ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಬನ್ನಿ: ಕಾಂಗ್ರೆಸ್‌ಗೆ ಅಮಿತ್ ಶಾ ಸವಾಲು

ಚೀನಾದ ಅತಿಕ್ರಮಣ: ರಾಹುಲ್‌ ಹೇಳಿಕೆಗಳ ಬಗ್ಗೆ ಕೇಂದ್ರ ಗೃಹ ಸಚಿವರ ಆಕ್ರೋಶ
Last Updated 28 ಜೂನ್ 2020, 20:08 IST
ಅಕ್ಷರ ಗಾತ್ರ

ನವದೆಹಲಿ:‘ರಾಹುಲ್ ಗಾಂಧಿ ಅವರು, ಚೀನಾ ಅತಿಕ್ರಮಣದ ಬಗ್ಗೆ ಯಾವುದೇ ಅರಿವಿಲ್ಲದೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳಿಂದ ಪಾಕಿಸ್ತಾನ ಮತ್ತು ಚೀನಾ ಸಂತುಷ್ಟವಾಗುತ್ತಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.1962ರಿಂದ ಚೀನಾ ಅತಿಕ್ರಮಣದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸೋಣ, ಬನ್ನಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

ಭಾರತ–ಚೀನಾ ಗಡಿ ಸಂಘರ್ಷದ ಬಗ್ಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಶಾ ಈ ಮಾತು ಹೇಳಿದ್ದಾರೆ. ‘ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರೆಂಡರ್ ಮೋದಿ’ ಎಂದು ಕರೆದ ಬಗ್ಗೆ ಕೇಳಿದ ಪ್ರಶ್ನೆಗೆ ಶಾ ಈ ರೀತಿ ಉತ್ತರಿಸಿದ್ದಾರೆ.

‘ಸಂಸತ್ತಿನಲ್ಲಿ ಈ ಬಗ್ಗೆ ದೀರ್ಘವಾದ ಚರ್ಚೆ ನಡೆಸೋಣ ಬನ್ನಿ. 1962ರ ನಂತರದ ಎಲ್ಲಾ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸೋಣ, ಚರ್ಚೆ ನಡೆಸಲು ಯಾರೂ ಹೆದರಿ ಕುಳಿತಿಲ್ಲ. ಸಂಘರ್ಷದ ವಿಚಾರದಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ. ಗಡಿಯಲ್ಲಿ ಸೈನಿಕರು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ, ಪಾಕಿಸ್ತಾನ ಮತ್ತು ಚೀನಾಗೆ ಖುಷಿಯಾಗುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು’ ಎಂದು ಶಾ ಹೇಳಿದ್ದಾರೆ.

‘ಈ ವಿಚಾರಗಳನ್ನು ಎದುರಿಸಲು ಸರ್ಕಾರ ಸಮರ್ಥವಾಗಿದೆ. ಆದರೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರ ಹೇಳಿಕೆಗಳನ್ನು ದೇಶದ ವಿರುದ್ಧ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಆ ಪಕ್ಷ ಮತ್ತು ಪಕ್ಷದ ನಾಯಕರು ಅರ್ಥಮಾಡಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೋವಿಡ್–19 ಮತ್ತು ಚೀನಾ ವಿರುದ್ಧದ ಯುದ್ಧವನ್ನು ಭಾರತ ಗೆಲ್ಲಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯಲ್ಲಿ ಪ್ರಜಾಸತ್ತಾತ್ಮಕ ವಾತಾವರಣ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ನಮ್ಮಲ್ಲಿ ಎಲ್‌.ಕೆ.ಅಡ್ವಾಣಿ ನಂತರ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಮತ್ತ ರಾಜನಾಥ್ ಸಿಂಗ್, ನಾನು (ಅಮಿತ್ ಶಾ) ಮತ್ತು ಈಗ ಜೆ.ಪಿ.ನಡ್ಡಾ ಪಕ್ಷದ ಅಧ್ಯಕ್ಷರಾಗಿದ್ದಾರೆ. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಅವರ ಕುಟುಂಬದ ಸದಸ್ಯರ ಹೊರತಾಗಿ ಬೇರೆ ಯಾರಾದರೂ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರಾ’ ಎಂದು ಶಾ ಪ್ರಶ್ನಿಸಿದ್ದಾರೆ.

‘ತುರ್ತುಪರಿಸ್ಥಿತಿಯು, ನಮ್ಮ ಪ್ರಜಾಪ್ರಭುತ್ವದ ಬೇರುಗಳ ಮೇಲೆ ನಡೆಸಿದ ದಾಳಿ ಎಂದು ಜನರು ನೆನಪಿಸಿಕೊಳ್ಳುತ್ತಾರೆ. ಈ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಇದು ಯಾವುದೋ ಒಂದು ಪಕ್ಷದ ವಿಚಾರವಲ್ಲ. ಬದಲಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ದಾಳಿ’ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೇಕೆ ಚೀನಾ ನಂಟು: ಕಾಂಗ್ರೆಸ್‌ ಪ್ರಶ್ನೆ
ನವದೆಹಲಿ (ಪಿಟಿಐ):
ನರೇಂದ್ರ ಮೋದಿ ಅವರು, ಪ್ರಧಾನಿ ಹುದ್ದೆಗೆ ಬಂದ ನಂತರ ಆರು ವರ್ಷದಲ್ಲಿ 18 ಭಾರಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆ ಸಭೆ ನಡೆಸಿದ್ದಾರೆ. ಹಿಂದಿನ 13 ವರ್ಷದಲ್ಲಿ ಭಾರತದ ಯಾವ ಪಕ್ಷದ ನಾಯಕರೂ ಚೀನಾ ಜತೆ ನಡೆಸದಷ್ಟು ಸಭೆ ಮತ್ತು ಭೇಟಿಗಳನ್ನು ಬಿಜೆಪಿ ನಾಯಕರು ನಡೆಸಿದ್ದಾರೆ. ಚೀನಾ ಜತೆ ಬಿಜೆಪಿ ನಾಯಕರಿಗೆ ಯಾಕಿಷ್ಟು ನಂಟು ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.

‘ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಜನಾಥ್ ಸಿಂಗ್ ಎರಡು ಬಾರಿ (2007 ಮತ್ತು 2008) ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಜತೆ ಸಭೆ ನಡೆಸಿದ್ದಾರೆ. ನಿತಿನ್ ಗಡ್ಕರಿ 2011ರಲ್ಲಿ ಐದು ಬಾರಿ ಚೀನಾಗೆ ಭೇಟಿ ನೀಡಿದ್ದಾರೆ. 2014ರಲ್ಲಿ ಅಮಿತ್ ಶಾ ಅವರು ಸಿಪಿಸಿ ‘ಪಾರ್ಟಿ ಸ್ಕೂಲ್‌’ಗೆ ಶಾಸಕರ ನಿಯೋಗವನ್ನು ಕಳುಹಿಸಿದ್ದರು. ಭಾರತದ ಬೇರೆ ಯಾವ ಪಕ್ಷವೂ ಸಿಪಿಸಿ ಜತೆ ಇಷ್ಟು ನಿಕಟವಾದ ಸಂಬಂಧ ಹೊಂದಿಲ್ಲ’ ಎಂದು ಸಿಂಘ್ವಿ ಹೇಳಿದ್ದಾರೆ.

‘ಪಿ.ಎಂ.ಕೇರ್ಸ್‌ ನಿಧಿಗೆ ಚೀನಾದ ಹಲವು ಕಂಪನಿಗಳು ದೇಣಿಗೆ ನೀಡಿವೆ. ಚೀನಾ ನಮ್ಮ ನೆಲವನ್ನು ಅತಿಕ್ರಮಿಸುತ್ತಿದ್ದರೂ, ಮೋದಿ ಅವರು ಚೀನಾದ ಕಂಪನಿಗಳಿಂದ ದೇಣಿಗೆ ಸ್ವೀಕರಿಸಿದ್ದು ಏಕೆ? ಈಗ ಮೋದಿ ಅವರು ಚೀನಾವನ್ನು ‘ಅಕ್ರಮಣಕಾರ’ ಎಂದು ಕರೆಯದೇ ಇರುವುದು ಏಕೆ’ ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.

ಸಿಪಿಸಿ–ಬಿಜೆಪಿ ಸಭೆ, ಟ್ವಿಟರ್‌ನಲ್ಲಿ ಆಕ್ರೋಶ
ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಜತೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಟೀಕಿಸುತ್ತಿರುವ ಸಂದರ್ಭದಲ್ಲೇ, 2019ರಲ್ಲಿ ಬಿಜೆಪಿ ಸಹ ಸಿಪಿಸಿ ಜತೆ ಸಭೆ ನಡೆಸಿದ್ದ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಸಿಪಿಸಿ ಜತೆ ಬಿಜೆಪಿ ಸಭೆ ನಡೆಸಿದ್ದರ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

2019ರ ಆಗಸ್ಟ್ 27ರಂದು ಬಿಜೆಪಿ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಸಭೆ ನಡೆಸಿದ್ದರು. ‘ಈ ಸಭೆಯಲ್ಲಿ ಚೀನಾದ ಕಮ್ಸುನಿಸ್ಟ್ ಪಕ್ಷದ ಇತಿಹಾಸ, ಸಂಘಟನಾ ವ್ಯವಸ್ಥೆ ಮತ್ತು ಅಭಿವೃದ್ಧಿಗಾಗಿ ಜನರನ್ನು ಕಲೆಹಾಕುವ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಟ್ವೀಟ್ ಮಾಡಿದ್ದರು.

ಈಗ ಈ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದಿದೆ. ಸಿಪಿಸಿ ಮತ್ತು ಬಿಜೆಪಿಗೆ ಏನು ಸಂಬಂಧ? ಬಿಜೆಪಿಯೂ ಚೀನಾದ ಏಜೆಂಟ್ ಆಗಿದೆಯೇ ಎಂದು ಟ್ವಿಟರ್‌ನಲ್ಲಿ ಕೆಲವರು ಪ್ರಶ್ನಿಸುತ್ತಿದ್ದಾರೆ.

‘ಹೀಗಾಗಿಯೇ ಬಿಜೆಪಿ, ಸಿಪಿಸಿಯತ್ತ ಬೆರಳುಮಾಡಿ ತೋರಿಸುತ್ತಿಲ್ಲ. ಅವರೂ ನಿಮ್ಮತ್ತ ಬೆರಳು ಮಾಡಿ ತೋರಿಸುತ್ತಿಲ್ಲ’ ಎಂದುಎಸ್‌. ರಾಯ್ ಚೌಧರಿ (@SRoyChowdhury) ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿ, ಚೀನಾದ ನಿಜವಾದ ಏಜೆಂಟ್. ಬಿಜೆಪಿಯ ನಿರಂಕುಶವಾದಿ ಚಿಂತನೆಗಳಿಗೂ, ಸಿಪಿಸಿಯ ಚಿಂತನೆಗಳಿಗೂ ಹೊಂದಾಣಿಕೆಯಾಗುತ್ತದೆ. ಸಿಪಿಸಿಯಿಂದ ಇವನ್ನೆಲ್ಲಾ ಕಲಿಯಲು ಬಿಜೆಪಿ ಸಾಕಷ್ಟು ವ್ಯಯಿಸಿದೆ’ ಎಂದು ವಿನಯ್ ಕುಮಾರ್ ಡೋಕಾನಿಯಾ (@VinayDokania) ಎಂಬುವವರು ಟ್ವೀಟ್‌ನಲ್ಲಿ ಮಾಡಿದ್ದಾರೆ.

*
ರಾಹುಲ್ ಗಾಂಧಿಗೆ ಸಲಹೆ ನೀಡುವ ಕೆಲಸ ನನ್ನದಲ್ಲ. ಆ ಕೆಲಸವನ್ನು ಕಾಂಗ್ರೆಸ್‌ ಮಾಡಬೇಕು. ಕೋವಿಡ್‌ ಹೋರಾಟದಲ್ಲಿ ನಾವು ಮುಂದಿದ್ದೇವೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT