ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಲೆಗಿಂತ ಮೊದಲೇ ಹಸಿವಿನಿಂದ ಸಾಯುತ್ತೇವೆ: ಕಾರ್ಮಿಕರ ಅಳಲು

ಎಷ್ಟೇ ಕಷ್ಟವಾದರೂ ಸರಿಯೇ ನಮ್ಮ ಊರನ್ನು ತಲುಪಬೇಕು
Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೊರೊನಾ ವೈರಸ್‌ ಸೋಂಕಿನಿಂದಾಗಿ ಘೋಷಿಸಿರುವ ಲಾಕ್‌ಡೌನ್‌ನಿಂದ ಬೇರೆ ರಾಜ್ಯಗಳಿಂದ ಇಲ್ಲಿಗೆ ದುಡಿಯಲು ಬಂದಿರುವ ಕಾರ್ಮಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ತಲೆ ಮೇಲೆ ಸೂರಿಲ್ಲ. ತುತ್ತಿನ ಚೀಲ ತುಂಬಿಕೊಳ್ಳಲು ಯಾವುದೇ ರೀತಿಯಲ್ಲೂ ಅವಕಾಶ ಇಲ್ಲ. ಇನ್ನೊಂದೆಡೆ ಅವರಿಗೆ ಕೋವಿಡ್‌ನಿಂದಾಗುವ ಅನಾಹುತದ ಅರಿವೂ ಇದ್ದಂತಿಲ್ಲ. ಹೀಗಾಗಿಯೇ ಕೆಲವರು, ‘ನಾವು ಇಲ್ಲಿಯೇ ಇದ್ದರೆ, ಯಾವುದಾದರೂ ಕಾಯಿಲೆ ಬಂದು ನರಳಿ ಸಾಯುವ ಮುನ್ನವೇ ಹಸಿವು ನಮ್ಮನ್ನು ಕೊಲ್ಲವುದು ಖಚಿತ’ ಎಂದು ಅಸಹಾಯಕತೆ ತುಂಬಿದ ಆಕ್ರೋಶದ ನುಡಿಗಳನ್ನಾಡುತ್ತಾರೆ.

‘ಹಸಿವಿನಿಂದ ನಾವು ಸತ್ತರೆ ಇಲ್ಲಿ ನಮ್ಮ ಅಂತ್ಯಕ್ರಿಯೆ ಮಾಡಲು ಸಹ ಯಾರೂ ಇಲ್ಲ. ಯಾವುದೋ ವೈರಸ್‌ ಹರಡುತ್ತಿದ್ದು ಭಾರಿ ಅಪಾಯ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ನನಗೆ ಅರ್ಥವಾಗದು. ಒಬ್ಬ ತಾಯಿಯಾಗಿ ನನಗೆ ನನ್ನ ಮಕ್ಕಳ ಹೊಟ್ಟೆ ತುಂಬಿಸುವುದು ಹೇಗೆ ಎಂಬುದೇ ಚಿಂತೆಯಾಗಿದೆ’ ಎಂದು ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯಿಂದ ಬಂದಿರುವ ಕಾರ್ಮಿಕ ಮಹಿಳೆ ಸಾವಿತ್ರಿ ಅಲವತ್ತುಕೊಳ್ಳುತ್ತಾರೆ.

ದೆಹಲಿಯ ರಜೌರಿ ಗಾರ್ಡನ್‌ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಸಾವಿತ್ರಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ, 400 ಕಿ.ಮೀ. ದೂರದ ತನ್ನೂರಿನತ್ತ ಹೆಜ್ಜೆ ಹಾಕಿದ್ದಾರೆ. ಮಥುರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ಆಕೆ, ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿ, ‘ದುಡಿಯಲು ಇಲ್ಲಿಗೆ ಬಂದಿರುವ ಎಲ್ಲರ ಸ್ಥಿತಿಯೂ ಇದೇ ರೀತಿ ಇದೆ. ಎಷ್ಟೇ ಕಷ್ಟವಾದರೂ ಸರಿಯೇ ನಮ್ಮ ಊರನ್ನು ತಲುಪಬೇಕು ಎಂಬುದೇ ಎಲ್ಲರ ಗುರಿ’ ಎಂದರು.

ಇದು ಸಾವಿತ್ರಿ ಎಂಬ ಮಹಿಳೆ ಮಾತ್ರ ಎದುರಿಸುತ್ತಿರುವ ಸಂಕಷ್ಟವಲ್ಲ. ದುಡಿಮೆ ಅರಸಿ ಇಲ್ಲಿಗೆ ಬಂದಿರುವ ಲಕ್ಷಾಂತರ ಜನ ಕೂಲಿಕಾರ್ಮಿಕರ ಗೋಳು ಸಹ ಇದೇ ಆಗಿದೆ.

ತಮ್ಮೂರಿನತ್ತ ಮುಖ ಮಾಡಿರುವ ಕಾರ್ಮಿಕರಿಗಾಗಿ ದೆಹಲಿ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಬಸ್‌ ವ್ಯವಸ್ಥೆ ಮಾಡಿವೆ. ಬಸ್‌ಗಳು ತುಂಬಿ, ಅವುಗಳ ಚಾವಣಿ ಮೇಲೂ ಕುಳಿತು ಪ್ರಯಾಣಿಸುವವರ ಸಂಖ್ಯೆಯೇ ದೊಡ್ಡದು. ಹೀಗಾಗಿ ಬಹುತೇಕ ಜನರು ಹೇಗಾದರೂ ಸರಿಯೇ ಊರು ತಲುಪಬೇಕು ಎಂಬ ಕಾರಣಕ್ಕೆ ನಡೆದುಕೊಂಡೇ ಹೋಗುತ್ತಿದ್ದಾರೆ.

‘ನಾನು ಯಾವ ದಿನ ನನ್ನ ಊರು ತಲುಪುವೆ ಎಂದು ಗೊತ್ತಿಲ್ಲ. ನನಗೆ ಇಲ್ಲಿ ಸಾಯಲು ಇಷ್ಟವಿಲ್ಲ. ಇನ್ನು ಊರಿಗೆ ಹೋಗುವುದು ಬಿಟ್ಟು ಬೇರೆ ಆಯ್ಕೆ ಇಲ್ಲ. ಈಗ ಕೆಲಸವೂ ಇಲ್ಲ. ಊರಿಗೆ ಹೋಗಿ ಕೃಷಿ ಮಾಡಬೇಕು ಎಂದು ನಿಶ್ಚಯಿಸಿದ್ದೇನೆ. ನನ್ನ ಅದೃಷ್ಟ ಚೆನ್ನಾಗಿದ್ದರೆ ನಾನು ಬದುಕುತ್ತೇನೆ. ಬದುಕು ಕಟ್ಟಿಕೊಳ್ಳುತ್ತೇನೆ’ ಎಂದು ಅಶೋಕ್‌ (25) ಹೇಳುತ್ತಾರೆ.

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯವರಾದ ಅಶೋಕ್‌, ಕಟ್ಟಡ ನಿರ್ಮಾಣ ಕಾರ್ಮಿಕ. ಇಲ್ಲಿನ ಬದರ್‌ಪುರ ಸರಹದ್ದಿನ ಇಸ್ಲಾಯಿಲ್‌ಪುರದಲ್ಲಿ ವಾಸ ಮಾಡುತ್ತಿದ್ದರು.

ಊರಿಗೆ ಹೋಗುವ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುತ್ತಿರುವ ಮಹಿಳೆಯೊಬ್ಬರು ಬಿಸಿಲಿನಿಂದ ಬಾಯಾರಿದ ಮಗುವಿಗೆ ನೀರು ಕುಡಿಸುತ್ತಿದ್ದರು –ಪಿಟಿಐ ಚಿತ್ರ

ಉನ್ನತ ಮಟ್ಟದ ಸಮಿತಿ ರಚನೆ
ನವದೆಹಲಿ (ಪಿಟಿಐ): ಕೋವಿಡ್‌–19ನಿಂದ ಪಾರಾಗಲು ಈಗ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೆ, ಈ ಅವಧಿ ಮುಗಿದ ನಂತರ ಎಲ್ಲ ಸ್ತರಗಳಲ್ಲಿಯೂ ದೇಶದಲ್ಲಿ ಸಾಮಾನ್ಯಸ್ಥಿತಿ ಸಾಧಿಸುವ ಸಲುವಾಗಿ ಪ್ರಧಾನ ಮಂತ್ರಿ ಕಚೇರಿಯು (ಪಿಎಂಒ) 10 ಉನ್ನತಮಟ್ಟದ ಸಮಿತಿಗಳನ್ನು ಭಾನುವಾರ ರಚನೆ ಮಾಡಿದೆ.

ದೇಶದ ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವುದು, ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವುದು, ಜನರ ಪರದಾಟವನ್ನು ಎಷ್ಟು ಸಾಧ್ಯವೋ ಅಷ್ಟು ಶೀಘ್ರ ನಿವಾರಿಸುವುದು ಸೇರಿದಂತೆ ಹಲವಾರು ಉದ್ದೇಶಗಳನ್ನು ಸಾಧಿಸಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ದಿಟ್ಟ ಕ್ರಮಗಳನ್ನು ತಿಳಿಸುವ ಹೊಣೆಯನ್ನು ಈ ಸಮಿತಿಗಳಿಗೆ ವಹಿಸಲಾಗಿದೆ ಎಂದು ಪಿಎಂಒ ಮೂಲಗಳು ತಿಳಿಸಿವೆ.

ಈ ಸಮಿತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿವೆ. ‘ಆರ್ಥಿಕ ಮತ್ತು ಕಲ್ಯಾಣ’ ಸಮಿತಿಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಮುಖ್ಯಸ್ಥರಾಗಿದ್ದಾರೆ. ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ಮತ್ತು ಪರಿಸರ ಸಚಿವಾಲಯದ ಕಾರ್ಯದರ್ಶಿ ಸಿ.ಕೆ.ಮಿಶ್ರಾ ನೇತೃತ್ವದ ಸಮಿತಿಯು, ತುರ್ತು ವೈದ್ಯಕೀಯ ಸೇವೆ, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳ ಅಬಾಧಿತ ಪೂರೈಕೆ, ಆಸ್ಪತ್ರೆಗಳು ಸನ್ನದ್ಧ ಸ್ಥಿತಿಯಲ್ಲಿರುವುದರ ಮೇಲ್ವಿಚಾರಣೆ ನಡೆಸಲಿದೆ ಎಂದೂ ಇವೇ ಮೂಲಗಳು ತಿಳಿಸಿವೆ.

ಪ್ರಧಾನಿಗೆ ಭಾರತೀಯ ವಿದ್ಯಾರ್ಥಿಗಳ ಮನವಿ
ಲಂಡನ್‌ (ಪಿಟಿಐ): ‘ಇಂಗ್ಲೆಡ್‌ನಲ್ಲಿ ಅತಂತ್ರರಾಗಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ದೇಶಕ್ಕೆ ಮರಳಲು ಪ್ರಯಾಣಕ್ಕೆ ವಿಮಾನದ ವ್ಯವಸ್ಥೆ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸುಮಾರು 380 ಭಾರತೀಯ ವಿದ್ಯಾರ್ಥಿಗಳು ಪಾಸ್‌ಪೋರ್ಟ್‌ ವಿವರಗಳೊಂದಿಗೆ ಪಟ್ಟಿಯನ್ನು ರೂಪಿಸಿದ್ದು, ಏಕಧ್ವನಿಯೊಂದಿಗೆ ತಮ್ಮ ರಕ್ಷಣೆಗೆ ಮುಂದಾಗಬೇಕು ಭಾರತ ಸರ್ಕಾರಕ್ಕೆ ಕೋರಿದ್ದಾರೆ. ಇವರಲ್ಲಿ ಕೇರಳ ಮೂಲದ ಎಂಜಿನಿಯರುಗಳೂ ಸೇರಿದ್ದಾರೆ.

ಭಾರತೀಯರು ಜೋಧಪುರಕ್ಕೆ: ಕೊರೊನಾ ವೈರಸ್‌ನಿಂದಾಗಿ ಈಚೆಗೆ ಇರಾನ್‌ನಿಂದ ನವದೆಹಲಿಗೆ ಸ್ಥಳಾಂತರಿಸಲಾಗಿದ್ದ 275 ಮಂದಿ ಭಾರತೀಯರ ತಂಡ ಭಾನುವಾರ ಬೆಳಿಗ್ಗೆ ರಾಜಸ್ಥಾನದ ಜೋಧಪುರಕ್ಕೆ ಬಂದಿಳಿಯಿತು.

ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಯಿತು. ನಂತರ ಅವರನ್ನು ಜೋಧಪುರದ ಸೇನಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಅವರನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT