ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ತಲಾ 2 ಕಡೆ ಅಧಿಕಾರ

Last Updated 12 ಫೆಬ್ರುವರಿ 2020, 4:23 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ 167 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿದೆ.

4 ನಗರಸಭೆ ಹಾಗೂ ತಲಾ ಒಂದು ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಒಟ್ಟು 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಎರಡು ಕಡೆ ಅಧಿಕಾರ ಹಿಡಿದಿವೆ. ಉಳಿದ ಎರಡು ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎಂ.ಟಿ.ಬಿ.ನಾಗರಾಜ್ ಪ್ರತಿನಿಧಿಸುತ್ತಿದ್ದ ಹೊಸಕೋಟೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಈ ಸಲ ಕನಿಷ್ಠ ಒಂದು ವಾರ್ಡ್‌ನಲ್ಲೂ ಗೆಲ್ಲಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಬಹುತೇಕ ಕಾರ್ಯಕರ್ತರು ನಾಗರಾಜ್ ಅವರನ್ನು ಹಿಂಬಾಲಿಸಿದ್ದು, ಈ ಗೆಲುವಿಗೆ ಕಾರಣವಾಗಿದೆ. ಶಾಸಕ ಶರತ್ ಬಚ್ಚೇಗೌಡ ತಮ್ಮ ಬಣದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 8 ಮಂದಿಯನ್ನು ಗೆಲ್ಲಿಸಿಕೊಂಡಿದ್ದಾರೆ.

ಡಾ.ಕೆ.ಸುಧಾಕರ್ ಬಿಜೆಪಿಗೆ ಬಂದು ಸಚಿವರಾಗಿದ್ದರೂ ತಮ್ಮ ಸ್ವಕ್ಷೇತ್ರ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದೆ. ಆದರೆ ಬಿಜೆಪಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ.

ಹುಣಸೂರು ನಗರಸಭೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಎಚ್.ವಿಶ್ವನಾಥ್‌ ಅವರಿಗೆ ಸಾಧ್ಯವಾಗಿಲ್ಲ. ಕೇವಲ ಮೂರು ಸ್ಥಾನಗಳಲ್ಲಷ್ಟೇ ಪಕ್ಷದ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರೂ, ಅಧಿಕಾರ ಹಿಡಿಯುವಷ್ಟು ಬಹುಮತ ಸಿಕ್ಕಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಕ್ಷೇತರ ಸದಸ್ಯರ ನೆರವಿನೊಂದಿಗೆ ಕಾಂಗ್ರೆಸ್ ಅಧಿಕಾರ ಧಕ್ಕಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದೆ.ಜೆಡಿಎಸ್‌ ಅಧಿಕಾರ ಕಳೆದುಕೊಂಡಿದೆ.

ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಉಳಿಸಿಕೊಂಡಿದೆ.ಸಿಂಧಗಿ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಚುಕ್ಕಾಣಿ ಹಿಡಿದಿದೆ.

ಕಾರ್ಮಿಕನಿಗೆ ಒಲಿದ ಜಯ

ಹುಣಸೂರು: ನಗರಸಭೆ 1ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಟ್ಟಡ ಕಾರ್ಮಿಕ ಸಿ.ದೇವರಾಜ್‌ ಅವರು ಪುರಸಭೆ ಮಾಜಿ ಅಧ್ಯಕ್ಷೆ ಕಾಂಗ್ರೆಸ್‌ನ ಮಂಜುಳಾ ಚೆನ್ನಬಸಪ್ಪ ಅವರನ್ನು ಸೋಲಿಸಿದ್ದಾರೆ.

‘ಆಕಸ್ಮಿಕವಾಗಿ ಸ್ಪರ್ಧಿಸಿ ಗೆದ್ದಿದ್ದೇನೆ. ವೃತ್ತಿ ಬಿಡುವುದಿಲ್ಲ. ಹಣವಿದ್ದರೆ ಮಾತ್ರ ರಾಜಕಾರಣ ಎಂಬ ಮಾತನ್ನು ಮತದಾರರು ಸುಳ್ಳು ಮಾಡಿದ್ದಾರೆ’ ಎಂದು ದೇವರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT