ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆ

Last Updated 10 ಆಗಸ್ಟ್ 2019, 19:20 IST
ಅಕ್ಷರ ಗಾತ್ರ

ನವದೆಹಲಿ: ಸಂಕಷ್ಟದಲ್ಲಿರುವ ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನು ಮತ್ತೆ ಸೋನಿಯಾ ಗಾಂಧಿ ಅವರ ‘ಕೈ’ಗೆ ವಹಿಸಲು ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಶನಿವಾರ ರಾತ್ರಿ ಪ್ರಮುಖ ನಿರ್ಧಾರ ಕೈಗೊಂಡಿದೆ.

ಎರಡು ಸಲ ಸಭೆ ಸೇರಿದ ಬಳಿಕ ಪಕ್ಷದ ಸಂಸದರು, ವಿವಿಧ ರಾಜ್ಯಗಳ ಶಾಸಕಶಾಂಗ ಪಕ್ಷ ನಾಯಕರು, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿ ಈ ನಿರ್ಣಯ ಪ್ರಕಟಿಸಿದೆ.

1999ರ ಮುನ್ನ ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಮ್‌ ಕೇಸರಿ ಅವರ ಕಾಲದಲ್ಲಿ ಮುಳುಗುವ ಭೀತಿಯಲ್ಲಿದ್ದ ಕಾಂಗ್ರೆಸ್‌ ಹಡಗನ್ನು ‘ಚುಕ್ಕಾಣಿ’ ಹಿಡಿಯುವ ಮೂಲಕ ಅಪಾಯದಿಂದ ಪಾರುಮಾಡಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಸೋನಿಯಾ ಗಾಂಧಿ, ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಲೋಕಸಭೆ ಚುನಾವಣೆ ನಂತರ ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತ್ಯಜಿಸಲು ನಿರ್ಧರಿಸಿದ್ದ ರಾಹುಲ್‌ ಗಾಂಧಿ ತಮ್ಮ ರಾಜೀನಾಮೆ ನಿರ್ಧಾರ ಬದಲಿಸಬೇಕು ಎಂಬ ಒಕ್ಕೊರಲಿನ ಮನವಿಯನ್ನು ಸಿಡಬ್ಲ್ಯೂಸಿಯ ಎಲ್ಲ ಸದಸ್ಯರೂ ಸಲ್ಲಿಸಿದರಾದರೂ ಅದಕ್ಕೆ ಒಪ್ಪಿಗೆ ದೊರೆಯದ್ದರಿಂದ ಅಳಿವು– ಉಳಿವಿನ ಪ್ರಶ್ನೆಯನ್ನು ಎದುರಿಸುತ್ತಿರುವ ಪಕ್ಷಕ್ಕೆ ಸೋನಿಯಾ ಮುಖಂಡತ್ವವೇ ‘ಮದ್ದು’ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕೈಗೊಳ್ಳಲಾದ ಮೂರು ನಿರ್ಣಯಗಳಲ್ಲಿ ಕಾಶ್ಮೀರದ ಬೆಳವಣಿಗೆಯ ವಿಷಯವೂ ಪ್ರಮುಖವಾಗಿದೆ.

ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವ ಕುರಿತು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ತೀರ್ಮಾನ, ಕಣಿವೆ ಪ್ರದೇಶದಲ್ಲಿ ಉಂಟಾಗಿರುವ ಬೆಳವಣಿಗೆ ಹಾಗೂ ಮುಖಂಡರ ಬಂಧನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷವು ತೀವ್ರ ಕಳವಳ ವ್ಯಕ್ತಪಡಿಸಿದೆ, ಅಲ್ಲದೆ, ಈ ವಿಚಾರವಾಗಿ ವಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುವುದರೊಂದಿಗೆ ಪಾರದರ್ಶಕ ತೀರ್ಮಾನ ಕೈಗೊಳ್ಳುವಂತೆ ಕೋರಲಾಗಿದೆ.

ರಾಹುಲ್‌ಗೇ ಬೆಂಬಲ: ‘ಬೇರೆಯವರು ಚುಕ್ಕಾಣಿ ಹಿಡಿದರೆ ಪಕ್ಷಕ್ಕೆ ಭವಿಷ್ಯವಿಲ್ಲ. ಹಾಗಾಗಿ ಅಧ್ಯಕ್ಷ ಸ್ಥಾನದಲ್ಲಿ ರಾಹುಲ್ ಗಾಂಧಿ ಅವರೇ ಮುಂದುವರಿಯಲಿ’ ಎಂದು ಬೆಳಿಗ್ಗೆ ನಡೆದ ಸಿಡಬ್ಲ್ಯೂಸಿ ಸದಸ್ಯರು ಒಕ್ಕೊರಲಿನ ಮನವಿ ಮಾಡಿದ್ದರು.

ಈ ಪ್ರಸ್ತಾವ ಮಂಡಿಸಿದ ಕೋಲಾರದ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ‘ಗಾಂಧಿ ಕುಟುಂಬ ಸದಸ್ಯರಲ್ಲದೆ ಬೇರೆಯವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ’ ಎಂದು ಪ್ರತಿಪಾದಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸ್ಥಿತಿಗೆ ಮತದಾರರ ತಿರಸ್ಕಾರ ಅಥವಾ ಮುಖಂಡರ ನಡವಳಿಕೆ ಕಾರಣವಲ್ಲ. ಬಾಲಾಕೋಟ್‌ ಮೇಲಿನ ವೈಮಾನಿಕ ದಾಳಿಯನ್ನೇ ಭಾವನಾತ್ಮಕ ವಿಷಯವನ್ನಾಗಿ ಪ್ರಚಾರ ಮಾಡಿದ ಬಿಜೆಪಿಗೆ ಜನರು ಮತ ನೀಡಿದರು ಎಂದು ಅವರು ಹೇಳಿದ್ದರು.

‘ರಾಹುಲ್ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು’ ಎಂದು ಕರ್ನಾಟಕದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕೋರಿದ್ದರು.

ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರೂ ಇದಕ್ಕೆ ಬೆಂಬಲವಾಗಿ ಮಾತನಾಡಿದ್ದರಲ್ಲದೆ, ‘ಬಿಜೆಪಿ ವಿರುದ್ಧದ ಸೈದ್ಧಾಂತಿಕ ಹೋರಾಟ ಮುಂದುವರಿಸಲು ಪಕ್ಷಕ್ಕೆ ನಿಮ್ಮ ನಾಯಕತ್ವದ ಅಗತ್ಯವಿದೆ’ ಎಂದು ಒತ್ತಿ ಹೇಳಿದ್ದರು.

ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಸುಶೀಲ್‌ಕುಮಾರ್‌ ಸಿಂಧೆ, ಯುವಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್‌ ಪೈಲಟ್‌ ಅವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದು ಪಕ್ಷದ ಕೆಲವು ಮುಖಂಡರು ಈ ಮೊದಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪಕ್ಷದ ಅಧ್ಯಕ್ಷರಾಗಿ ರಾಹುಲ್ ತೋರಿದ ಅಸಾಧಾರಣ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿರುವ ಕಾರ್ಯಕಾರಣಿ ಸಮಿತಿ, ರಾಹುಲ್ ಅವರು ಸಮರ್ಪಣಾ ಭಾವದೊಂದಿಗೆ ಪಕ್ಷವನ್ನು ಮುನ್ನಡೆಸಿದ್ದಾರೆ ಎಂದು ಹೇಳಿದೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಆಗಾಧ ಸಾಮರ್ಥ್ಯ ತೋರಿದ ರಾಹುಲ್‌, ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಶೋಷಿತರನ್ನು ಧೈರ್ಯದಿಂದ ಬೆಂಬಲಿಸುವ ಮೂಲಕ ಸಮರ್ಥ ನಾಯಕತ್ವ ಪ್ರದರ್ಶಿಸಿದ್ದಾರೆ. ಆದರೆ, ಇತ್ತೀಚಿನ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಅವರ ನಾಯಕತ್ವ ಸೀಮಿತವಲ್ಲ. ಯುವ ಪೀಳಿಗೆಗೆ ಮುಕ್ತ ಅವಕಾಶ ಕಲ್ಪಿಸಿದ್ದ ಅವರು ಕಾರ್ಯಕರ್ತರಿಗೆ ಸ್ಪೂರ್ತಿಯಯಾಗಿದ್ದರು ಎಂದು ಸಮಿತಿ ಕೈಗೊಂಡಿರುವ ಮತ್ತೊಂದು ನಿರ್ಣಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT