಿಳಿಸಿದೆ.

‘ಪಾಸಿಟಿವ್ ಇದ್ದ 168 ಜನರನ್ನು ಈ ಕಿಟ್‌ಗಳ ಮೂಲಕ ಪರೀಕ್ಷಿಸಿದಾಗ ನೆಗೆಟಿವ್ ಬಂದಿದೆ. ತಪಾಸಣೆಯಲ್ಲಿ ಶೇ 90ರಷ್ಟು ನಿಖರತೆ ನಿರೀಕ್ಷಿಸಲಾಗಿತ್ತು. ಆದರೆ ಈ ಪರೀಕ್ಷೆಯ ನಿಖರತೆ ಶೇ 5.4ರಷ್ಟು ಮಾತ್ರ ಇದೆ’ ಎಂದು ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.

ಚೀನಾ ನಿರ್ಮಿತ 30 ಸಾವಿರ ಕಿಟ್‌ಗಳನ್ನು ಐಸಿಎಂಆರ್ ಮೂಲಕ ರಾಜಸ್ಥಾನಕ್ಕೆ ಉಚಿತವಾಗಿ ನೀಡಲಾಗಿದೆ. ಮತ್ತೆ 10 ಸಾವಿರ ಕಿಟ್‌ಗಳನ್ನು ತಲಾ ₹540ರಂತೆ ಖರೀದಿಸಲಾಗಿದೆ.

ಹಲವು ದೇಶಗಳಿಂದ ದೂರು

ಚೀನಾ ನಿರ್ಮಿತ ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳಲ್ಲಿ ದೋಷ ಕಂಡುಬಂದಿದೆ ಎಂದು ಬ್ರಿಟನ್, ಸ್ಪೇನ್, ಟರ್ಕಿ, ಸ್ಲೊವಾಕಿಯಾ, ಜೆಕ್ ರಿಪಬ್ಲಿಕ್ ಸೇರಿ ಹಲವು ದೇಶಗಳು ದೂರಿವೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ. ಈ ಪಟ್ಟಿ ಬೆಳೆಯುತ್ತಲೇ ಇದ್ದು, ಇದಕ್ಕೆ ಭಾರತ ಹೊಸ ಸೇರ್ಪಡೆ. ಚೀನಾದ ಕಂಪನಿಗಳಿಂದ ಉಪಕರಣಗಳನ್ನುಖರೀದಿ ಮಾಡಲು ಸರ್ಕಾರಗಳು ಕೋಟಿಗಟ್ಟಲೆ ಹಣ ವ್ಯಯಿಸಿದ್ದರೂ ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಜ್ಞಾನಿಗಳು ಆಕ್ಷೇಪಿಸಿದ್ದಾರೆ. ಆದರೆದೋಷಪೂರಿತ ಉತ್ಪನ್ನ ಪೂರೈಸಿದ ಕಂಪನಿಗಳ ವಿಚಾರದಲ್ಲಿ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ

* ದೋಷಪೂರಿತ ಕಿಟ್‌ಗಳನ್ನು ಪೂರೈಸಿದ ಚೀನಾದ ಕಂಪನಿಗಳ ಜತೆಗಿನ ಖರೀದಿಯನ್ನು ಸ್ಪೇನ್ ರದ್ದುಗೊಳಿಸಿದೆ.ಉತ್ಪನ್ನ ಪೂರೈಸಿದ ಶೆನ್‌ಜೆನ್ ಬಯೊಈಸಿ ಬಯೋಟೆಕ್ನಾಲಜಿ ಕಂಪನಿಯು ರಾಷ್ಟ್ರೀಯ ಮಾನ್ಯತೆ ಪಡೆದಿಲ್ಲ

* ಬ್ರಿಟನ್ 35 ಲಕ್ಷ ಆ್ಯಂಟಿ ಬಾಡಿ ಟೆಸ್ಟ್ ಪರಿಕರಗಳನ್ನು ಚೀನಾದ ಕಂಪನಿಗಳಿಂದ ಖರೀದಿಸಿದ್ದು, ಅವು ದೋಷಯುಕ್ತವಾಗಿವೆ

* ಚೀನಾದ ತಪಾಸಣಾ ಉಪಕರಣಗಳ ಫಲಿತಾಂಶದ ನಿಖರತೆಯ ದರ ಅತ್ಯಂತ ಕಡಿಮೆ ಇರುವ ಕಾರಣಕ್ಕೆ ದಕ್ಷಿಣ ಕೊರಿಯಾದಿಂದ ಸಾಮಗ್ರಿ ಆಮದು ಮಾಡಿಕೊಳ್ಳಲು ಮಲೇಷ್ಯಾ ಮುಂದಾಗಿದೆ

* ಅಸಮರ್ಪಕ ಫಿಲ್ಟರ್ ಹಾಗೂ ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಚೀನಾದ 6 ಲಕ್ಷ ಫೇಸ್ ಮಾಸ್ಕ್‌ಗಳನ್ನು ನೆದರ್ಲೆಂಡ್ಸ್ ಕಳೆದ ವಾರ ವಾಪಸ್ ಕಳುಹಿಸಿದೆ

* ಚೀನಾದಿಂದ ಆಮದಾದ ವೈಯಕ್ತಿಯ ರಕ್ಷಣಾ ಸಾಧನಗಳನ್ನು (ಪಿಪಿಇ) ಫಿನ್ಲೆಂಡ್ ಮಂಗಳವಾರ ಪರೀಕ್ಷಿಸಿತು. ಈ ಸಾಧನ ಆಸ್ಪತ್ರೆಯ ಬಳಕೆಗೆ ಹೊಂದಿಕೊಳ್ಳುವುದಿಲ್ಲ ಎಂಬುದು ಕಂಡುಬಂದಿದೆ

ನಕಲಿ ಹಾವಳಿ

ಕಳಪೆ ಗುಣಮಟ್ಟದ ಉತ್ಪನ್ನಗಳು ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರ ಉಂಟು ಮಾಡುತ್ತಲೇ ಇವೆ.ಏಪ್ರಿಲ್ 6ರಂದು ಮಾಸ್ಕ್, ಗೌನ್, ಟೆಸ್ಟಿಂಗ್ ಕಿಟ್, ಥರ್ಮಾಮೀಟರ್ ಸೇರಿದಂತೆ 1.1 ಕೋಟಿ ಅನಧಿಕೃತ ವೈದ್ಯಕೀಯ ಉಪಕರಣಗಳನ್ನು ಜಪ್ತಿ ಮಾಡಿದ್ದೇವೆ ಎಂದು ಚೀನಾದ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದರು.ಒಂದು ಸಂಸ್ಥೆಯ ಪರವಾನಗಿಯ ಅಡಿಯಲ್ಲಿ ಚೀನಾದ ಮಾರಾಟಗಾರರು ಸಾಕಷ್ಟು ಉತ್ಪನ್ನಗಳನ್ನು ರಫ್ತು ಮಾಡುವುದು ಇಲ್ಲಿ ಸರ್ವೇ ಸಾಮಾನ್ಯ. ಉತ್ಪನ್ನಗಳು ಎರಡು, ಮೂರು ಹಾಗೂ ನಾಲ್ಕನೇ ದರ್ಜೆಯ ಕಾರ್ಖಾನೆಗಳಿಂದ ಪೂರೈಕೆಯಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT